ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಂತಿಗಳು ಆಚರಣೆಗೆ ಸೀಮಿತವಾಗದಿರಲಿ: ಶಾಸಕ ಕೆ.ಎಸ್.ಆನಂದ್

ಭೋವಿ ಸಮಾಜದಿಂದ ನಡೆದ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಆನಂದ್
Published 15 ಜನವರಿ 2024, 13:29 IST
Last Updated 15 ಜನವರಿ 2024, 13:29 IST
ಅಕ್ಷರ ಗಾತ್ರ

ಕಡೂರು: ‘ಮಹಾಪುರುಷರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆದರ್ಶ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಅವರಿಗೆ ಸಲ್ಲುವ ನಿಜವಾದ ಗೌರವ’ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.

ಸೋಮವಾರ ಕಡೂರಿನಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಭೋವಿ ಸಮಾಜ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಪುರುಷರು ಜನಿಸಿದ ಈ ನೆಲದಲ್ಲೇ ಜನಿಸಿದ ಕಾಯಕಯೋಗಿ ಗುರು ಸಿದ್ದರಾಮೇಶ್ವರರು ಮನುಕುಲದ ಒಳಿತಿಗಾಗಿ ಶ್ತಮಿಸಿದರು. ಬಸವಣ್ಣನವರಿಂದ ಪ್ರಭಾವಿತರಾಗಿ ಅವರ ಅನುಭವ ಮಂಟಪದಲ್ಲಿ ಪ್ರಮುಖರಾಗಿದ್ದರು. ಅವರ ಸಿದ್ಧಾಂತಗಳು ಕೇವಲ ಭೋವಿ ಸಮುದಾಯ ಮಾತ್ರವಲ್ಲ ಸರ್ವ ಜನಾಂಗಕ್ಕೂ ಪ್ರಸ್ತುತವಾಗಿವೆ ಎಂದರು.

ಕಲ್ಲು ಒಡೆಯುವ ಕಾಯಕವನ್ನು  ನಂಬಿಕೊಂಡ ಭೋವಿ ಸಮುದಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.ಕಲ್ಲು ಒಡೆಯುವ ಜಾಗದಿಂದ ಒಕ್ಕಲೆಬ್ಬಿಸಿ ಅದನ್ನು ಕ್ರಷರ್‌ನವರಿಗೆ ನೀಡಲು ಬಿಡುವುದಿಲ್ಲ. ಪಟ್ಟಣದಲ್ಲಿರುವ ಭೋವಿ ವಿದ್ಯಾರ್ಥಿ ನಿಲಯವಿದ್ದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಮುಂದಾದರೆ ಅದಕ್ಕೆ ಸಹಕಾರ ನೀಡುತ್ತೇನೆ. ಭೋವಿ ಜನಾಂಗದವರು ವಾಸಿಸುವ ಕಾಲೋನಿಗಳಿಗೆ ಸಮುದಾಯ ಭವನಗಳೂ ಸೇರಿದಂತೆ ಮೂಲಸೌಕರ್ಯವನ್ನು ಹಂತ ಹಂತವಾಗಿ ಕಲ್ಪಿಸಿ  ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೊಲ್ಲಾಭೋವಿ ಮಾತನಾಡಿ, ‘ಕಲ್ಲು ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಭೋವಿ ಜನಾಂಗ ಆಧುನಿಕ ಯಂತ್ರಗಳ ಭರಾಟೆಯಿಂದ ಕೆಲಸ ಕಡಿಮೆಯಾಗಿ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ ಉಂಟಾಗಿದೆ. ಸಮುದಾಯ ಸಂಘಟಿತವಾಗಬೇಕು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಾಗಿ ಹೋರಾಡಬೇಕು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಾತಿನಿಧ್ಯ ದೊರೆಯಬೇಕಿದೆ’ ಎಂದರು.

ತಹಶೀಲ್ದಾರ್ ಎಂ.ಪಿ.ಕವಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಡಿ.ಚಂದ್ರಶೇಖರ್ ಸಿದ್ದರಾಮೇಶ್ವರರ ಬಗ್ಗೆ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ, ತಾಲ್ಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎಂ.ಡಿ.ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಾಭೋವಿ, ನಿವೃತ್ತ ವಲಯ ಅರಣ್ಯಾಧಿಕಾರಿ ಫಾಲಾಕ್ಷಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ವಕೀಲ ತಿಪ್ಪೇಶ್,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಗ್ರಾಮಪಂಚಾಯಿತಿ ಸದಸ್ಯೆ ನಾಗಮ್ಮ ಮಲ್ಲಭೋವಿ ಇದ್ದರು.

‘ಸಮಸ್ಯೆಗಳಿಗೆ ಧ್ವನಿಯಾಗಿ’

ಕಲ್ಲು ಒಡೆಯುವ ಕಾರ್ಯವನ್ನೆ ನಂಬಿಕೊಂಡು ಜೀವಿಸುತ್ತಿದ್ದ ಭೋವಿ ಜನಾಂಗದವರಿಗೆ ಇಂದು ಕೆಲಸವಿಲ್ಲದಂತಾಗಿದೆ. ಉಳ್ಳವರು ಯಂತ್ರಗಳ ಸಹಾಯದಿಂದ ಕಲ್ಲು ಒಡೆಯುವ ಕಾರ್ಯ ಮಾಡುತ್ತಿರುವುದರಿಂದ ಕೈ ಕೆಲಸ ಮಾಡುವವರಿಗೆ ಕೆಲಸವಿಲ್ಲದೆ ಕೂರುವಂತಾಗಿದೆ. ಅವರಿಗಾಗಿ ತಾವು ರಚನಾತ್ಮಕ ಚಿಂತನೆ ನಡೆಸಬೇಕು. ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಪುರಸಭಾ ಸದಸ್ಯ ಭಂಡಾರಿ ಶ್ರೀನಿವಾಸ್ ಶಾಸಕರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT