ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಶ್ರೇಣಿ: ಮೂಲ ಸೌಕರ್ಯಗಳ ಕೊರತೆ

Last Updated 7 ಜನವರಿ 2022, 3:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗಿರಿಶ್ರೇಣಿಯ ಕೆಲವು ತಾಣಗಳಲ್ಲಿ ಶೌಚಾಲಯ, ವಾಹನನಿಲುಗಡೆ ಸೌಕರ್ಯ ಸಹಿತ ಹಲವು ಮೂಲಸೌಲಭ್ಯಗಳ ಕೊರತೆ ಇದೆ. ಬಯಲೇ ಪಾಯಿಖಾನೆ, ರಸ್ತೆ ಬದಿಯೇ ಪಾರ್ಕಿಂಗ್‌ ಎಂಬಂತಾಗಿದೆ.
ಹೊನ್ನಮ್ಮನ ಹಳ್ಳ ತಾಣದಲ್ಲಿ ಶೌಚಾಲಯ ಕೊರತೆ ಇದೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ಸಾಗುವ ಮಾರ್ಗದಲ್ಲಿ ಈ ಹಳ್ಳ ಇದೆ. ಪ್ರವಾಸಿಗರಿಂದ ಗಿಜಿಗುಡುವ ಜಾಗವಿದು.
ಹಳ್ಳದ ನೀರು ಸುರಿಯುವ ಕಡೆಗೆ ಏರಲು ನಿರ್ಮಿಸಲು ಮೆಟ್ಟಿಲುಗಳು ಹಾಳಾಗಿವೆ. ಮೆಟ್ಟಿಲಿನ ಕೆಲು ಕಲ್ಲುಗಳು ಕುಸಿದಿವೆ. ‘ಬಿದ್ದೀರಾ ಜೋಕೆ’ ಎಚ್ಚರಿಕೆಯಲ್ಲಿ ಈ ಮೆಟ್ಟಿಲುಗಳಲ್ಲಿ ಓಡಾಡಬೇಕಿದೆ.
ಸೇತುವೆ ಕೆಳಗೆಕೆಳಗೆ ಹಳ್ಳದ ನೀರು ಹರಿವ ಕಡೆಗೆ ಇಳಿಯಲು ನಿರ್ಮಿಸಿದ್ದ ಮೆಟ್ಟಿಲುಗಳು (ಹೊನ್ನಮ್ಮ ದೇವಿ ದೇಗುಲ ಸಮೀಪ) ಕುಸಿದಿವೆ. ಹಳ್ಳದ ಬಳಿ ಇರುವ ಕಟ್ಟಡವೊಂದು ಪಾಳುಬಿದ್ದಿದೆ. ಈ ಕಟ್ಟಡದ ಆಜುಬಾಜು ಜಾಗವು ಕೊಳಚೆ ಕೊಂಪೆಯಾಗಿದೆ.
‘ಪ್ರವಾಸಿಗರು ಬಯಲಲ್ಲೇ ಮಲ–ಮೂತ್ರ ವಿಸರ್ಜನೆ ಮಾಡುತ್ತಾರೆ. ಬಹಳಷ್ಟು ಮಂದಿ ಹಳ್ಳದ ಬಳ್ಳಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಹಳ್ಳದ ಮೆಟ್ಟಿಲಿನ ಕಲ್ಲುಗಳು ಸಡಿಲವಾಗಿವೆ. ಓಡಾಡುವಾಗ ಜಾರಿದರೆ ಅಪಾಯ ತಪ್ಪಿದ್ದಲ್ಲ’ ಎಂದು ಟ್ಯಾಕ್ಸಿ ಚಾಲಕ ರಫೀಕ್‌ ಹೇಳುತ್ತಾರೆ.
ಗಿರಿ ಶ್ರೇಣಿ ಭಾಗದ ಝರಿಗಳ ಕಡೆಗೆ ತೆರಳುವ ದಾರಿಗಳ ಸಂಪರ್ಕ ಭಾಗದಲ್ಲಿ ಮುಖ್ಯರಸ್ತೆಯ ಇಕ್ಕೆಲದಲ್ಲಿ ವಾಹನಗಳು ನಿಂತಿರುತ್ತವೆ. ರಸ್ತೆಯ ಮಗ್ಗುಲಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ ಮಾಡುವುದು ಸಮಸ್ಯೆಯಾಗಿದೆ.
‘ನಗರದಿಂದ ಗಿರಿ ಶ್ರೇಣಿಗೆ ಸಾಗುವ ಸಿರಿ ಕೆಫೆ ಬಳಿ, ಕೈಮರ ಬಳಿ ಮತ್ತು ಗಿರಿಯಲ್ಲಿ ಝರಿ ಕಡೆಗೆ ಹೋಗುವ ದಾರಿಗಳು, ಕೆಲ ತಾಣಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ ಮಾಡುತ್ತಾರೆ. ವಾರಾಂತ್ಯದ ದಿನಗಳಲ್ಲಂತೂ ವಾಹನಗಳು ಅಡ್ಡಾದಿಡ್ಡಿ ನಿಲುಗಡೆ ನುಸುಳಿಕೊಂಡು ಸಾಗುವ ಪಡಿಪಾಟಲು ಹೇಳತೀರದು’ ಎಂದು ಅತ್ತಿಗುಂಡಿಯ ರಮೇಶ್‌ ಸಂಕಷ್ಟ ತೋಡಿಕೊಂಡರು.

ಬಾಬಾಬುಡನ್‌ಗಿರಿಯ ಶ್ರೀಗುರು ದತ್ತಾತ್ರೇಯ ಸ್ವಾಮಿ ದರ್ಗಾ ಪ್ರದೇಶದಿಂದ ಮಾಣಿಕ್ಯಧಾರಾ ಮಾರ್ಗದ ಕಲ್ಲುಮಣ್ಣಿನ ಹಾದಿಯನ್ನು ವ್ಯವಸ್ಥಿತ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು. ಕವಿಕಲ್‌ ಗಂಡಿ ಭಾಗ ಚೆಕ್‌ಪೋಸ್ಟ್‌ ಬಳಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು. ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು. ವೇಗ ಮಿತಿ ಫಲಕಗಳನ್ನು ಅಳವಡಿಸಬೇಕು ಎಂಬ ಬೇಡಿಕೆಗಳು ಇವೆ.

‘ಗಿರಿ ಶ್ರೇಣಿ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಗಿರಿಶ್ರೇಣಿ ಪ್ರವೇಶಕ್ಕೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುತ್ತಾರೆ. ಮೂಲಸೌಕರ್ಯ ಕಲ್ಪಿಸುವುದು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಪ್ರವಾಸಿಗ ರಾಮನಗರದ ಮಹೇಶ್ವರಪ್ಪ ಹೇಳುತ್ತಾರೆ.

ನೈರ್ಮಲ್ಯ ನಿರ್ವಹಣೆ ಸಮಸ್ಯೆ

ಗಿರಿ ಶ್ರೇಣಿ ಮಾರ್ಗದ ಇಕ್ಕೆಲಗಳಲ್ಲಿ ಕಸದ ತೊಟ್ಟಿಗಳು ಇವೆ. ಈ ತೊಟ್ಟಿಗಳಲ್ಲಿ ತುಂಬಿತುಳುಕುತ್ತಿದ್ದರೂ ವಿಲೇವಾರಿ ಮಾಡಲ್ಲ ಎಂಬ ದೂರುಗಳು ಇವೆ.

ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಹೋಮ್‌ ಸ್ಟೆ, ರೆಸಾರ್ಟ್‌, ಹೋಟೆಗಳವರು ಎಲ್ಲರೂ ತೊಟ್ಟಿಗಳಿಗೆ ಕಸ ಸುರಿಯುತ್ತಾರೆ. ನಿಯಮಿತವಾಗಿ ವಿಲೇವಾರಿಯಾಗದಿರುವುದು ಸಮಸ್ಯೆಗೆ ಎಡೆಮಾಡಿದೆ.

‘ನಿಯಮಿತವಾಗಿ ಕಸ ಒಯ್ಯಲ್ಲ. ಬಿಡಾಡಿಗಳು ತೊಟ್ಟಿಯಲ್ಲಿನ ಕಸವನ್ನು ಎಳೆದಾಡುತ್ತವೆ. ಕಸ ನಿರ್ವಹಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಅತ್ತಿಗುಂಡಿಯ ರಿಜ್ವಾನ್‌ ಅವರ ಮೊರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT