ಬೀರೂರು: ದೊಡ್ಡಘಟ್ಟ ಗ್ರಾಮದಲ್ಲಿ ಕಳೆದ ಶುಕ್ರವಾರ ಅಡುಗೆ ಅನಿಲ ಸ್ಫೋಟದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ವೈಯಕ್ತಿಕವಾಗಿ ಎಂ.ಸ್ಯಾಂಡ್, ಇಟ್ಟಿಗೆ, ಸಿಮೆಂಟ್ ಮೊದಲಾದ ಸಾಮಗ್ರಿಗಳನ್ನು ಒದಗಿಸುವುದಾಗಿ ಶಾಸಕ ಬೆಳ್ಳಿಪ್ರಕಾಶ್ ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ಭಾನುವಾರ ಕಡೂರು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ತಂಡದೊಂದಿಗೆ ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಿದರು.

‘ಸರ್ಕಾರವು ವರದಿ, ಮಾನದಂಡ ಅನುಸರಿಸಿ ಪರಿಹಾರ ಒದಗಿಸುವಲ್ಲಿ ವಿಳಂಬವಾಗಬಹುದು. ಮಾನವೀಯ ಹಿನ್ನೆಲೆಯಲ್ಲಿ ಈ ನಾಲ್ಕು ಕುಟುಂಬಗಳಿಗೆ ಮನೆ ಕಟ್ಟಲು ಬೇಕಿರುವ ಸಾಮಗ್ರಿಗಳನ್ನು ಇಂದಿನಿಂದಲೇ ಪೂರೈಸಲಾಗುವುದು. ಈಗಾಗಲೇ ನೀಲಿನಕ್ಷೆ ತಯಾರಿಸಿದ್ದು, ನಾಲ್ಕು ಮನೆಗಳೂ ಏಕರೂಪ ಮತ್ತು ಗುಣಮಟ್ಟದ್ದಾಗಿರಬೇಕು. ಈ ವಾರದ ಒಳಗೇ ನಿರ್ಮಾಣ ಕಾರ್ಯ ಆರಂಭವಾಗಿ 45 ದಿನದಲ್ಲಿ ಮನೆ ಸಂಪೂರ್ಣವಾಗಿರಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

‘ಅತಿ ಶೀಘ್ರವಾಗಿ ಸರ್ಕಾರದಿಂದಲೂ ಪರಿಹಾರ ನೀಡಲಾಗುವುದು, ಆದ್ಯತೆ ಮೇರೆಗೆ ಈ ಕುಟುಂಬಗಳಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಬಸವ ವಸತಿ ಯೋಜನೆಯಲ್ಲಿ ಮನೆಮಂಜೂರು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು’ ಎಂದು ತಿಳಿಸಿದರು.

ಈ ಹಂತದಲ್ಲಿ ಸ್ಥಳದಲ್ಲಿದ್ದ ಗ್ರಾಮಸ್ಥರು, ‘ಇದು ಪರಿಶಿಷ್ಟ ಕಾಲೊನಿಯಾಗಿದ್ದು ಸುಮಾರು 40 ಕುಟುಂಬಗಳಿವೆ, ನಾವೆಲ್ಲರೂ ಮನೆ ನಿರ್ಮಿಸಿಕೊಂಡರೂ ನಮ್ಮನ್ನು ಈವರೆಗೆ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡಿಲ್ಲ. ಹೀಗಾಗಿ ನಮ್ಮ ಬಳಿ ಹಕ್ಕುಪತ್ರ ಇಲ್ಲ’ ಎನ್ನುವ ವಿಷಯವನ್ನು ಶಾಸಕರ ಗಮನಕ್ಕೆ ತಂದರು.

ಇವರಿಗೆ 94 ‘ಸಿ’ಯಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲವೇ ಎಂದು ಶಾಸಕರು ಸ್ಥಳದಲ್ಲಿದ್ದ ತಹಶೀಲ್ದಾರ್ ಬಳಿ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜೆ.ಉಮೇಶ್, ‘ನಿವೇಶನ ರಹಿತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸದ್ಯ ಇದಕ್ಕೆ ಅವಕಾಶವಿಲ್ಲ, ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ ತಕ್ಷಣ ಅರ್ಜಿ ಸ್ವೀಕರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಬೀರೂರು ನಾಡಕಚೇರಿ ರಾಜಸ್ವ ನಿರೀಕ್ಷಕರಿಗೆ ಈ ಕುರಿತು ಹೊಸ ವರದಿ ತಯಾರಿಸಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ನಾಯ್ಕ ಮಾಹಿತಿ ನೀಡಿ, ‘ಕಡೂರು ತಾಲ್ಲೂಕಿನಲ್ಲಿ ಈ ರೀತಿಯ ಅನೇಕ ಪ್ರಕರಣಗಳಿವೆ, 9,500 ನಿವೇಶನ ರಹಿತರನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಶೀಘ್ರವಾಗಿ ಪಿಡಿಒ, ಕಂದಾಯ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರರ ಸಭೆ ನಡೆಸಿ ಹಕ್ಕುಪತ್ರ ವಿತರಣೆ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಆಶ್ರಯ ಸಮಿತಿ ಅಧ್ಯಕ್ಷರೂ ಆದ ಬೆಳ್ಳಿಪ್ರಕಾಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಪಕ್ಷದ ವಕ್ತಾರ ಶಾಮಿಯಾನ ಚಂದ್ರು, ಗ್ರಾಮ ಪಂಚಾಯಿತಿ ಸದಸ್ಯ ಹುಲ್ಲೆಹಳ್ಳಿ ಲಕ್ಷ್ಮಣ್, ಜಿಗಣೇಹಳ್ಳಿ ನೀಲಕಂಠಪ್ಪ, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ಆಹಾರ ನಿರೀಕ್ಷಕ ಎನ್.ಎಂ. ಪ್ರಸಾದ್ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.