ಬಾಬಾ ಬುಡನ್‌ಗಿರಿ ದತ್ತಪೀಠದ ಪೂಜಾವಿಧಿ: ಮಾಹಿತಿ ಕೇಳಿದ ಹೈಕೋರ್ಟ್‌

7

ಬಾಬಾ ಬುಡನ್‌ಗಿರಿ ದತ್ತಪೀಠದ ಪೂಜಾವಿಧಿ: ಮಾಹಿತಿ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ‘ಬಾಬಾ ಬುಡನ್‌ಗಿರಿ ಗುರು ದತ್ತಾತ್ರೇಯ ಪೀಠ’ ದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸುವ ತಕರಾರನ್ನು ಬಗೆಹರಿಸಿ, ಕೋಮು ಸೌಹಾರ್ದ ಸ್ಥಾ‍‍ಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಹಿಂದೂ ಹಾಗೂ ಮುಸ್ಲಿಮರ ಪೂಜೆ ನೆರವೇರಿಲು ಪ್ರತ್ಯೇಕ ವ್ಯವಸ್ಥೆ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಪೀಠದ ಪೂಜಾ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಾರ್ಚ್ 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಸೂಚನೆ ನೀಡಿದೆ.

ಅರ್ಜಿದಾರರ ಪರ ವಕೀಲ ವಾದ ಮಂಡಿಸಿದ ಜಗದೀಶ್ ಬಾಳಿಗ, ‘ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ಸರ್ಕಾರ ನೇಮಿಸಿದೆ. ಅವರೇ ಹಿಂದೂ ಪೂಜಾ ವಿಧಾನಗಳನ್ನು ನೇರವೇರಿಸುವಂತಾಗಿದೆ.ಹಿಂದೂ ಅರ್ಚಕರನ್ನು ನೇಮಿಸಲು ಕೋರಿದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ‘ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಸರ್ಕಾರದ ಆದೇಶ ಒಂದು ಕೋಮಿನವರ ಪರವಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದು ಸಮಂಜಸವಲ್ಲ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪೀಠದಲ್ಲಿ ಕೋಮು ಸೌಹಾರ್ದ ಮೂಡಿಸುವ ಅಗತ್ಯವಿದೆ. ಇದೇ ಉದ್ದೇಶವನ್ನು ಸರ್ಕಾರವೂ ಹೊಂದಿದ್ದರೆ, ಸರ್ಕಾರವು ತನ್ನ ಹಿಂದಿನ ಆದೇಶ ಮಾರ್ಪಡಿಸಲು ಸಾಧ್ಯವಿದೆಯೇ ಹಾಗೂ ಎರಡೂ ಕೋಮುಗಳ ಪದ್ಧತಿಯ ಪೂಜಾ ವಿಧಿ ವಿಧಾನ ನೆರವೇರಿಸಿಕೊಡಲು ಎರಡೂ ಕೋಮಿಗೆ ಸೇರಿದವರನ್ನು ನೇಮಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ಉಪಾಯವನ್ನು ಸರ್ಕಾರವೇ ಕಂಡುಹಿಡಿಯಬೇಕು’ ಎಂದರು.

‘ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮಾಹಿತಿ ಪಡೆದು ತಿಳಿಸಿ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ದಿನೇಶ್ ರಾವ್ ಅವರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !