ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರ ಬದುಕಿಗೆ ಭರವಸೆ ನೀಡದ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ- ಗೊ.ರು.ಚನ್ನಬಸಪ್ಪ

ಜಾನಪದ ತೃತೀಯ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಗೊರುಚ
Last Updated 1 ಮೇ 2022, 5:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಗ್ರಾಮೀಣರ ಬದುಕಿಗೆ ಭರವಸೆ ಒದಗಿಸದ, ಜನಪದ ಸಂಸ್ಕೃತಿ ಸಂರಕ್ಷಿಸದ ಯಾವ ಸರ್ಕಾರವೂ ಹೆಚ್ಚು ಕಾಲ ಉಳಿಯಲು ಸಾಧ್ಯ ಇಲ್ಲ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.

ಜಾನಪದ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಾನಪದ ಜಿಲ್ಲಾ ತೃತೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಉದಾರೀಕರಣದಿಂದಾಗಿ ಸರ್ಕಾರದ ನೀತಿಗಳೆಲ್ಲವೂ ಉದ್ಯಮಪತಿಗಳ ಪರವಾಗಿಯೇ ಇವೆ. ರೈತರ ಪರವಾಗಿ ಇಲ್ಲ. ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಎಲ್ಲ ಪಕ್ಷದವರು ತಿಳಿದುಕೊಳ್ಳಬೇಕು’ ಎಂದರು.

‘ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಬಿಟ್ಟರೆ ನೆಹರೂ ಅಂತಹ ರಾಷ್ಟ್ರ ನಾಯಕರಿಗೂ ಹಳ್ಳಿಗಳ ಬಗ್ಗೆ ಲಕ್ಷ್ಯ ಇರಲಿಲ್ಲ. ನೆಹರೂ ಮುಂದಾಳತ್ವದ ಸ್ವತಂತ್ರ ಭಾರತದ ಸರ್ಕಾರ ಗ್ರಾಮ ಭಾರತದ ಬದಲಾಗಿ, ನಗರ ಭಾರತ ನಿರ್ಮಾಣದ ಕಡೆಗೆ ಒತ್ತು ನೀಡಿದರು. ಅದೇ ತಲೆಮಾರಿನಲ್ಲಿ ಬಂದ ರಾಜಕೀಯ ಸರ್ಕಾರಗಳು ನಗರದ ಕಡೆಗೆ ಗಮನ ಕೊಡುತ್ತಿವೆ’ ಎಂದು ವಿವರಿಸಿದರು.

‘ಸಿದ್ದಪ್ಪ ದೇವರಿಗೆ ಸಿಡಿಲು ಬಡಿದರೂ ಇದ್ದದ್ದನ್ನು ಇದ್ದಂತೆ ಹೇಳುವವರು ಹಳ್ಳಿಜನ. ಆದರೆ, ನಗರದ ಜನರ ಸಂಪರ್ಕದಿಂದಾಗಿ ಹಳ್ಳಿಗರು ಸಹಜವಾದ ನಡೆನುಡಿಗಳನ್ನು ಕೈಬಿಟ್ಟಿದ್ದಾರೆ. ನಗರದ ಕೃತಕ ವಾತಾವರಣ ಹಳ್ಳಿಗಳಿಗೂ ವ್ಯಾಪಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಳ್ಳಿಗಳಲ್ಲಿ ಹುಟ್ಟಿದ ಶೇ 80ಕ್ಕೂ ಹೆಚ್ಚು ಜನರು ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಹೋದವರು ತಾವು ಹುಟ್ಟಿದ ಹಳ್ಳಿಗಳ ಬಗ್ಗೆ ಅಲಕ್ಷ್ಯ ತೋರುವುದು ವ್ಯಸನದ ಸಂಗತಿ. ನಗರಗಳ ನೆಗೆದಾಟ ಹಳ್ಳಿಗಳ ಬದುಕನ್ನು ಅವಲಂಬಿಸಿದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

‘ಓದುಬರಹ ತಿಳಿಯದ ಜನ ತಲೆಮಾರಿನಿಂದ ಉಳಿಸಿಕೊಂಡು ಬಂದಿರುವ ಪರಂಪರೆಯೇ ಜಾನಪದ. ಹಳ್ಳಿಯ ಜನರು ಬದುಕಿನ ಅನುಭವದ ಮೇಲೆ ತಮ್ಮದೇ ಭಾಷೆಯಲ್ಲಿ ಪದ ಕಟ್ಟಿ ಹಾಡುತ್ತಾರೆ, ಕತೆ ಕಟ್ಟಿ ಹೇಳುತ್ತಾರೆ, ನಿಸರ್ಗದಿಂದ ಸ್ಫೂರ್ತಿ ಪಡೆದು ತಮ್ಮದೇ ರೀತಿಯಲ್ಲಿ ಕುಣಿಯುತ್ತಾರೆ. ಜಾನಪದದಲ್ಲಿನ ಸತ್ವ, ಸೌಂದರ್ಯ, ಬೆಡಗನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಆಧುನಿಕತೆಯ ಬಿರುಗಾಳಿಯ ನಡುವೆ ಜಾನಪದ ಕಣ್ಮರೆಯಾಗುತ್ತಿದೆ. ಜಾನಪದ ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಹಳ್ಳಿಗಳ ಋಣ ತೀರಿಸುವ ದೃಷ್ಟಿಯಿಂದ ಗ್ರಾಮ ಭಾರತ ಪ್ರತಿಷ್ಠಾನ ಎಂಬ ಸಂಸ್ಥೆ ಕಟ್ಟಿದ್ದೇವೆ. ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮೇಗೌಡ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ನಗರದಲ್ಲಿ ನೆಲೆಸಿರುವ ಹಳ್ಳಿಗರು ಹುಟ್ಟೂರಿಗೆ ಕೊಡುಗೆಗಳನ್ನು ನೀಡುವಂತೆ ಮಾಡುವ ಆಶಯದಿಂದ ಸಂಸ್ಥೆ ಕಟ್ಟಿದ್ದೇವೆ. ಸಂಸ್ಥೆಯಿಂದ ಈ ಜಿಲ್ಲೆಯೂ ಸಮಾವೇಶಗಳನ್ನು ಆಯೋಜಿಸುತ್ತೇವೆ ಎಂದರು.

ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ‘ಜನಪದ ಕಲಾವಿದರಿಗೆ ಮಾಸಾಶನ ಸಿಗುತ್ತಿಲ್ಲ. ಮೂರು ವರ್ಷಗಳಿಂದ ಅರ್ಜಿಗಳು ಬಾಕಿ ಇವೆ. ಮಾಸಾಶನ ನೀಡಲು ಸರ್ಕಾರ ಕ್ರಮ ವಹಿಸಬೇಕು’ ಎಂದರು.

‘ಜನಪದಕ್ಕೆ ಸಾವು ಇಲ್ಲ. ಅದು ಸಂಸ್ಕೃತಿಯ ತಾಯಿ ಬೇರು. ಸರ್ಕಾರ, ಜನಪ್ರತಿನಿಧಿಗಳು ಜನಪದ ನಿರ್ಲಕ್ಷ್ಯ ಮಾಡಬಾರದು. ಅದನ್ನು ನಿರ್ಲಕ್ಷ್ಯ ಮಾಡಿದವರಿಗೆ ಉಳಿಗಾಲ ಇಲ್ಲ’ ಎಂದು ಎಚ್ಚರಿಸಿದರು.

‘ಎಲ್ಲ ಉತ್ಸವಗಳಲ್ಲೂ ಜನಪದ ಕಲಾ ತಂಡಗಳು ಮುಂಚೂಣಿಯಲ್ಲಿ ಇವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು– ಯುವಜನರಿಗೆ ಜನಪದ ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ: ಬೆಳವಾಡಿಯ ಭಜನಾ ಕಲಾವಿದ ಬಿ.ಪಿ.ಪರಮೇಶ್ವರಪ್ಪ, ಅಜ್ಜಂಪುರದ ಕಾರೇಹಳ್ಳಿಯ ವೀರಗಾಸೆ ಕಲಾವಿದ ಬಸವರಾಜು ಗುರು ಹಾಗೂ ಕೊಪ್ಪ ತಾಲ್ಲೂಕು ನಾರ್ವೆಯ ಜನದಪ ಹಾಡುಗಾರ್ತಿ ಶ್ಯಾಮಲಾ ಅವರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೃತಿ ಬಿಡುಗಡೆ: ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸುರೇಶ್‌ ಅವರ ‘ಜಿಲ್ಲಾ ಜನಪದ ಕಲಾ ಸಾಧಕರು’ ಪುಸ್ತಕ ಬಿಡುಗಡೆ ಮಾಡಲಾಯಿತು.

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸುರೇಶ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ ಹಿರಿಗಯ್ಯ, ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಆರ್‌.ಗುರುನಾಥ ಗೌಡ, ಎನ್‌.ಆರ್‌.ಪುರ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಚ್‌.ಸಿ.ಈಶ್ವನಾಯಕ್‌, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್‌, ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಲಕ್ಷ್ಮೀದೇವಮ್ಮ, ಡಾ.ವಿನಾಯಕ ಸಿಂದಿಗೆರೆ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಜಶೇಖರ್‌, ವೀರಗಾಸೆ ಕಲಾವಿದ ಎಸ್‌.ಓಂಕಾರಪ್ಪ, ಕಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಸಾಹಿತಿ ಪ್ರೊ.ಬಸವರಾಜ ನೆಲ್ಲಿಸರ, ಕೆ.ಟಿ.ರಾಧಾಕೃಷ್ಣ, ಕೆ.ಕೆ.ಕೃಷ್ಣೇಗೌಡ, ವಿರೂಪಾಕ್ಷ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸೂರಿಶ್ರೀನಿವಾಸ್‌ ಇದ್ದರು.

***

ಜನಪದ ಉಳಿಸಲು ಜಾನಪದ ಪರಿಷತ್ತು ಶ್ರಮಿಸುತ್ತಿದೆ. ಜನಪದ ಕಲೆಗಳನ್ನು ಉಳಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನಾಡಿನ ಮೂಲೆಮೂಲೆಗೂ ಜಾನಪದ ವಿಚಾರ ತಲುಪಬೇಕು.

- ಎಂ.ಕೆ.ಪ್ರಾಣೇಶ್‌, ವಿಧಾನ ಪರಿಷತ್‌ ಸದಸ್ಯ

***

ವರ್ಷದಲ್ಲಿ ಒಂದು ದಿನ ಜಿಲ್ಲೆಯ ಎಲ್ಲ ಜನಪದ ಕಲಾವಿದರು ಒಂದು ಕಡೆ ಸೇರುವಂತಹ ವ್ಯವಸ್ಥೆ ಕಲ್ಪಿಸಬೇಕು. ಜನಪದಕ್ಕೆ ಒತ್ತು ನೀಡುವಂತೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಜನಪದ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಚನೆ ಇದೆ.

- ಎಂ.ಪಿ.ಕುಮಾರಸ್ವಾಮಿ, ಶಾಸಕ

***

‘ಸಿ.ಟಿ.ರವಿ ಸಮ್ಮೇಳನಕ್ಕೆ ಹಾಜರಾಗದೆ ಸಂದೇಶ ಕಳಿಸಿರುವುದು ಸರಿಯೇ?’

ಶಾಸಕ ಸಿ.ಟಿ.ರವಿ ಸಮ್ಮೇಳನದ ಉದ್ಘಾಟನೆಗೆ ಒಪ್ಪಿಕೊಂಡು ಹಾಜರಾಗದೆ ಸಂದೇಶ ಕಳಿಸಿರುವುದು ಸರಿಯೇ? ಎಂದು ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಪ್ರಶ್ನಿಸಿದರು.

‘ಕೆ.ಎಸ್‌. ಈಶ್ವರಪ್ಪ ಅವರು ಕಾರ್ಯಕ್ರಮ ಬರುವುದಾಗಿ ಒಪ್ಪಿದ್ದರು, ಅವರೂ ಬಂದಿಲ್ಲ. ರಾಜಕೀಯ ವ್ಯಕ್ತಿಗಳನ್ನು ನಂಬಿದರೆ ಹೀಗೆಯೇ ಆಗುತ್ತದೆ. ರಾಜಕಾರಣಿಗಳಿಗೆ ಜನರೇ ಬುದ್ಧಿಕಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜನಪದ ಜನರ ಕೆಲಸ, ಯಾರ ಮನೆಯ ಕೆಲಸವಲ್ಲ. ಒಪ್ಪಿಕೊಂಡ ಮೇಲೆ ಬರುವುದು ಅವರ ಕರ್ತವ್ಯವಲ್ಲವೇ’ ಎಂದು ಕೇಳಿದರು.

ಜಿಲ್ಲೆಯಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನ ನಡೆಸಲು ಮನಸ್ಸು ಬೇಕು. ಸಮ್ಮೇಳನ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

==

‘ಕಲಾವಿದರ ಮಾಸಾಶನ ₹ 3 ಸಾವಿರಕ್ಕೆ ಹೆಚ್ಚಿಸಿ’

ಜನಪದ ಕಲಾವಿದರ ಮಾಸಾಶನ ವನ್ನು ಮೂರು ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಮಾಳೇನಹಳ್ಳಿ ಬಸಪ್ಪ ಮನವಿ ಮಾಡಿದರು.

ಕಲಾವಿದರ ಪ್ರೋತ್ಸಾಹ ನೀಡಬೇಕು. ಕಲಾಸಕ್ತರಿಗೆ ತರಬೇತಿ ನೀಡಿ ಜನಪದ ಕಲೆಗಳನ್ನು ಉಳಿಸಬೇಕು ಎಂದು ಹೇಳಿದರು.

ಡಾ.ಎಚ್‌.ಎಲ್‌. ನಾಗೇಗೌಡ ಅವರು ಜನಪದ ಉಳಿಸಿ ಬೆಳೆಸಲು ಶ್ರಮಿಸಿದರು. ರಾಮನಗರದಲ್ಲಿ ಅವರು ಕಟ್ಟಿರುವ ಜಾನಪದ ಲೋಕಕ್ಕೆ ಎಲ್ಲರೂ ಒಮ್ಮೆ ಭೇಟಿ ನೀಡಬೇಕು ಎಂದರು.

ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಜನಪದ ಹಾಡು, ನೃತ್ಯ ಎಲ್ಲವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT