ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಶವಗಳ ಮುಕ್ತಿದಾತ ಗಫೂರ್

180ಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ನೀಡಿದ ಸಂತೃಪ್ತಿ– ಕೋವಿಡ್‌ ಸಂದರ್ಭದಲ್ಲೂ ಸೇವೆ
Last Updated 3 ಅಕ್ಟೋಬರ್ 2021, 7:31 IST
ಅಕ್ಷರ ಗಾತ್ರ

ಕಡೂರು: ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಇವರೇ ಬೇಕು. ಆಸ್ಪತ್ರೆಯಲ್ಲಿ ವಿದ್ಯುತ್‌ ಕೈಕೊಟ್ಟರೆ, ವಾರ್ಡಿನಲ್ಲೇನೋ ತೊಂದರೆಯಾದರೆ ಅದನ್ನು ಪರಿಹರಿಸಲು ತಕ್ಷಣ ಮುಂದೆ ಬರುವ ವ್ಯಕ್ತಿ ಗಫೂರ್. ಮಾತ್ರವಲ್ಲ, ಇವರು ಅನಾಥ ಶವಗಳ ಪಾಲಿನ ಮುಕ್ತಿದಾತನೂ ಹೌದು.

ಕಡೂರು ಸುತ್ತಮುತ್ತ ಎಲ್ಲಿಯೇ ಆಗಲಿ ಅಪಘಾತ ಅಥವಾ ಇನ್ನೇನೋ ಅವಘಡಗಳು ನಡೆದು ಯಾರಾದರೂ ಮೃತರಾದರೆ ಕೂಡಲೇ ಕರೆ ಹೋಗುವುದು ಗಫೂರ್‌ಗೆ. ಕಡೂರಿನಲ್ಲಿ ಚಿರಪರಿಚಿತರಾಗಿರುವ ಅವರಿಗೆ ಮೃತದೇಹಗಳನ್ನು ಸಾಗಿಸುವುದು, ಅನಾಥ ಹೆಣಗಳಿಗೆ ಮುಕ್ತಿ ಕಾಣಿಸುವುದೇ ಕಾಯಕ.

ಅಬ್ದುಲ್ ಗಫೂರ್ ಕುಂದಾಪುರದವರು. ಉದರನಿಮಿತ್ತ ಇತ್ತ ಬಂದವರು ಒಂದು ಅಂಬಾಸಿಡರ್ ಕಾರು ಖರೀದಿಸಿ ಮೃತದೇಹಗಳನ್ನು ಸಾಗಿಸುವ ಕಾಯಕ ಆರಂಭಿಸಿದರು. ಅವರ ಕಾಯಕಕ್ಕೆ ಈಗ 23 ವರ್ಷ. ಕಡೂರಿನಲ್ಲಿ ಈ ಕಾಯಕ ಮಾಡುವ ಏಕೈಕ ವ್ಯಕ್ತಿ ಗಫೂರ್.

ಗಫೂರ್ ಅವರ ಇನ್ನೊಂದು ಗುರುತರ ಕೆಲಸವೆಂದರೆ ಅನಾಥ ಶವಗಳಿಗೆ ಮುಕ್ತಿ ನೀಡುವುದು. ವಾರಸುದಾರರಿಲ್ಲದ ಶವಗಳನ್ನು ಗೌರವಪೂರ್ವಕವಾಗಿ ಸ್ಮಶಾನಕ್ಕೆ ಕೊಂಡೊಯ್ದು, ಮಣ್ಣು ಮಾಡುವ ಪುಣ್ಯದ ಕಾಯಕ ಮಾಡುತ್ತಿದ್ದಾರೆ. ಗಫೂರ್ ಈ ರೀತಿ 180ಕ್ಕೂಹೆಚ್ಚು ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ.

ಸರ್ಕಾರಿ ವೈದ್ಯರು ನಡೆಸುವ ಶವದ ಮರಣೋತ್ತರ ಪರೀಕ್ಷೆ ಕಾರ್ಯಕ್ಕೆ ಗಫೂರ್ ಬೇಕೇ ಬೇಕು. ವೈದ್ಯರು ಬರುವ ವೇಳೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಕಾಯುವ ಗಫೂರ್, ಶವಪರೀಕ್ಷೆ ಆದ ಕೂಡಲೇ ನಂತರದ ಕೆಲಸ ಮುಗಿಸಿ ಸಂಬಂಧಿಕರಿಗೆ ಹಸ್ತಾಂತರಿಸುತ್ತಾರೆ. ಶವಪರೀಕ್ಷೆಯ ಸಮಯದಲ್ಲಿ ಬೇಕಾಗುವ ನೀಲಗಿರಿ ಎಣ್ಣೆಯನ್ನು ಎಷ್ಟೋ ಬಾರಿ ತಾನೇ ಹಣ ನೀಡಿ ತಂದಿದ್ದಾರೆ. ಗಫೂರ್ಈ ಕಾರ್ಯಕ್ಕಾಗಿ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂಬುದೇ ವಿಶೇಷ.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಕಡೂರಿನಲ್ಲಿ 28ಕ್ಕೂ ಹೆಚ್ಚು ಶವಗಳನ್ನು ಪಿಪಿಇ ಕಿಟ್ ಧರಿಸಿ ಏಕಾಂಗಿಯಾಗಿ ಸಂಸ್ಕಾರ ಮಾಡಿರುವುದು ಗಫೂರ್ ದೊಡ್ಡತನಕ್ಕೆ ಸಾಕ್ಷಿ.

ಗಫೂರ್ ಕಡೂರು ಸಾರ್ವಜನಿಕ ಅಸ್ಪತ್ರೆಯಲ್ಲಿ ಗುತ್ತಿಗೆ ಆಧಾರಿತ ನೌಕರರಾಗಿ ಕಾರ್ಯ ನಿರ್ವಹಿಸುತ್ತಾರೆ. ಪತ್ನಿ ಮತ್ತು ಒಬ್ಬ ಮಗಳ ಜೊತೆ ಸಂಸಾರ ಸಾಗಿಸುತ್ತಿರುವ ಗಫೂರ್ ಅವರನ್ನು ತಾಲ್ಲೂಕು ಆಡಳಿತ ರಾಜ್ಯೋತ್ಸವ ಸಮಯದಲ್ಲಿ ಗೌರವಿಸಿದೆ. ಕೋವಿಡ್‌ ಸಮಯದಲ್ಲಿ ಗಫೂರ್ ಅವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಕಡೂರಿನ ಸಂಘ ಸಂಸ್ಥೆಗಳೂ ಸನ್ಮಾನಿಸಿವೆ.

ಗಫೂರ್‌ ಅವರಿಗೊಂದು ಸ್ವಂತ ಮನೆಯಿಲ್ಲ, ನಿವೇಶನವೂ ಇಲ್ಲ. ಅವರು ಯಾರ ಬಳಿಯೂ ನನಗೆ ಮನೆ, ನಿವೇಶನ ಕೊಡಿಸಿ ಎಂದು ಕೇಳಿಲ್ಲ. ಕನಿಷ್ಠ ಒಂದು ನಿವೇಶನದ ವ್ಯವಸ್ಥೆಯಾದರೆ ಅವರ ನಿಸ್ವಾರ್ಥ ಸೇವೆಗೆ ತಕ್ಕ ಗೌರವವಾದೀತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT