ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸು ಬೆಲೆ ಕುಸಿತ: ಫಸಲು ಕೈಗೆ ಸಿಗುವ ಮುನ್ನವೇ ಬೆಳೆಗಾರರಿಗೆ ನಿರಾಸೆ

Published 7 ಮಾರ್ಚ್ 2024, 21:33 IST
Last Updated 7 ಮಾರ್ಚ್ 2024, 21:33 IST
ಅಕ್ಷರ ಗಾತ್ರ

ಕಳಸ: ಕಳೆದ ತಿಂಗಳು ಪ್ರತಿ ಕೆ.ಜಿಗೆ ₹600 ತಲುಪಿದ್ದ ಕಾಳುಮೆಣಸು ದರವು ಈಗ ₹475ಕ್ಕೆ ಇಳಿಕೆಯಾಗಿದೆ. ಧಾರಣೆ ಕುಸಿತದಿಂದಾಗಿ ಫಸಲು ಕೈಗೆ ಬರುವ ಮುನ್ನವೇ ಬೆಳೆಗಾರರಲ್ಲಿ ನಿರಾಸೆ ಮನೆ ಮಾಡಿದೆ.

ಮಳೆಯ ಕೊರತೆ ಹಾಗೂ ಕಡಿಮೆಯಾದ ಮಣ್ಣಿನ ತೇವಾಂಶದಿಂದ ಈ ಬಾರಿ ಕಾಳುಮೆಣಸಿನ ಇಳುವರಿ ತಕ್ಕಮಟ್ಟಿಗೆ ಉತ್ತಮವಾಗಿದೆ. ಆದರೆ, ಹವಾಮಾನ ವೈಪರೀತ್ಯದಿಂದ ಮೆಣಸು ಸರಿಯಾಗಿ ಹಣ್ಣಾಗಿಲ್ಲ.  ಕಾರ್ಮಿಕರು ಸಿಗದೆ ಕೊಯ್ಲು ಮಂದಗತಿಯಲ್ಲಿ ಸಾಗಿದೆ. ಕೊಯ್ಲು ಮಾಡಿದ ಮೆಣಸನ್ನು ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುವ ಮುನ್ನವೇ ಧಾರಣೆ ಕುಸಿದಿದೆ. 

ಕೇರಳದ ವಯನಾಡು ಮತ್ತು ಇಡುಕ್ಕಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನ ಉತ್ಪಾದನೆಯಾಗುತ್ತದೆ. ಕರ್ನಾಟಕದಲ್ಲೂ ಉತ್ತಮ ಫಸಲು ಬಂದಿದೆ. ಈ ಬಾರಿ ತಮಿಳುನಾಡಿನಲ್ಲಿಯೂ ಅಧಿಕ ಫಸಲು ಬಂದಿದೆ. ಹಾಗಾಗಿ, ಕಾಳುಮೆಣಸಿನ ಪ್ರಮುಖ ಮಾರುಕಟ್ಟೆಯಾದ ಕೊಚ್ಚಿಯಲ್ಲಿ ದಿನೇ ದಿನೇ ಧಾರಣೆ ಕುಸಿಯುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು.

‘ಭಾರತದಲ್ಲಿ ಉತ್ಪಾದನೆಯಾಗುವ ಕಾಳುಮೆಣಸು ದೇಸಿ ಬಳಕೆಗೆ ಸಾಕಾಗುತ್ತಿಲ್ಲ. ಹಾಗೆ ನೋಡಿದರೆ ದರ ಕುಸಿಯುವ ಪ್ರಮೇಯವೇ ಇರಲಿಲ್ಲ. ಆದರೆ, ಕಾಳುಮೆಣಸಿನ ಆಮದು ಹೆಚ್ಚುತ್ತಿರುವುದರಿಂದ ಧಾರಣೆಯು ಕುಸಿತದ ಹಾದಿ ಹಿಡಿದಿದೆ’ ಎಂದು ಹೇಳುತ್ತಾರೆ.

ಎಲ್ಲಿಂದ ಆಮದು?:

ವಿಯೆಟ್ನಾಂ ಮತ್ತು ಮಡಗಾಸ್ಕರ್‌ನಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಆಮದಾಗುತ್ತಿದೆ.

ಭಾರತದ ಕಾಳುಮೆಣಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ 7,500 ಡಾಲರ್‌ಗಿಂತ ಹೆಚ್ಚಿನ ಬೆಲೆ ಇದೆ. ಆದರೆ, ಕಡಿಮೆ ಗುಣಮಟ್ಟದ ವಿಯೆಟ್ನಾಂ ಮತ್ತು ಮಡಗಾಸ್ಕರ್ ಮೆಣಸಿಗೆ ಇದರ ಅರ್ಧದಷ್ಟು ಬೆಲೆ ಇದೆ. ಆದ್ದರಿಂದ ಆಮದು ಹೆಚ್ಚಿದೆ’ ಎಂಬುದು ಬೆಳೆಗಾರರ ಸಂಘಟನೆಗಳ ಒತ್ತಾಯ.

ಹಣದ ಅಗತ್ಯ ಇರುವ ಬೆಳೆಗಾರರು ಬೆಲೆ ಕುಸಿದಿದ್ದರೂ ಮಾರಾಟ ಆರಂಭಿಸಿದ್ದಾರೆ. ಅನುಕೂಲಸ್ಥ ಬೆಳೆಗಾರರು ಮೆಣಸನ್ನು ಕೆಲಕಾಲ ಸಂಗ್ರಹಿಸಿ ಬೆಲೆ ಏರಿಕೆಯಾದಾಗ ಮಾರಾಟ ಮಾಡುವ ಯೋಚನೆ ಹೊಂದಿದ್ದಾರೆ.

ಕಾಳುಮೆಣಸಿನ ದರ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಅಕ್ರಮವಾಗಿ ಆಮದು ಹೆಚ್ಚುತ್ತಿದೆ. ಇದಕ್ಕೆ ಸರ್ಕಾರ ನಿಯಂತ್ರಣ ಹೇರಬೇಕಿದೆ
ಚಂದ್ರಶೇಖರ ಲಿಂಬೆಕೊಂಡ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT