ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ನವ ಸ್ಪರ್ಶ

ಜಿಲ್ಲೆಯ 150ಕ್ಕೂ ಹೆಚ್ಚು ಪಂಚಾಯಿತಿಗಳ ಕ್ರಿಯಾಯೋಜನೆ ಅನುಮೋದನೆ
Last Updated 12 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಹೊಸ ಪುಸ್ತಕ ಖರೀದಿ, ಡಿಜಿಟಲೀಕರಣದ ಮೂಲಕ ನವಸ್ಪರ್ಶಕ್ಕೆ ಗಮನಹರಿಸಿ, ಈ ಕಾರ್ಯಕ್ಕೆ 14ನೇ ಮತ್ತು 15ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯ 150ಕ್ಕೂ ಹೆಚ್ಚು ಪಂಚಾಯಿತಿಗಳ ಕ್ರಿಯಾಯೋಜನೆಗಳನ್ನು ಅನುಮೋದಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮಾರ್ಗಸೂಚಿ ಅನುಸಾರ ಹಲವು ಪಂಚಾಯಿತಿಗಳು ಪುಸ್ತಕಗಳನ್ನು ಖರೀದಿಸಿ, ಡಿಜಿಟಲೀಕರಣದತ್ತ ಚಿತ್ತ ಹರಿಸಿವೆ. ಗ್ರಾಮೀಣ ಪ್ರದೇಶಗಳ ಮಕ್ಕಳು, ವಿದ್ಯಾರ್ಥಿಗಳು, ಸ್ಪರ್ಧಾರ್ಥಿಗಳನ್ನು (ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ತೊಡಗಿರುವವರು) ‌ ಗಮನದಲ್ಲಿಟ್ಟುಕೊಂಡು ಗ್ರಂಥಾಲಯಗಳಿಗೆ ನವಸ್ಪರ್ಶ ನೀಡಲಾಗುತ್ತಿದೆ.

ತಾಲ್ಲೂಕಿನ ಶಿರವಾಸೆ ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೆ ಪುಸ್ತಕಗಳು, ಕಂಪ್ಯೂಟರ್‌ ಖರೀದಿಸಲಾಗಿದೆ. ದಾನಿಗಳು ಎರಡು ಕಂಪ್ಯೂಟರ್‌ ಮತ್ತುಪುಸ್ತಕ ಇಡಲು ರ್‍ಯಾಕ್‌ಗಳನ್ನು ಒದಗಿಸಿದ್ದಾರೆ.

‘ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ, ಮಕ್ಕಳ ಪುಸ್ತಕ ಸಹಿತ ವಿವಿಧ ಕೃತಿಗಳನ್ನು ಖರೀದಿಸಲಾಗಿದೆ. ಒಟ್ಟು ಮೂರು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ರ್‍ಯಾಕ್‌ ಜೋಡಣೆ ಕೆಲಸ ನಡೆಯುತ್ತಿದೆ. ಗ್ರಂಥಾಲಯಕ್ಕೆ ನವ ಸ್ಪರ್ಶ ನೀಡಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ಸನ್ನದ್ಧವಾಗಲಿದೆ’ ಎಂದು ಶಿರವಾಸೆ ಪಿಡಿಒ ಪರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಪಿಎಸ್‌ಸಿ, ಯುಪಿಎಸ್‌ಸಿ ನೇಮಕಾತಿ, ‘ಕೆ–ಸೆಟ್‌’ಗೆ (ಉಪನ್ಯಾಸಕರ ಅರ್ಹತಾ ಪರೀಕ್ಷೆ) ಸಿದ್ಧತೆಯಲ್ಲಿ ತೊಡಗಿದ್ದೇನೆ. ನಮ್ಮೂರಿನ ಗ್ರಂಥಾಲಯದಲ್ಲಿ ಹೊಸದಾಗಿ ಬಹಳಷ್ಟು ಪುಸ್ತಕಗಳನ್ನು ತರಿಸಿದ್ದಾರೆ, ಕಂಪ್ಯೂಟರ್‌ ಅಳವಡಿಸಿದ್ದಾರೆ. ಪರೀಕ್ಷೆ ತಯಾರಿಗೆ ಅನುಕೂಲವಾಗಿದೆ’ ಎಂದು ಶಿರವಾಸೆಯ ಪ್ರದೀಪ್‌ ಖುಷಿ ವ್ಯಕ್ತಪಡಿಸಿದರು.

ಗ್ರಂಥಾಲಯದಲ್ಲಿ ‘ಭಾರತ ಸಂವಿಧಾನ’, ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಆಧಿಯನಿಯಮ–1993’, ‘ಕನ್ನಡ ಶಬ್ದಕೋಶ’, ‘ಭಾರತದ ಸಂವಿಧಾನ ಮುನ್ನಡಿಯ ಪೋಸ್ಟರ್‌’, ‘ಸ್ಪರ್ಧಾತ್ಮಕ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿ, ವಿವರ’ ಮಕ್ಕಳಿಗೆ ಸಂಬಂಧಿಸಿದ ಪತ್ರಿಕೆಗಳು, ಅಟ್ಲಾಸ್‌, ಭೂಪಟಗಳು, ಮಕ್ಕಳ ಹಕ್ಕುಗಳ ಪೋಸ್ಟರ್‌, ದಿನಪತ್ರಿಕೆಗಳ, ನಿಯತಕಾಲಿಕೆಗಳು ಕಡ್ಡಾಯವಾಗಿ ಇರಬೇಕು
ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಹಳ್ಳಿಗಳ ಯುವಜನರು, ಮಕ್ಕಳಿಗೆ, ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುತ್ತದೆ. ಪ್ರತಿ ಗ್ರಂಥಾಲಯದಲ್ಲಿ ಕನಿಷ್ಠ ಎರಡು ಕಂಪ್ಯೂಟರ್‌, ಯುಪಿಎಸ್‌, ಇ–ಪುಸ್ತಕ, ‘ಶೈಕ್ಷಣಿಕ ವಿಡಿಯೋ’ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. 15ನೇ ಹಣಕಾಸು ಯೋಜನೆ ಅಥವಾ ಗ್ರಾಮ ಪಂಚಾಯಿತಿ ಸ್ವಂತ ನಿಧಿ ಬಳಸಿಕೊಳ್ಳಲು ತಿಳಿಸಲಾಗಿದೆ.

‘ಮಕ್ಕಳ ನೋಂದಣಿಗೆ ಆಂದೋಲನ’

‘ಗ್ರಂಥಾಲಯಗಳಲ್ಲಿ ಮಕ್ಕಳ ಸದಸ್ಯತ್ವ ನೋಂದಣಿಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ವಿಶೇಷ ನೋಂದಣಿ ಆಂದೋಲನ ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಪೂವಿತಾ ತಿಳಿಸಿದರು.

‘ಮಕ್ಕಳಲ್ಲಿ ಓದುವ ಆಸಕ್ತಿ ಮೈಗೂಡಿಸಲು ಉದ್ದೇಶಿಸಲಾಗಿದೆ. 14ನೇ ಹಣಕಾಸು ಯೋಜನೆ ಅನುದಾನದಲ್ಲಿ ಕನಿಷ್ಠ ₹ 30 ಸಾವಿರವನ್ನು ಗ್ರಂಥಾಲಯಕ್ಕೆ ಪುಸ್ತಕ ಖರೀದಿಗೆ ಬಳಸಲು ಸೂಚಿಸಲಾಗಿದೆ. ಡಿಜೀಟಕಲೀಕರಣಕ್ಕೆ 15ನೇ ಹಣಕಾಸು ಯೋಜನೆ ಅನುದಾನ ಬಳಸಲು ತಿಳಿಸಲಾಗಿದೆ’ ಎಂದರು.

‘150ಕ್ಕೂ ಪಂಚಾಯಿತಿಗಳಲ್ಲಿ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಏಳಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಡಿಜಿಟಲೀಕರಣ ಮಾಡಿಸಲಾಗಿದೆ. ಉಳಿದ ಪಂಚಾಯಿತಿಗಳು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT