ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: ನಿರುಪಯುಕ್ತವಾದ ಹೊಸಹಳ್ಳಿ ಶಾಲೆ ಕಟ್ಟಡ

ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಾಲೆಯ ಸಮೂಹ ಸಂಪನ್ಮೂಲ ಕಚೇರಿ ಸುತ್ತ ಮುಳ್ಳು
ಬಾಲುಮಚ್ಚೇರಿ
Published 7 ಜುಲೈ 2024, 7:57 IST
Last Updated 7 ಜುಲೈ 2024, 7:57 IST
ಅಕ್ಷರ ಗಾತ್ರ

ಕಡೂರು: ಪಾಳುಬಿದ್ದ ಕಟ್ಟಡ, ಮುಳ್ಳು ಗಿಡಗಳಿಂದ ತುಂಬಿಕೊಂಡ ಸಮೂಹ ಸಂಪನ್ಮೂಲ ಕಚೇರಿ, ಅಕ್ಷರ ದಾಸೋಹ ಕಚೇರಿಗಳು...

ಇದು ಕಡೂರು ತಾಲ್ಲೂಕಿನ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಮುಚ್ಚಿರುವ ಶಾಲಾ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡಲು ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಈ ಕಟ್ಟಡಗಳು ಸಾಕ್ಷಿಯಾಗಿ ನಿಂತಿವೆ.

ಈ ಶಾಲೆ ಮುಚ್ಚಿ ಒಂದು ದಶಕ ಕಳೆದಿದೆ. ಶಾಲಾ ಕೊಠಡಿಗಳು ಪಾಳು ಬಿದ್ದಿವೆ. ಸಮೂಹ ಸಂಪನ್ಮೂಲ ಕಚೇರಿ, ಅಕ್ಷರ ದಾಸೋಹ ಕಚೇರಿಗಳು, ಶಾಲಾವರಣ ಮುಳ್ಳುಗಳಿಂದ ತುಂಬಿ ನಿರುಪಯುಕ್ತವಾಗಿದೆ.

ದಶಕಗಳ ಹಿಂದೆ ಕೆ.ಹೊಸಹಳ್ಳಿ, ಅಂದೇನಹಳ್ಳಿ, ಮೂರ್ತಿಹಾಳು, ಚಿಕ್ಕಂಗಳ, ಶ್ರೀರಾಂಪುರ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳ ಪಾಲಿಗೆ ಈ ಶಾಲೆ ವಿದ್ಯಾದೇಗುಲವಾಗಿತ್ತು. ಆದರೆ, ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಯನ್ನು 2014ರಲ್ಲಿ ಮುಚ್ಚಲಾಯಿತು. ಬೀರೂರು ಶೈಕ್ಷಣಿಕ ವಲಯಕ್ಕೆ ಸೇರಿದ ಈ ಶಾಲೆಯನ್ನು ಪುನಶ್ಚೇತನಗೊಳಿಸುವ ಯಾವ ಪ್ರಯತ್ನವೂ ನಡೆಯಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಆಸಕ್ತಿ ತೋರಲಿಲ್ಲ.

ಕಡೆ ಪಕ್ಷ ಕಟ್ಟಡ ಸಂರಕ್ಷಿಸಿ ಇಲಾಖೆಯ ಇತರೆ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳುವ ಕಾರ್ಯವನ್ನೂ ಶಿಕ್ಷಣ ಇಲಾಖೆ ಮಾಡಲಿಲ್ಲ. ಕೆಲ ಕಾಲ ಕಟ್ಟಡ ಕಾರ್ಮಿಕರಿಗೆ ವಸತಿಯಾಗಿ, ತದನಂತರ ಕೆಲವರು ತೆಂಗಿನ ಕಾಯಿ ದಾಸ್ತಾನು ಮಾಡಲು ಉಪಯೋಗಿಸಿಕೊಂಡರು. ಈಗ ಶಾಲೆ ಜಾಗ ಒತ್ತುವರಿಯಾಗಿದೆಯೆಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ 2024ರ ಜನವರಿ 1ರಂದು ಕಡೂರು ಪುರಸಭೆ ಮುಖ್ಯಾಧಿಕಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಯ ಗಡಿ ಗುರುತಿಸಿಕೊಡಲು ಪತ್ರ ಬರೆದಿದ್ದಾರೆ. 

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡಗಳನ್ನು ಪಾಳು ಬಿಟ್ಟಿರುವುದು ಸಾರ್ವಜನಿಕರ ಹಣ ವ್ಯರ್ಥ ಮಾಡುತ್ತಿರುವುದರ ಸಂಕೇತ ಎಂದು ಕೆ‌.ಹೊಸಹಳ್ಳಿಯ ಜನ ಹೇಳುತ್ತಾರೆ.

ಪಾಳುಬಿದ್ದ ಕೆ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪಾಳುಬಿದ್ದ ಕೆ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಾಲೆಯ ಜಾಗದ ರಕ್ಷಣೆಯ ದೃಷ್ಟಿಯಿಂದ ಪುರಸಭೆಗೆ ಜಾಗವನ್ನು ಹಸ್ತಾಂತರಿಸಲಾಗುವುದು. ಅವಕಾಶವಾದಾಗ ಅದನ್ನು ಶಾಲಾ ಶಿಕ್ಷಣ ಇಲಾಖೆ ಸೂಕ್ತ ರೀತಿಯಲ್ಲಿ ಬಳಸಲಿದೆ.
–ಆರ್. ಸಿದ್ದರಾಜುನಾಯ್ಕ ಬಿಇಒ ಕಡೂರು.
ಶಾಲೆಯ ಆವರಣದಲ್ಲಿನ ಕಟ್ಟಡ ಬಳಕೆಯಾಗದೆ ಶಿಥಿಲವಾಗಿರುವುದು ವಿಷಾದನೀಯ. ಸಂಬಂಧಿಸಿದವರು ಕಟ್ಟಡಗಳನ್ನು ಕ.ಸಾ.ಪಗೆ ಬಿಟ್ಟುಕೊಟ್ಟರೆ ಅಲ್ಲಿ ಪರಿಷತ್‌ನ ಚಟುವಟಿಕೆ ನಡೆಸುತ್ತೇವೆ. ಇಲಾಖೆಗೆ ಬೇಕೆಂದಾಗ ಅವರಿಗೆ ಹಸ್ತಾಂತರಿಸುತ್ತೇವೆ.
–ಸೂರಿ ಶ್ರೀನಿವಾಸ್. ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT