ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಹಿಂದಿನ ತರಗತಿ ಸಾಮರ್ಥ್ಯ ಕಲಿಕೆ; ಶಿಕ್ಷಕರಿಗೆ ತರಬೇತಿ

2022 – 23ನೇ ಶೈಕ್ಷಣಿಕ ವರ್ಷ: ಕಲಿಕಾ ಚೇತರಿಕೆ ವರ್ಷ
Last Updated 11 ಮೇ 2022, 2:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೋವಿಡ್‌ ತಲ್ಲಣದಿಂದ ಮಕ್ಕಳಿಗಾದ ಕಲಿಕಾ ಕೊರತೆ ನೀಗಿಸಲು 2022 – 23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ’ ವರ್ಷವಾಗಿ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ತರಬೇತಿ ಶುರುವಾಗಿದೆ.
ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯಾ ಬ್ಲಾಕ್‌ಗಳಲ್ಲಿ ಎರಡು ದಿನ ತರಬೇತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಿಷಯಕ್ಕೆ (ಗಣಿತ, ವಿಜ್ಞಾನ...) ಸಂಬಂಧಿಸಿದಂತೆ ಪ್ರತಿ ಶಿಕ್ಷಕರಿಗೆ ಕೈಪಿಡಿ ಒದಗಿಸಲಾಗುತ್ತಿದೆ.
ವಿದ್ಯಾರ್ಥಿ ಈಗಿರುವ ತರಗತಿಗೆ ಬೇಕಾದ ಹಿಂದಿನ ತರಗತಿಯ ಕಲಿಕಾ ಸಾಮರ್ಥ್ಯವನ್ನು ಕಲಿಸುವ ಕ್ರಿಯೆ ಕಲಿಕಾ ಚೇತರಿಕೆ. ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ. ಶೈಕ್ಷಣಿಕ ವರ್ಷದ ಆರಂಭದಿಂದ ವರ್ಷಪೂರ್ತಿ ನಿರಂತರ ಕಲಿಕೆ ಪ್ರಕ್ರಿಯೆ ನಡೆಯಲಿದೆ.
ಕೋವಿಡ್‌ ತಲ್ಲಣದಿಂದ ಮಕ್ಕಳು ಎರಡು ವರ್ಷ ಭೌತಿಕ ತರಗತಿಗಳಿಗೆ ಹಾಜರಾಗಲಿಲ್ಲ, ಮುಂದಿನ ತರಗತಿಗೆ ಹೋಗಿದ್ದಾರೆ. ಎರಡು ವರ್ಷಗಳ ಕಲಿಯದ ಸಾಮರ್ಥ್ಯವನ್ನು ಒಳಗೊಂಡ ಪಠ್ಯ– ಅಭ್ಯಾಸ ಪುಸ್ತಕವನ್ನು ಮಕ್ಕಳಿಗೆ ಒದಗಿಸಲಾಗುವುದು.
‘ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ– 3712 ಶಿಕ್ಷಕರು, ಪ್ರೌಢಶಾಲೆಗಳ–767 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಡಯಟ್‌ನಲ್ಲಿ ಒಂದು ತಂಡದಲ್ಲಿ 40ರಿಂದ 50 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಕಲಿಕಾ ಚೇತರಿಕೆ ನೋಡಲ್‌ ಅಧಿಕಾರಿ ಎಂ.ಸಿ.ಕನ್ನಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಿನ ತರಗತಿಯ ಪಠ್ಯದ ಜೊತೆಗೆ ಹಿಂದಿನ ತರಗತಿಗಳ ಪ್ರಮುಖ ಪಠ್ಯಾಂಶಗಳನ್ನು ಕಲಿಸುತ್ತಾರೆ. 1ರಿಂದ 9 ನೇ ತರಗತಿವರೆಗೆ ಕಲಿಕಾ ಚೇತರಿಕೆ ಅನ್ವಯವಾಗುತ್ತದೆ. ಮೇ 16ರಿಂದ ತರಗತಿಗಳು ಆರಂಭವಾಗಲಿವೆ’ ಎಂದು ಅವರು ತಿಳಿಸಿದರು.
ಗುಣಮಟ್ಟದ ಶಿಕ್ಷಣ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ. ಶಿಕ್ಷಕರನ್ನು ಸನ್ನದ್ಧಗೊಳಿಸುವ ಕಾರ್ಯವು ಬಹುತೇಕ ಪೂರ್ಣಗೊಂಡಿದೆ.

‘ಕಲಿಕಾ ಚೇತರಿಕೆ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವ್ಯಾವ ಅಂಶಗಳನ್ನು ಕಲಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಿಂದ ಬಹಳ ಅನುಕೂಲವಾಗುತ್ತದೆ’ ಎಂದು ಹಿರೇಗೌಜ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ, ಶಿಬಿರಾರ್ಥಿ ಶರಣಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT