ಮಂಗಳವಾರ, ಜನವರಿ 21, 2020
25 °C
ಕಾಫಿನಾಡಿನ ಜಿಲ್ಲಾ ಕನ್ನಡ ಸಾಹಿತ್ಯ

ಸಾಹಿತ್ಯವಿಲ್ಲದ ಹೋರಾಟ, ಹೋರಾಟವಿಲ್ಲದ ಸಾಹಿತ್ಯ ಜೊಳ್ಳು: ಕಲ್ಕುಳಿ ವಿಠಲ ಹೆಗ್ಡೆ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಈ ಬಾರಿಯ ಜಿಲ್ಲಾ ನುಡಿ ಜಾತ್ರೆಗೆ ಸರ್ವಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹಗ್ಡೆ ಅವರನ್ನು ಆಯ್ಕೆ ಮಾಡಿರುವುದರಿಂದಲೇ ಸಮ್ಮೇಳನ ರಾಜ್ಯದ ಗಮನ ಸೆಳೆದಿದೆ. ಹೋರಾಟಗಾರ, ವಿಚಾರವಾದಿ, ಕೃಷಿಕ, ಸಾಹಿತಿ ವಿಠಲ ಹಗ್ಡೆ ಅವರು ಶೃಂಗೇರಿ ತಾಲ್ಲೂಕಿನ ಕಲ್ಕುಳಿ ಊರಿನವರು.

ಕೃಷಿಯಲ್ಲಿ ತೊಡಗಿದ್ದಾರೆ. ಮಲೆನಾಡಿನ ಬಗ್ಗೆ ಕಾಳಜಿ ಹೊಂದಿದ್ದಾರೆ. ಹಲವಾರು ಹೋರಾಟಗಳಲ್ಲಿ ಮುಂಚೂಣಿ ವಹಿಸಿದ್ದಾರೆ. ‘ಮಂಗನ ಬ್ಯಾಟೆ’ ಸಹಿತ ಮೂರ್ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ‘ಮಂಗನ ಬ್ಯಾಟೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈ ಕೃತಿ ಪಠ್ಯವೂ ಆಗಿದೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಈ ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.

* ಸೈದ್ಧಾಂತಿಕ ಸಂಘರ್ಷಗಳು ನುಡಿ ಹಬ್ಬಕ್ಕೆ ಕಂಟಕವಾಗುತ್ತಿವೆಯೇ?

–ಪೂರ್ವಗ್ರಹಪೀಡಿತವಾಗಿ ಜಾತಿ, ಸಿದ್ಧಾಂತಗಳನ್ನು ನುಡಿಹಬ್ಬಕ್ಕೆ ತಂದೊಡ್ಡಬಾರದು. ಎಡ–ಬಲ ಎಲ್ಲವನ್ನೂ ಮೀರಿ ಮನುಷ್ಯನನ್ನು ಮನುಷ್ಯನಾಗಿ ಮಾಡುವುದೇ ಸಾಹಿತ್ಯ. ಮನುಷ್ಯತ್ವದಿಂದ ಬದುಕುವಂತೆ ಮಾಡುವುದು ಸಾಹಿತ್ಯದ ಜವಾಬ್ದಾರಿ. ಸಾಹಿತ್ಯ ಸಮ್ಮೇಳನ ಕನ್ನಡ ಭಾಷೆಯ ಹಬ್ಬ. ಸಂತೋಷದಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಸಮ್ಮೇಳಾನಾಧ್ಯಕ್ಷ ಸ್ಥಾನ ಪದವಿಯಲ್ಲ. ಅದೊಂದು ಗೌರವ, ಪ್ರೀತಿ ಅಷ್ಟೆ.

* ‘ಮಂಗನ ಬ್ಯಾಟೆ’ ಸಹಿತ ನಾಲ್ಕು ಕೃತಿ ರಚಿಸಿರುವುದು ಬಿಟ್ಟರೆ ಸಾಹಿತ್ಯಕ್ಕೆ ಕೊಡುಗೆ ಹೆಚ್ಚಿಲ್ಲ ಎಂಬ ಮಾತುಗಳಿವೆಯಲ್ಲ…

–ಸಾಹಿತ್ಯದಲ್ಲಿ ಕೆಲಸ ಮಾಡಿದ್ದೇನೆ. ಒಂದು ಕೃತಿ ರಚಿಸಿ ಸಾಹಿತ್ಯದಲ್ಲಿ ನೊಬೆಲ್‌ ಪಡೆದವರಿದ್ದಾರೆ. 100 ಪುಸ್ತಕ ಬರೆದೂ ಏನು ಸಿಗದವರು ಇದ್ದಾರೆ. ಮೌಲಿಕ ಸಾಹಿತ್ಯ ರಚಿಸುವುದು ಮುಖ್ಯ. ಸಾಮಾಜಿಕ ಬದ್ಧತೆ, ಜವಾಬ್ದಾರಿ ಇರಬೇಕು. ಮಾನವೀಯ ಮೌಲ್ಯಗಳ ಬರಹ ಚಿರಕಾಲ ಬಾಳುತ್ತೆ. ಹೋರಾಟಗಳನ್ನು ಮಾಡಿದ್ದೇನೆ. ಸಾಹಿತ್ಯ ಮತ್ತು ಹೋರಾಟ ಬೇರೆಯಲ್ಲ. ಈ ಎರಡರ ಜವಾಬ್ದಾರಿಯೂ ಒಂದೇ. ಅದು ಸಮಾಜದ ಸಂಕಟಗಳನ್ನು ನಿವಾರಿಸುವುದು. ಸಾಹಿತ್ಯವಿಲ್ಲದ ಹೋರಾಟ ಮತ್ತು ಹೋರಾಟವಿಲ್ಲದ ಸಾಹಿತ್ಯ ಇವೆರಡೂ ಜೊಳ್ಳು. 

* ನಕ್ಸಲ್‌ ಪೋಷಕ ಎಂದು ಕೆಲವರು ಆರೋಪ ಮಾಡುತ್ತಾರಲ್ಲ..?

ಇದು ಆಧಾರವಿಲ್ಲದ ಆರೋಪ ಮತ್ತು ಕೆಲವರಿಗೆ ನೆಪ. ಹಿಂದೊಮ್ಮೆ ಪೊಲೀಸರು ನಕ್ಸಲ್‌ ಬೆಂಬಲಿಗರ ಪಟ್ಟಿಯೊಂದನ್ನು ಹೊರಡಿಸಿದ್ದರು. ಪಟ್ಟಿಯಲ್ಲಿ ಹೋರಾಟಗಾರರು, ಸಾಹಿತಿಗಳು ಇತರರು ಇದ್ದರು. ಪಟ್ಟಿ ಪ್ರಕಟಿಸಿದ ಮಾರನೇ ದಿನವೇ ಗೃಹ ಇಲಾಖೆ ಅದನ್ನು ವಾಪಸ್‌ ಪಡೆದಿತ್ತು. ಆರೋಪಿಸುವವರ ಬಳಿ ನಾನು ನಕ್ಸಲ್‌ ಬೆಂಬಲಿಗ ಎಂಬುದಕ್ಕೆ ಏನಾದರೂ ಸಾಕ್ಷ್ಯಇದ್ದರೆ ತೋರಿಸಲಿ. ಸಚಿವ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ದ್ವೇಷದಿಂದ ಆರೋಪದಲ್ಲಿ ತೊಡಗಿದ್ದಾರೆ. ನನ್ನ ಹೋರಾಟವನ್ನು ಬಗ್ಗು ಬಡಿಯಲು ಈ ಅಸ್ತ್ರ ಪ್ರಯೋಗಿಸಿದ್ದಾರೆ.

* ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆಹಿಡಿದಿರುವ ಬಗ್ಗೆ ಏನು ಹೇಳುತ್ತೀರಿ?

ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆ. ಅನುದಾನ ತಡೆ ಹಿಡಿದಿರುವುದು ಸರ್ವಾಧಿಕಾರಿ ಧೋರಣೆ ಮತ್ತು ಕನ್ನಡಕ್ಕೆ ಬಗೆಯುವ ದ್ರೋಹ. ಅನುದಾನ ನೀಡುವ ಕಾರಣಕ್ಕೆ ಅಡಿಯಾಳಗಿರಬೇಕು ಎಂದು ಬಯಸಬಾರದು.

* ಮಲೆನಾಡಿನ ಈಗಿನ ಸ್ಥಿತಿಗತಿ ಬಗ್ಗೆ ಏನು ಹೇಳುತ್ತೀರಿ?

ಮಲೆನಾಡು ಈಗ ಎರಡು ಕಾರಣಕ್ಕೆ ಅತ್ಯಂತ ಸಂಕಷ್ಟದಲ್ಲಿದೆ. ಪರಿಸರದ ಹೆಸರಿನಲ್ಲಿ ಜಾರಿ ಮಾಡುವ ಅರಣ್ಯ ಯೋಜನೆಗಳು ಒಂದು ಕಾರಣ. ಈ ಯೋಜನೆಗಳ ಉದ್ದೇಶವು ಜನರಹಿತ ಮಲೆನಾಡು ಮಾಡುವುದು. ಇನ್ನೊಂದು ಕಾರಣ ಮಲೆನಾಡಿನ ಕೃಷಿ ಬಿಕ್ಕಟ್ಟು. ಮಲೆನಾಡಿನಲ್ಲಿ 100ರಲ್ಲಿ ಸುಮಾರು 80 ಬೆಳೆಗಾರರು ಭತ್ತ ಬೆಳೆಯುವುದನ್ನು ಬಿಟ್ಟಿದ್ದಾರೆ. ಕೆಲವೇ ವರ್ಷಗಳಲ್ಲಿ ಅಡಿಕೆಯೂ ಮಲೆನಾಡಿನಿಂದ ಮಾಯವಾಗುವ ಅಪಾಯ ಇದೆ. ಭತ್ತದ ಬೆಳೆ ಅಳಿದರೆ ಅದಕ್ಕೆ ಸಂಬಂಧಿಸಿದ ಭಾಷೆ, ಸಾಹಿತ್ಯವೂ ಅಳಿಯುತ್ತದೆ. ಭಾಷೆ ಕಳೆದುಕೊಂಡು ಜನ ಗುಲಾಮರಾಗುತ್ತಾರೆ. ಇದು ದೊಡ್ಡ ಅಪಾಯ. ಸಾಹಿತಿಗಳು ಇದನ್ನು ಗಮನಿಸಬೇಕು. ಈ ಬಾರಿ ಜಿಲ್ಲೆಯ ಮಲೆನಾಡಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಯಾಗಿದೆ. ಸಮ್ಮೇಳನ ಮಾಡದಿದ್ದರೂ ಪರವಾಗಿಲ್ಲ. ಸಮ್ಮೇಳನದ ಹಣವನ್ನು ಅತಿವೃಷ್ಟಿ ಪರಿಹಾರಕ್ಕೆ ನೀಡಿ ಎಂದು ಕಾರ್ಯಕಾರಿಣಿಯವರಿಗೆ ಸಲಹೆಯನ್ನೂ ನೀಡಿದ್ದೆ.

* ಸಾಹಿತ್ಯ ಸಮ್ಮೇಳನ ಭಾಷಣ, ನಿರ್ಣಯಗಳಿಗೆ ಸೀಮಿತವಾಗುತ್ತಿವೆಯೇ?

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೇನೆ. ಮಲೆನಾಡಿನ ಸಮಸ್ಯೆಗಳನ್ನು ನಿರ್ಣಯ ಮಾಡಿಸಿದ್ದೇನೆ. ಪ್ರತಿಭಟನೆ ಮಾಡಿದ್ದೇನೆ. ಆದರೆ, ನನಗೆ ಗೊತ್ತಿದ್ದಂತೆ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದರೂ ನಿರ್ಣಯಗಳನ್ನು ಪಾಲಿಸಿದ, ಜಾರಿಗೊಳಿಸಿದ ಯಾವ ಸರ್ಕಾರವೂ ಇಲ್ಲ. ನುಡಿ ಜಾತ್ರೆಯಲ್ಲಿ ಜನರ ಸಂಕಟ–ಸಮಸ್ಯೆಗಳನ್ನು ನಿರ್ಣಯಿಸುತ್ತೇವೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು