ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ಉತ್ತಮ ಬೇಸಾಯ ಪದ್ಧತಿಯಿಂದ ಹೆಚ್ಚಿನ ಇಳುವರಿ: ಎಂ.ಶಿವಪ್ರಸಾದ್

ಬಡವನದಿಣ್ಣೆ; ಭತ್ತದ ಬೆಳೆಯ ಕ್ಷೇತ್ರೋತ್ಸವ
Published 29 ಡಿಸೆಂಬರ್ 2023, 13:16 IST
Last Updated 29 ಡಿಸೆಂಬರ್ 2023, 13:16 IST
ಅಕ್ಷರ ಗಾತ್ರ

ಮೂಡಿಗೆರೆ: ‘ಭತ್ತ ಬೆಳೆಗಾರರು ಉತ್ತಮ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಎಂ.ಶಿವಪ್ರಸಾದ್ ಹೇಳಿದರು.

ತಾಲ್ಲೂಕಿನ ಬಡವನದಿಣ್ಣೆ ಗ್ರಾಮದ ಪ್ರಗತಿಪರ ರೈತ ರವಿ ಅವರ ಗದ್ದೆಯಲ್ಲಿ ಶುಕ್ರವಾರ ನಡೆದ ಭತ್ತದ ಬೆಳೆ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭತ್ತ ಮಲೆನಾಡಿನ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 11,068 ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಮುಂಗಾರಿನ ಪ್ರಾರಂಭದಲ್ಲಿ ಭಾರತಿ ಬೈಲು ಭಾಗದ ಆಯ್ದ ಹತ್ತು ಮಂದಿ ಬೆಳೆಗಾರರಿಗೆ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ ‘ಸಹ್ಯಾದ್ರಿ ಕೆಂಪು ಮುಕ್ತಿ’ ಎಂಬ ಭತ್ತದ ತಳಿಯ ಬೀಜವನ್ನು ಒದಗಿಸಲಾಗಿತ್ತು. ಈ ಹೊಸ ತಳಿಯ ಪೈರು ಕಟಾವಿನ ಹಂತಕ್ಕೆ ಬಂದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಿದೆ’ ಎಂದರು.

ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ ನಾಗೇಶ್ ಗೌಡ ಮಾತನಾಡಿ, ‘ಮಲೆನಾಡಿನಲ್ಲಿ ಭತ್ತದ ಬೆಳೆಯು ಕ್ಷೀಣಿಸುತ್ತಿದ್ದು, ಅದಕ್ಕೆ ವನ್ಯಪ್ರಾಣಿಗಳ ಹಾವಳಿ ಹಾಗೂ ಕಾರ್ಮಿಕರ ಕೂಲಿ ದುಬಾರಿಯಾಗಿರುವುದು ಕಾರಣವಾಗಿದೆ. ಕೃಷಿ ವಿಜ್ಞಾನಿಗಳೊಡನೆ ಸಂಪರ್ಕ ಇರಿಸಿಕೊಂಡು ಸುಧಾರಿತ ಬೇಸಾಯ ನಡೆಸಿದರೆ ಭತ್ತದ ಬೆಳೆಯಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ ಕೃಷ್ಣಮೂರ್ತಿ ಮಾತನಾಡಿ, ಸಹ್ಯಾದ್ರಿ ಕೆಂಪು ಮುಕ್ತಿ ತಳಿಯ ಭತ್ತವು 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಹೆಚ್ಚಿನ ಇಳುವರಿ ನೀಡುವ ತಳಿಯಾಗಿದ್ದು, ಹುಲ್ಲು ಸಹ ಹುಲುಸಾಗಿ ಬೆಳೆಯುವುದರಿಂದ ರೈತರಿಗೆ ಮೇವಿನ ರೂಪದಲ್ಲೂ ಹೆಚ್ಚಿನ ಲಾಭವಾಗುತ್ತದೆ’ ಎಂದರು.

ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಎಂ.ವೈ ಉಲ್ಲಾಸ್ ಭತ್ತದಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಪ್ರಗತಿಪರ ರೈತರಾದ ಬಡವನದಿಣ್ಣೆ ಲಕ್ಷ್ಮಣಗೌಡ, ರವಿಶಂಕರ್, ಬಿ.ವೈ ರವಿ, ರಂಜಿತ್, ಕೃಷ್ಣೇಗೌಡ, ಪರಮೇಶ್ ಇದ್ದರು.

ಮೂಡಿಗೆರೆ ತಾಲ್ಲೂಕಿನ ಬಡವನದಿಣ್ಣೆಯಲ್ಲಿ ಶುಕ್ರವಾರ ನಡೆದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಅಧಿಕ ಇಳುವರಿಯ ಸಹ್ಯಾದ್ರಿ ಕೆಂಪುಮುಕ್ತಿ ತಳಿಯ ಪೈರನ್ನು ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು
ಮೂಡಿಗೆರೆ ತಾಲ್ಲೂಕಿನ ಬಡವನದಿಣ್ಣೆಯಲ್ಲಿ ಶುಕ್ರವಾರ ನಡೆದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಅಧಿಕ ಇಳುವರಿಯ ಸಹ್ಯಾದ್ರಿ ಕೆಂಪುಮುಕ್ತಿ ತಳಿಯ ಪೈರನ್ನು ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT