ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ರಸ್ತೆ ಬದಿಗೆ ಸುರಿದ ರೈತ

ಸ್ಥಳಕ್ಕೆ ಭೇಟಿ ನೀಡಿ ಖರೀದಿಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳು
Last Updated 16 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕಡೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದು ಮಾರುಕಟ್ಟೆಗೆ ತಂದ ರೈತರೊಬ್ಬರು ಖರೀದಿಸುವವರು ಇಲ್ಲದೆ, ಟೊಮೆಟೊವನ್ನು ರಸ್ತೆಯ ಬದಿಗೆ ಸುರಿದು, ವಾಹನ ಖಾಲಿ ಮಾಡಿಕೊಂಡು ನಡೆದರು.

ತಾಲ್ಲೂಕಿನ ಮಚ್ಚೇರಿ ಗ್ರಾಮದ ಎಂ.ಎಚ್.ರವಿ ಮುಕ್ಕಾಲು ಎಕರೆ ಜಮೀನಿನಲ್ಲಿ 4 ಸಾವಿರ ಟೊಮೆಟೊ ಗಿಡ ಹಾಕಿದ್ದರು. ಸಮೃದ್ಧವಾಗಿ ಬೆಳೆ ಬಂದು ಹಣ್ಣುಗಳು ಕೊಯ್ಲಿಗೆ ಬಂದಾಗ ಮೊದಲ ಸುತ್ತಿನ ಕೊಯ್ಲಿಗೆ ಮೂರು ಟನ್‌ಗಳಷ್ಟು ಇಳುವರಿ ಸಿಕ್ಕಿತು. ಇದರಿಂದ ಸಹಜವಾಗಿಯೇ ಸಂತಸಗೊಂಡ ರವಿ, ಹಣ್ಣಿನ ಕ್ರೇಟ್‌ಗಳನ್ನು ಕಡೂರು ಎಪಿಎಂಸಿಗೆ ಗುರುವಾರ ಕೊಂಡೊಯ್ದರು. ಆದರೆ ಖರೀದಿಸುವ ವರ್ತಕರೇ ಬರಲಿಲ್ಲ. ಶುಕ್ರವಾರವೂ ಅವರಿಗೆ ಇದೇ ಅನುಭವ ಆಯಿತು.

ಕಡೆಗೆ ಬೇಸತ್ತ ರವಿ ಸುಮಾರು 250 ಕ್ರೇಟ್‌ಗಳಷ್ಟು ಟೊಮೆಟೊವನ್ನು ರಸ್ತೆ ಬದಿಗೆ ಸುರಿದು ಹೋಗಿದ್ದಾರೆ. ‘2 ಸಾವಿರ ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದೆ. ಬೇಸಾಯ, ಔಷಧ, ಗೊಬ್ಬರ, ಗೂಟ, ದಾರ ಕಟ್ಟಲು ಹೀಗೆ ಸುಮಾರು ₹ 50 ಸಾವಿರ ಖರ್ಚು ಮಾಡಿದ್ದೇನೆ. ಮಾರುಕಟ್ಟೆಗೆ ಹೋದರೆ ಖರೀದಿಸುವ ವರ್ತಕರೇ ಇಲ್ಲ. ಖರ್ಚು ಮಾಡಿದಷ್ಟಾದರೂ ವಾಪಸ್ಸು ಬಂದಿದ್ದರೆ ಸಮಾಧಾನವಿರುತ್ತಿತ್ತು. ಆದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಯ್ತು’ ಎಂಬ ಅಳಲು ತೋಡಿಕೊಂಡರು.

ಇದು ರವಿಯೊಬ್ಬರದೇ ಕಥೆಯಲ್ಲ. ಗುರುವಾರ ಮತ್ತು ಶುಕ್ರವಾರ ಎಪಿಎಂಸಿಗೆ ಟೊಮೆಟೊ ತಂದ ರೈತರದ್ದೆಲ್ಲ ಇದೇ ಅನುಭವವಾಗಿತ್ತು. ಅಗತ್ಯಕ್ಕಿಂತ ಹೆಚ್ಚು ಟೊಮೆಟೊ ಬಂದಿರುವುದರಿಂದ ಪೂರ್ಣ ಖರೀದಿ ಸಾಧ್ಯವಿಲ್ಲ ಎಂಬುದು ವರ್ತಕರ ಮಾತಾದರೆ, ‘ವರ್ತಕರು ಖರೀದಿಸಲು ಮುಂದಾಗದಿದ್ದರೆ ನಾವೇನೂ ಮಾಡಲಾಗದು’ ಎನ್ನುತ್ತಾರೆ ಮಂಡಿ ಮಾಲೀಕರು.

ಎಪಿಎಂಸಿಯವರು ಟೊಮೆಟೊ ಬೆಳೆಗೆ ಕನಿಷ್ಠ ಬೆಲೆ ನಿಗದಿಪಡಿಸಿದರೆ ರೈತರಿಗೆ ಕನಿಷ್ಠ ಖರ್ಚಾದರೂ ಹುಟ್ಟುತ್ತದೆ. ಇಲ್ಲದಿದ್ದರೆ ಬೆಳೆ ಮಣ್ಣುಪಾಲು ಮಾಡುವುದೊಂದೇ ದಾರಿ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಅಧಿಕಾರಿ ಸ್ಪಂದನೆ: 2 ಟನ್ ಖರೀದಿ

ರೈತರು ಟೊಮೆಟೊ ಸುರಿಯುತ್ತಿರುವ ವಿಷಯ ತಿಳಿದ ಕೂಡಲೇ ಸಹಾಯಕ ತೋಟಗಾರಿಕಾ ಅಧಿಕಾರಿ ಎನ್.ಲಿಂಗರಾಜು ಮತ್ತು ಹೋಬಳಿ ಅಧಿಕಾರಿ ರಾಮಚಂದ್ರ ಅವರೊಡನೆ ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ, ವರ್ತಕರೊಬ್ಬರನ್ನು ಸಂಪರ್ಕಿಸಿ ಸುಮಾರು ಎರಡು ಟನ್ ಟೊಮೆಟೊ ಖರೀದಿಗೆ ವ್ಯವಸ್ಥೆ ಮಾಡಿದರು. ಒಂದು ಕ್ರೇಟ್‌ಗೆ ₹ 80ರಂತೆ ಖರೀದಿಸಲಾಯಿತು. ಅಧಿಕಾರಿಯ ಸ್ಪಂದನೆ ರೈತರ ಮೆಚ್ಚುಗೆಗೆ ಪಾತ್ರವಾಯಿತು. ರೈತ ಮೊದಲೇ ಸುರಿದಿದ್ದ ಒಂದು ಟನ್ ಟೊಮೆಟೊ ನಷ್ಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT