ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಕೆಗೆ ಕ್ರಮ

ರಾಜಾಜಿನಗರ ಬಡಾವಣೆ: ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ
Last Updated 7 ಡಿಸೆಂಬರ್ 2020, 5:10 IST
ಅಕ್ಷರ ಗಾತ್ರ

ಬೀರೂರು: ಭದ್ರಾ ಕುಡಿಯುವ ನೀರನ್ನು ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಪೂರೈಸುವ ಸಲುವಾಗಿ ಬೀರೂರು ಪಟ್ಟಣದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ರಾಜಾಜಿನಗರ ಬಡಾವಣೆಯ ಮಾಲುಸ್ಲೀಪರ್ಸ್ ಎದುರು ಭಾನುವಾರ 10 ಲಕ್ಷ ಲೀಟರ್‌ ಸಾಮರ್ಥ್ಯದ ₹ 2.69 ಕೋಟಿ ವೆಚ್ಚದ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

‘ಕುಡಿಯುವ ನೀರು ಪೂರೈಕೆ ಸಲುವಾಗಿ ಜಾರಿಗೊಳಿಸಲಾದ ಭದ್ರಾ ಯೋಜನೆಯಿಂದ ಕಡೂರು- ಬೀರೂರು ಪಟ್ಟಣಗಳ ಜನರ ದಾಹ ಬಹುಮಟ್ಟಿಗೆ ತೀರಿದೆ. ಸಣ್ಣ- ಪುಟ್ಟ ಲೋಪ ದೋಷಗಳು ಆಗೀಗ ಕಾಣುತ್ತಿವೆ. ಬೀರೂರಿನಲ್ಲಿ ಈ ಹಿಂದೆಯೇ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ದೊರೆಯ ಬೇಕಿತ್ತು. ಕೋವಿಡ್ ಕಾರಣದಿಂದ ಅದು ತಡವಾಗಿದೆ. ಬೆಂಗಳೂರಿನ ಸ್ವಜಲ್ ಸ್ಟ್ರಕ್ಚರ್ಸ್ ಕಂಪನಿಗೆ ಕಾಮಗಾರಿ ಗುತ್ತಿಗೆ ದೊರೆತಿದ್ದು, ಒಂದು ವರ್ಷದ ಒಳಗೆ ಗುಣಮಟ್ಟದ ಕೆಲಸ ಮಾಡಿಕೊ ಡುವಂತೆ ಸೂಚಿಸಲಾಗಿದೆ’ ಎಂದರು.

‘ನೀರು ಸಂಗ್ರಹಣಾಗಾರ ನಿರ್ಮಾಣವಾದ ಬಳಿಕ ಈ ಭಾಗದಲ್ಲಿ ಪೈಪ್‍ಲೈನ್ ಬದಲಿಸಿ ಹಳೆ ಅಜ್ಜಂಪುರ ರಸ್ತೆವರೆಗೆ ನೀರು ಕೊಡಲಾಗುವುದು. ಕಡೂರು ಪಟ್ಟಣದಲ್ಲಿ ಕೂಡಾ ಮೂರು ತಿಂಗಳ ಹಿಂದೆ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತ್ವರಿತವಾಗಿ ಎಲ್ಲ 23 ವಾರ್ಡ್‌ಗಳಿಗೂ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ರಾಜಾಜಿನಗರ ಬಡಾವಣೆ ನಿವಾಸಿಗಳ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ವೆಂಕಟೇಶ ಜಿ.ಒಡೆಯರ್, ‘ಈ ಪ್ರದೇಶದ ಜನರ ಬಹುದಿನಗಳ ಬೇಡಿಕೆಗೆ ಚಾಲನೆ ದೊರೆತಿರುವುದು ಸಂತಸ ತಂದಿದೆ. ಜನರ ಮೂಲಸೌಕರ್ಯ ಸಮಸ್ಯೆ ಬಗೆಹರಿಸಲು ಶಾಸಕರು ಒತ್ತು ನೀಡಿರುವುದು ಶ್ಲಾಘನೀಯ. ಇಲ್ಲಿ ಟ್ಯಾಂಕ್ ನಿರ್ಮಾಣದ ಬಳಿಕ ಪಕ್ಕದಲ್ಲಿಯೇ ರೈಲ್ವೆ ಇಲಾಖೆ ಸೋಲಾರ್ ಪಾರ್ಕ್ ನಿರ್ಮಿಸುತ್ತಿದ್ದು, ಜನರು ನಿಲ್ದಾಣಕ್ಕೆ ತೆರಳುವ ರಸ್ತೆ ಮುಚ್ಚಿ ಹೋಗಲಿದೆ. ಸಮೀಪದ ಲೇಔಟ್‍ನ ಪಾರ್ಕ್ ಜಾಗದಲ್ಲಿ ಸ್ಥಳಾವಕಾಶ ಇದ್ದು, ಜನರು ರೈಲ್ವೆ ರಸ್ತೆಗೆ ಹೋಗಲು ಇಲ್ಲಿ ರಸ್ತೆ ನಿರ್ಮಿಸಬೇಕು’ ಎಂದು ಗಮನ ಸೆಳೆದರು. ಪುರಸಭಾಧ್ಯಕ್ಷರಿಗೆ ಈ ವಿಷಯವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ಶಾಸಕರು ಸೂಚಿಸಿದರು.

ಪುರಸಭಾಧ್ಯಕ್ಷ ಎಂ.ಪಿ.ಸುದರ್ಶನ್, ಸದಸ್ಯರಾದ ರವಿ, ನಾಗರಾಜ್, ಲೋಕೇಶಪ್ಪ, ರಾಜು, ರಘು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅರೆಕಲ್ ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್, ಎಪಿಎಂಸಿ ನಿರ್ದೇಶಕ ಮಾರ್ಗದ ಮಧು, ಪಿಎಸಿಎಸ್ ಅಧ್ಯಕ್ಷ ಕಾಂತರಾಜ್, ಬಿಜೆಪಿ ಮುಖಂಡರಾದ ರುದ್ರಪ್ಪ, ದೇವರಾಜ್, ವಿಕ್ರಂ, ರವಿಕುಮಾರ್, ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT