ಬುಧವಾರ, ಡಿಸೆಂಬರ್ 2, 2020
17 °C
ಸಂಕಷ್ಟಕ್ಕೆ ಸಿಲುಕಿದ ಚಿಕ್ಕಮಗಳೂರು, ಹಾಸನ, ಕೊಡುಗು ಬೆಳೆಗಾರರು

ಭಾರೀ ಮಳೆ : ಕಾಫಿ ಬೆಳೆಗೆ ಬರೆ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಮಗಳೂರು: ಅತಿವೃಷ್ಟಿಯಿಂದಾಗಿ ಕಾಫಿ, ಕಾಳುಮೆಣಸು ಬೆಳೆ ಬಹುತೇಕ ನೆಲಕಚ್ಚಿದೆ. ಈ ಬೆಳೆಗಳಿಗೆ ಕೊಳೆ ರೋಗ ಕಾಡುತ್ತಿದ್ದು ಚಿಕ್ಕಮಗಳೂರು, ಹಾಸನ, ಕೊಡುಗು ಜಿಲ್ಲೆಗಳ ಬೆಳೆಗಾರರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರುಣನ ಆರ್ಭಟದಿಂದಾಗಿ ಮಲೆನಾಡು ಭಾಗ ನಲುಗಿದೆ. ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಅಡಿಕೆ ಮೊದಲಾದ ಬೆಳೆಗಳಿಗೆ ಹಾನಿಯಾಗಿದೆ. ಗಿಡಗಳಲ್ಲಿ ಹೀಚುಕಟ್ಟಿರುವ ಕಾಫಿ ಕಾಯಿ ಮಳೆಯಿಂದಾಗಿ ಮಣ್ಣು ಪಾಲಾಗಿದೆ. ಕೊಳೆ ರೋಗದಿಂದಾಗಿ ಎಲೆಗಳು ಉದುರಿ ಗಿಡಗಳು ಕೊಳೆಯುತ್ತಿವೆ. ಕಾಳುಮೆಣಸು ಬಳ್ಳಿಗೆ ಸೊರಗು ರೋಗ ತಗುಲಿ, ಗರಿಗಳು ಉದುರುತ್ತಿವೆ.

‘ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಗಿರಿಶ್ರೇಣಿ, ಮೂಡಿಗೆರೆ, ಶೃಂಗೇರಿ, ಹಾಸನ ಜಿಲ್ಲೆಯ ಸಕಲೇಶಪುರ ಭಾಗದ ಕೆಲ ತೋಟಗಳಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಿದ್ದೇನೆ. ಮೂರೂ ಜಿಲ್ಲೆಗಳಲ್ಲಿ ಒಟ್ಟಾರೆ ಸುಮಾರು ಶೇ 60ರಷ್ಟು ಬೆಳೆ ಹಾನಿಯಾಗಿದೆ. ಮಳೆ ಇನ್ನು ಕೆಲ ದಿನ ಹೀಗೆಯೇ ಮುಂದುವರಿದರೆ ಬೆಳೆ ಕೈಗೇ ಸಿಗುವುದೇ ಇಲ್ಲ’ ಎಂದು ಬೆಳೆಗಾರರೂ ಆಗಿರುವ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌.ಭೋಜೇಗೌಡ ಆತಂಕ ವ್ಯಕ್ತಪಡಿಸಿದರು.

‘ಕೆಲವು ಕಡೆ ಕಾಫಿತೋಟಗಳಲ್ಲಿ ಗಿಡಮರಗಳು ನೆಲಕ್ಕುರುಳಿವೆ. ಮಳೆ, ಕೆಸರಿನಿಂದಾಗಿ ತೋಟದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಲು ಆಗಿಲ್ಲ. ತೋಟ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಕಳೆದ ವರ್ಷ ಕಾಫಿ ಗಿಡಗಳಿಗೆ ಬಿಳಿಕಾಂಡಕೊರಕ ಹುಳು ಬಾಧಿಸಿತ್ತು. ಹಾನಿ ಬಗ್ಗೆ ಕಾಫಿ ಮಂಡಳಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮೂರು ಜಿಲ್ಲೆಗಳಲ್ಲಿ ಕಾಫಿ ತೋಟ ಒಟ್ಟು 2.35 ಲಕ್ಷ ಹೆಕ್ಟೇರ್‌ ಇದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ 70 ರಷ್ಟು ಕರ್ನಾಟಕದಲ್ಲಿಯೇ ಉತ್ಪಾದನೆಯಾಗುತ್ತದೆ. ಸುಮಾರು 120 ದೇಶಗಳಿಗೆ ಕಾಫಿ ರಫ್ತು ಮಾಡಲಾಗುತ್ತದೆ. ಈ ವಾಣಿಜ್ಯ ಬೆಳೆಯು ಸುಮಾರು 15 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಿದೆ.

ಅತೀವ ಮಳೆ ಮತ್ತು ರೋಗಬಾಧೆಯಿಂದಾಗಿ ಕಾಫಿ ಬೆಳೆಗಾರರು, ಕಾರ್ಮಿಕರಲ್ಲಿ ಕಾರ್ಮೋಡ ಆವರಿಸಿದೆ. ಕೊಡಗು ಜಿಲ್ಲೆಯೊಂದರಲ್ಲೇ 1.06 ಲಕ್ಷ ಹೆಕ್ಟೇರ್‌ ಕಾಫಿ ತೋಟಗಳಿವೆ. ಈ ಜಿಲ್ಲೆಯಲ್ಲಿ ಮಹಾಮಳೆಗೆ ಗುಡ್ಡ, ಧರೆ ಕುಸಿದಿದ್ದು ಕೆಲವೆಡೆ ತೋಟಗಳೇ ನಾಶವಾಗಿವೆ. ನೆರೆಗೆ ಗಿಡಮರಗಳು ಕೊಚ್ಚಿ ಹೋಗಿವೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯ ಬಹಳಷ್ಟು ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ.

‘1961ರ ನಂತರ ಈಗಲೇ ಇಷ್ಟೊಂದು ಮಳೆಯಾಗಿರುವುದು. ಎಡಬಿಡದ ಮಳೆ, ಮೋಡ ಕವಿದ ವಾತಾವರಣದಿಂದ ಕಾಫಿ ಗಿಡಗಳ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕಾಫಿಗಿಡಗಳು ಚೇತರಿಸಿಕೊಳ್ಳಲು ಎರಡು ವರ್ಷಗಳೇ ಬೇಕು. ರೋಗ ಬಾಧೆಯ ಪರಿಣಾಮ ನಿಧಾನವಾಗಿ ಗೋಚರಿಸುತ್ತದೆ. ಕಾಫಿಕಾಯಿ ಗೊಂಚಲಗಳನ್ನು ಹಾಳು ಮಾಡುತ್ತದೆ. ಅರೇಬಿಕಾ ಗಿಡಗಳು ಮಳೆಯನ್ನು ತಡೆದುಕೊಳ್ಳುವುದಿಲ್ಲ. ರೋಬಸ್ಟಾ ಗಿಡ ಮಳೆ ತಡೆದುಕೊಳ್ಳುತ್ತದೆ’ ಎಂದು ಸಂಶೋಧಕರೂ ಆಗಿರುವ ಬೆಳೆಗಾರ ಪ್ರದೀಪ್‌ ಕೆಂಜಿಗೆ ಹೇಳುತ್ತಾರೆ.

‘ಈಗಾಗಲೇ ಕಾಫಿ ದರ ಕುಸಿತದಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಾರೆ. ಅತಿವೃಷ್ಟಿ ಬೆಳೆಗಾರರಿಗೆ ಬರೆ ಎಳೆದಿದೆ. ಸಾಮಾನ್ಯವಾಗಿ ಎಕರೆಗೆ 7 ಮೂಟೆ (ಒಂದು ಮೂಟೆಗೆ 50 ಕಿ.ಗ್ರಾಂ) ಇಳುವರಿ ಪಡೆಯಬಹುದು. ಒಂದು ಮೂಟೆಗೆ ₹ 6,000 ದರ ಇದೆ. ಉತ್ಪಾದನಾ ವೆಚ್ಚ ಎಕರೆಗೆ ₹ 58,000 ತಗಲುತ್ತದೆ. ಈ ವರ್ಷ ಎಕರೆಗೆ ಎರಡು ಅಥವಾ ಮೂರು ಮೂಟೆ ಸಿಗಬಹುದು ಅಷ್ಟೇ. ಎಕರೆಗೆ ಸುಮಾರು ₹ 30 ಸಾವಿರ ನಷ್ಟವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಮೂರೂ ಜಿಲ್ಲೆಯಿಂದ ಈ ಬಾರಿ ಅತಿವೃಷ್ಟಿಗೆ ₹ 2,000 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಅಂದಾಜು ಮಾಡಿದೆ. 2017-18ನೇ ಸಾಲಿನಲ್ಲಿ ಕಾಫಿ ರಫ್ತಿನಿಂದ ಕೇಂದ್ರ ಸರ್ಕಾರಕ್ಕೆ ₹ 3,882 ಕೋಟಿ ಸಂದಾಯವಾಗಿದೆ. ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂಬುದು ಕೆಜಿಎಫ್‌ ಅಧ್ಯಕ್ಷ ಬಿ.ಎಸ್‌.ಜೈರಾಂ, ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥ ಮಲ್ಲೇಶ್‌ ಅವರ ಮನವಿ.

************
ಕಾಫಿ ಬೆಳೆ ಹಾನಿ ಸಮೀಕ್ಷೆಯನ್ನು ಜುಲೈನಲ್ಲಿ ಆರಂಭಿಸಲಾಗಿತ್ತು. ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಕಡಿಮೆಯಾದ ನಂತರ, ಮೂರು ಜಿಲ್ಲೆಗಳಲ್ಲಿ ಪ್ರಕ್ರಿಯೆ ಮುಂದುವರಿಸಲಾಗುವುದು.
ಡಾ.ವೈ.ರಘುರಾಮುಲು, ನಿರ್ದೇಶಕ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಚಿಕ್ಕಮಗಳೂರು

                                  ಮೂರು ಜಿಲ್ಲೆಗಳ ಕಾಫಿ ತೋಟ ಪ್ರದೇಶ

ಜಿಲ್ಲೆಅರೇಬಿಕಾರೋಬಸ್ಟಾ 
ಚಿಕ್ಕಮಗಳೂರು58,17532,196
ಕೊಡಗು28,10478,423
ಹಾಸನ24,94613,594 
ಒಟ್ಟು1,11,2251,24,213

              (ಮಾಹಿತಿ ಮೂಲ: ಕಾಫಿ ಮಂಡಳಿ, ಪ್ರದೇಶ – ಹೆಕ್ಟೇರ್‌ಗಳಲ್ಲಿ)

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು