ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಶೀಟರ್ ಕಾಲಿಗೆ ಗುಂಡೇಟು: ಪೊಲೀಸರಿಂದಲೇ ಆರೈಕೆ

Published 4 ನವೆಂಬರ್ 2023, 21:46 IST
Last Updated 4 ನವೆಂಬರ್ 2023, 21:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಾಕುವಿನಿಂದ ಇರಿಯಲು ಯತ್ನಿಸಿ ಪೊಲೀಸರಿಂದ ಕಾಲಿಗೆ ಗುಂಡೇಟು ತಿಂದಿರುವ ರೌಡಿಶೀಟರ್‌, ಕುಟುಂಬದವರಿಗೂ ಬೇಡವಾಗಿದ್ದು ಮಾನವೀಯತೆ ಆಧಾರದಲ್ಲಿ ಪೊಲೀಸರೇ ಆರೈಕೆ ಮಾಡುತ್ತಿದ್ದಾರೆ.

ಹಲವು ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ನರಸಿಂಹರಾಜಪುರ ತಾಲ್ಲೂಕಿನ ಮಾಗಲು ಗ್ರಾಮದ ಎಂ.ಕೆ.ಪೂರ್ಣೇಶ್‌ ಬಂಧಿಸಲು ಅ.30ರಂದು ಬೆಳಿಗ್ಗೆ ಮನೆ ಸುತ್ತುವರಿದಿದ್ದರು. ಪೊಲೀಸರ ಮೇಲೆ ಆರೋಪಿ ದಾಳಿಗೆ ಮುಂದಾದಾಗ ಪಿಎಸ್ಐ ದಿಲೀಪ್‌ಕುಮಾರ್ ಅವರು ಪೂರ್ಣೇಶ್ ಕಾಲಿಗೆ ಗುಂಡು ಹೊಡೆದಿದ್ದರು.

ಮುಂಗಾಲಿನ ಪ್ರಮುಖ ರಕ್ತನಾಳಕ್ಕೆ ಗುಂಡೇಟು ತಗುಲಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಪೂರ್ಣೇಶ್ ಚೇತರಿಸಿಕೊಳ್ಳುತ್ತಿದ್ದು, ಆರೋಪಿಯ ಪತ್ನಿಗೆ ವಿಷಯ ಮುಟ್ಟಿಸಿದ್ದರೂ ಪತಿ ನೋಡಲು ಬರಲು ನಿರಾಕರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  

ಇನ್‌ಸ್ಪೆಕ್ಟರ್‌ ಸೇರಿ ಐವರು ಪೊಲೀಸ್ ಸಿಬ್ಬಂದಿ ಜಯದೇವ ಆಸ್ಪತ್ರೆಯಲ್ಲಿ ಹಗಲು–ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿರುವ ಆರೋಪಿಯ ಆರೈಕೆ ಮಾಡುತ್ತಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ‘ಆರೋಪಿಯ ಸಂಬಂಧಿಕರಿಗೆ ತಿಳಿಸಿದರೂ ನೋಡಲು ಯಾರೂ ಬಂದಿಲ್ಲ. ರೌಡಿ ಶೀಟರ್ ಆದರೂ ಮಾನವೀಯತೆಯ ದೃಷ್ಟಿಯಿಂದ ನಮ್ಮ ಸಿಬ್ಬಂದಿಯೇ ಆರೈಕೆ ಮಾಡುತ್ತಿದ್ದಾರೆ. ಪೊಲೀಸರ ಮಾನವೀಯತೆಗೆ ಇದು ಉದಾಹರಣೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT