ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಾಡಾನೆ ದಾಳಿ, ನಲುಗಿದ ರೈತ

ಮಲೆನಾಡಿನಲ್ಲಿ ಕಗ್ಗಂಟಾಗಿರುವ ವನ್ಯಪ್ರಾಣಿ-– ಮಾನವ ಸಂಘರ್ಷ
Last Updated 17 ಆಗಸ್ಟ್ 2022, 5:09 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.

ಹೊಸ್ಕೆರೆ, ಭೈರಾಪುರ, ಮೇಕನ ಗದ್ದೆ, ಕೋಗಿಲೆ, ಚೇಗು, ಕುಂದೂರು, ದರ್ಶನ, ತಳವಾರ, ಬೆಳಗೋಡು, ಬೆಟ್ಟಗೆರೆ, ಕೊಟ್ರಕೆರೆ, ಗುತ್ತಿ, ದೇವರ ಮನೆ ಸುತ್ತಮುತ್ತಲ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿದ್ದು, ಮಳೆಗಾಲ ಪ್ರಾರಂಭ ವಾದೊಡನೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳು ವುದೇ ರೈತರಿಗೆ ಸವಾಲಾಗುತ್ತಿದೆ. ‘ರಾತ್ರಿಯಾಗುತ್ತಿದ್ದಂತೆ ಮನೆ ಬಾಗಿಲಿಗೆ ಬರುವ ಕಾಡಾನೆಗಳು ಆಹಾರಕ್ಕಾಗಿ ಅಲೆಯುವುದರಿಂದ ಬೆಳೆದ ಬೆಳೆಯೆ ಲ್ಲವೂ ನಾಶವಾಗಿ ಸಂಕಷ್ಟ ಎದುರಿಸು ವಂತಾಗಿದೆ’ ಎಂಬುದು ರೈತರ ಅಳಲು.

ಕಾಡಾನೆ ದಾಳಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೂ ಅಡ್ಡಿಯಾಗತೊಡಗಿದ್ದು, ಕಾರ್ಮಿಕರು ಕಾಫಿ ತೋಟಗಳಿಗೆ ಬರಲು ಹಿಂದೇಟು ಹಾಕುವುದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ಗುತ್ತಿ ಗ್ರಾಮದಲ್ಲಿ ಹಾಗೂ ಈ ಬಾರಿ ಹಾರಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದು, ಕಾಡಾನೆ ದಾಳಿಯ ಭೀತಿ ಇಮ್ಮಡಿಸಿದೆ.

‘ಬಹಳ ಹಿಂದಿನಿಂದಲೂ ಕಾಡಾನೆಗಳು ಗ್ರಾಮಕ್ಕೆ ಬರುತ್ತಿದ್ದವು. ಬಂದ ಕಾಡಾನೆಗಳು ನಾಲ್ಕೈದು ದಿನಗಳಲ್ಲಿ ಅರಣ್ಯದತ್ತ ತೆರಳುತ್ತಿದ್ದವು. ಆದರೆ ಈಗ ಪ್ರತಿ ದಿನ ಬರ ತೊಡಗಿವೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಹಗಲಿನಲ್ಲೂ ಕಾಣಸಿಗುವುದರಿಂದ ಎಲ್ಲೆಡೆ ಭಯದ ವಾತಾವರಣ ಸೃಷ್ಟಿ ಯಾಗುತ್ತಿದೆ. ಕಾಡಾನೆ ದಾಳಿಗೆ ಹೆದರಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಕಾಫಿ ತೋಟಗಳಿಗೆ ದಾಳಿ ಮಾಡಿ ಕಾಫಿ ಗಿಡ, ಕಾಳು ಮೆಣಸನ್ನು ನಾಶ ಮಾಡುತ್ತಿರುವುದರಿಂದ ಹಲ ವಾರು ವರ್ಷಗಳಿಂದ ಮಕ್ಕಳಂತೆ ಸಾಕಿದ ಗಿಡಗಳನ್ನು ಕಳೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಅಶ್ವತ್ಥ್‌.

‘ಅರಣ್ಯದಲ್ಲಿ ಕಾಡಾನೆಗಳಿಗೆ ಮೇವಿನ ಕೊರತೆ ಆಗುತ್ತಿರುವುದರಿಂದ ಬಾಳೆ, ಅಡಿಕೆ, ತೆಂಗು, ಬೈನೆ ಮರಗಳನ್ನು ಹುಡುಕಿಕೊಂಡು ಗ್ರಾಮಗಳತ್ತ ಬರುತ್ತಿರಬಹುದು. ಇಂದು ಕಾಡಾನೆ ದಾಳಿಗೆ ಹೆದರಿ ಕಾಫಿ ತೋಟಗಳಲ್ಲಿ ಹಲಸಿನ ಬಡುಕುಗಳನ್ನೇ ನಾಶ ಮಾಡಲಾಗುತ್ತಿದೆ. ಅರಣ್ಯ ಇಲಾಖೆ, ಸಂಘ–ಸಂಸ್ಥೆಗಳು ಸಾಮೂಹಿಕವಾಗಿ ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಹಣ್ಣು, ಹಂಪಲಿನ ಬೀಜಗಳನ್ನು ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಬೇಕು. ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು. ಇದರಿಂದ ಭವಿಷ್ಯದಲ್ಲಾದರೂ ವನ್ಯಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಸಿಗುವಂತಾದರೆ ಅವುಗಳ ದಾಳಿಯನ್ನು ನೈಸರ್ಗಿಕವಾಗಿ ತಡೆಯಬಹುದು’ ಎನ್ನು ತ್ತಾರೆ ಪರಿಸರಾಸಕ್ತ ಆನಂದ್ ಹೊಸಳ್ಳಿ.

ಮಲೆನಾಡಿನಲ್ಲಿ ಮಾನವ ವನ್ಯಪ್ರಾಣಿ ಗಳ ಸಂಘರ್ಷವನ್ನು ತಡೆಯಲು ತುರ್ತು ಕ್ರಮ ಅಗತ್ಯವಾಗಿದ್ದು, ಸರ್ಕಾರ, ಸಂಘ–ಸಂಸ್ಥೆಗಳು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT