ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದ ಹೊಯ್ಸಳರ ಕಾಲದ 10 ವೀರಗಲ್ಲುಗಳ ಅಧ್ಯಯನ

ಚಿಕ್ಕಮಗಳೂರು ತಾಲ್ಲೂಕಿನ ಹಿರೇಗೌಜ ಗ್ರಾಮ
Last Updated 3 ಜನವರಿ 2021, 14:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಹಿರೇಗೌಜ ಗ್ರಾಮದಲ್ಲಿ ಹೊಯ್ಸಳರ ಕಾಲದ ಹತ್ತು ವೀರಗಲ್ಲುಗಳು ಇವೆ. ಈ ಪ್ರದೇಶದಲ್ಲಿ ಗಡಿಕಾಳಗ, ಗೋಗ್ರಹಣ ಕಾಳಗಗಳು ನಡೆದಿವೆ ಎಂಬುದಕ್ಕೆ ಆಧಾರವಾಗಿವೆ ಎಂದು ಸಂಶೋಧಕ ಎಚ್.ಆರ್.ಪಾಂಡುರಂಗ ತಿಳಿಸಿದ್ದಾರೆ.

ಹಿರೇಗೌಜ ಗ್ರಾಮಸ್ಥರಾದ ಮೇಲುಗಿರಿಯಪ್ಪ, ಪ್ರದೀಪ್, ಅರುಣ, ಎಚ್.ಎನ್.ಮಲ್ಲಿಕಾರ್ಜುನ, ಎಚ್.ಎಸ್.ರವಿ, ಎಚ್.ಆರ್. ಕಾಂತರಾಜ್ ಸಹಕಾರದೊಂದಿಗೆ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸಿ ವೀರಗಲ್ಲುಗಳನ್ನು ಅಧ್ಯಯನ ಮಾಡಿದ್ದಾರೆ.

ಕಲ್ಯಾಣ ಚಾಲುಕ್ಯರ ಮಂಡಲೇಶ್ವರರಾಗಿ ಗಂಗವಾಡಿ ಪ್ರದೇಶವನ್ನು ಆಳುತ್ತಿದ್ದ ಹೊಯ್ಸಳರ ಕಾಲದಲ್ಲಿ ಆಸಂದಿ ನಾಡಿನ ಪ್ರಾಚೀನ ಹಿರೇಗೌಜವು ಕಾಳಾಮುಖ ಶೈವಸಂಪ್ರದಾಯದ ಕೇಂದ್ರ ಸ್ಥಾನವಾಗಿತ್ತು ಎಂದು ವಿವರಿಸಿದ್ದಾರೆ. ವೀರಗಲ್ಲುಗಳಲ್ಲಿನ ಚಿತ್ರಣಗಳನ್ನು ಪರಿಚಯಿಸಿದ್ದಾರೆ.

ಹಿರೇಗೌಜದ ಭೂತಪ್ಪನ ದೇಗುಲದ ಇಕ್ಕೆಲ, ಗ್ರಾಮದ ಪ್ರವೇಶ ದ್ವಾರದ ಇಕ್ಕೆಲದಲ್ಲಿ ತಲಾ ಎರಡು, ಈಶ್ವರ ದೇಗುಲದ ಹಿಂದಿನ ಅರಳಿಮರದ ಬುಡದಲ್ಲಿ ಮೂರು, ಗ್ರಾಮದ ಕೆರೆಗೆ ನೀರು ಹರಿಯುವ ಕಾಲುವೆ ದಡದಲ್ಲಿ ಎರಡು, ಬಳಲಿಕ್ಕವ್ವನ ಕೊಂಡದ ಮುಂದೆ ಒಂದು ಒಟ್ಟು 10 ವೀರಗಲ್ಲುಗಳು ಇವೆ.

ಹೊಯ್ಸಳರ ಕಾಲದ ಈಶ್ವರ ದೇಗುಲ: ಗ್ರಾಮದ ಕೆರೆ ಏರಿ ಮೇಲೆ ಹೊಯ್ಸಳರ ಕಾಲದ ಈಶ್ವರ ದೇಗುಲವಿದ್ದು, ಅಲ್ಲಿ ಸುಂದರ ಶಿವಲಿಂಗ, ಕಾಲಭೈರವನ ವಿಗ್ರಹ ಇವೆ. ಕೆರೆಯ ಸೋಪಾನಗಳ ಮೇಲೆ ಕಲ್ಯಾಣ ಚಾಲುಕ್ಯರ ಕಾಲದ ಹಾಗೂ ಹೊಯ್ಸಳರ ಕಾಲದ ತಲಾ ಒಂದು ಸೂರ್ಯ ವಿಗ್ರಹ ಇದೆ.

ಹತ್ತೂ ವೀರಗಲ್ಲುಗಳು ಈಶ್ವರ ದೇಗುಲದ ಹಿಂದಿನ ಬಯಲು ಪ್ರದೇಶದಲ್ಲಿಯೇ ಸ್ಥಾಪನೆಯಾಗಿವೆ. ಈ ಪ್ರದೇಶದಲ್ಲಿ ಗಡಿ ಕಾಳಗ, ಗೋಗ್ರಹಣದ ಹಲವು ಯುದ್ಧಗಳು ನಡೆದು ಯುದ್ಧದಲ್ಲಿ ಮಡಿದ ವೀರರ ಸ್ಮಾರಕವಾಗಿ ನಾಡಪ್ರಭುಗಳು ಅಥವಾ ಗ್ರಾಮಸ್ಥರು ಸ್ಥಾಪಿಸಿರಬಹುದು.

ಈ ವೀರಗಲ್ಲುಗಳ ಮೇಲ್ಭಾಗದಲ್ಲಿ ಜಟಾಧಾರಿ ಕಾಳಾಮುಖ ಯತಿಗಳು ಶಿವಲಿಂಗಾರ್ಚನೆ ಮಾಡುತ್ತಿರುವ ಚಿತ್ರಣ ಇವೆ. ಈಶ್ವರ ದೇಗುಲದಲ್ಲಿ ಕಾಲಭೈರವನ ವಿಗ್ರಹ ಇದೆ. ಕಾಳಾಮುಖ ಶೈವರು ಕಾಲಭೈರವನ ಆರಾಧನೆ ಮಾಡುತ್ತಿದ್ದರು. ಹೀಗಾಗಿ, ಆಸಂದಿ ನಾಡಿನ ಹಿರೇಗೌಜದ ಈಶ್ವರ ದೇಗುಲವು ಹೊಯ್ಸಳರ ಕಾಲದಲ್ಲಿ ಕಾಳಾಮುಖ ಶೈವರ ಪ್ರಮುಖ ಶ್ರದ್ಧಾ ಕೇಂದ್ರವಾಗಿತ್ತು.

ಸೂರ್ಯಾರಾಧನೆ- ನಾಗಾರಾಧನೆ, ಸಪ್ತ ಮಾತೃಕೆಯರ ಆರಾಧನೆ ನಡೆಯುತ್ತಿದ್ದವು. ಈ ಪ್ರದೇಶ ನಾಡಪ್ರೇಮಿಗಳ ವೀರಭೂಮಿಯಾಗಿತ್ತು ಎನ್ನುವುದಕ್ಕೆ ಈ ವೀರಗಲ್ಲುಗಳು, ಸೂರ್ಯ ವಿಗ್ರಹಗಳು, ಕಾಲಭೈರವನ ವಿಗ್ರಹ, ನಾಗಶಿಲ್ಪಗಳು ಸಾಕ್ಷೀಭೂತವಾಗಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT