ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಕುಟುಂಬ ರಾಜಕಾರಣ ಮೊದಲು ಕೊನೆಗಾಣಿಸಿ: ಭೋಜೇಗೌಡ

Last Updated 19 ಏಪ್ರಿಲ್ 2019, 11:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಬೇಕೇ ಅಥವಾ ಬೇಡವೇ ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಈ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರಿಗೆ ನೈತಿಕ ಹಕ್ಕು ಇಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ವಕ್ತಾರ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಶುಕ್ರವಾರ ಹೇಳಿದರು.

ದೇವೇಗೌಡರ ಕುಟುಂಬ ರಾಜಕಾರಣ ಕೊನೆಗಾಣಿಸಿ ಎಂದು ಮೋದಿ ಹೇಳಿದ್ದಾರೆ. ಬಿಜೆಪಿಯಲ್ಲಿ ಬಿ.ಎಸ್‌.ಯುಡಿಯೂರಪ್ಪ, ಅವರ ಪುತ್ರ ಆಯ್ಕೆಯಾಗಿಲ್ಲವೇ? ಯಡಿಯೂರಪ್ಪ ಜತೆಯಲ್ಲಿರುವ ಶೋಭಾಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು– ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಏಕೆ ನೀಡಿದಿರಿ? ನಿಮ್ಮ ಪಕ್ಷದಲ್ಲಿನ ಕುಟುಂಬ ರಾಜಕಾರಣವನ್ನು ಮೊದಲು ಕೊನೆಗಾಣಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ತಾಕೀತು ಮಾಡಿದರು.

ದೇವೇಗೌಡರ ಕುಟುಂಬ ರಾಜಕಾರಣದ ತೀರ್ಮಾನ ಜನರಿಗೆ ಬಿಟ್ಟಿದ್ದು. ಮೋದಿ ಅವರಂಥ ನೂರು ಮಂದಿ ಬಂದರೂ ಅದಕ್ಕೆ ಅಂತ್ಯ ಹಾಡಲು ಸಾಧ್ಯ ಇಲ್ಲ ಎಂದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಳುಮುಂಜಿ, ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಅಭದ್ರ ಸರ್ಕಾರ ಎಂದು ಮೋದಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಅವರು ಭಾವನಾತ್ಮಕ ಜೀವಿ. ಒಟ್ಟು ಕುಟುಂಬದ ಮನುಷ್ಯ. ರಾಜಕೀಯ ಜೀವನದ ಮೂಲಕ ಜನರ ಕಷ್ಟಕಾರ್ಪಣ್ಯ ತಿಳಿದುಕೊಂಡಿದ್ದಾರೆ. ಕುಟುಂಬದವರೊಂದಿಗೆ ವಾಸ ಮಾಡದ ಮೋದಿ ಅವರಿಗೆ ಭಾವನೆಗಳ ಅರ್ಥ ಗೊತ್ತಿದೆಯೇ? ಭಾವನೆಗಳ ಅರ್ಥ ಗೊತ್ತಿದ್ದರೆ ಕಣ್ಣೀರಿನ (ಮೊಸಳೆ ಕಣ್ಣೀರು, ಭಾವನಾತ್ಮಕ ಕಣ್ಣೀರು) ಅರ್ಥ ಗೊತ್ತಾಗುತ್ತಿತ್ತು’ ಎಂದು ಮೂದಲಿಸಿದರು.

‘ಮೋದಿ ಅವರು ಲೋಕವನ್ನು ಮೆಚ್ಚಿಸಲು ಒಮ್ಮೊಮ್ಮೆ ತಾಯಿ ಆಶೀರ್ವಾದ ಪಡೆಯಲು ಹೋಗುತ್ತಾರೆ. ನೋಟು ಅಮಾನ್ಯ ಸಂದರ್ಭದಲ್ಲಿ ಲೋಕ ಮೆಚ್ಚಿಸಲು ನಿಮ್ಮ ತಾಯಿಯನ್ನು ಸರದಿಯಲ್ಲಿ ನಿಲ್ಲಿಸಿದ್ದಿರಿ. ನೀವು ದುಬಾರಿ ಬೆಲೆಯ ಬಟ್ಟೆ ತೊಡುತ್ತೀರಿ, ನಿಮ್ಮ ತಾಯಿಗೆ ನೂಲಿನ ಸೀರೆ... ಇದು ಎಷ್ಟು ಸರಿ?

ಕರ್ನಾಟಕದಲ್ಲಿರುವುದು ಅಭದ್ರ ಸರ್ಕಾರವಾಗಿದ್ದರೆ, ರೈತರ 49 ಸಾವಿರ ಕೋಟಿ ಸಾಲಮನ್ನಾ ಮಾಡಲಾಗುತ್ತಿತ್ತೆ ’ ಎಂದು ಪ್ರಶ್ನಿಸಿದರು.

‘ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಶಾಸಕ ಸಿ.ಟಿ.ರವಿ ಅವರು ಹಗಲುಗನಸು ಕಾಣುತ್ತಿದ್ದಾರೆ. ಅವರು ಹಗಲುಗನಸು ಕನಸಾಗಿಯೇ ಉಳಿಯುತ್ತದೆ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಮರೀಚಿಕೆ’ ಎಂದು ವ್ಯಂಗ್ಯವಾಡಿದರು.

ಮುಖಂಡರಾದ ಎಚ್‌.ಎಂ.ರೇಣುಕಾರಾಧ್ಯ, ಹೊಲದಗದ್ದೆ ಗಿರೀಶ್‌, ಎಚ್‌.ಎಚ್‌.ದೇವರಾಜ್‌, ಎಂ.ಸಿ.ಶಿವಾನಂದಸ್ವಾಮಿ, ಮಂಜೇಗೌಡ ಇದ್ದರು.

‘ಮೈತ್ರಿ ಪಕ್ಷಗಳು ಒಗ್ಗೂಡಿ ಶ್ರಮಿಸಿವೆ’

ಮೈತ್ರಿ ಪಕ್ಷಗಳ (ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ) ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಮಾತನಾಡಿ,‘ ಮೈತ್ರಿ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಿವೆ. ಮುಖಂಡರ ಸಲಹೆ, ಮಾರ್ಗದರ್ಶನದಂತೆ ನಡೆದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ಯಶಸ್ಸು ಸಾಧಿಸುವ ವಿಶ್ವಾಸ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT