ಗುರುವಾರ , ಫೆಬ್ರವರಿ 20, 2020
25 °C

ಕರ್ಕಿಪೇಟೆ, ಐಯ್ಯನಹಳ್ಳಿ ಕಲ್ಯಾಣಿ: ದೀಪೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಕರ್ಕಿಪೇಟೆ, ಐಯ್ಯನಹಳ್ಳಿಯಲ್ಲಿ ಪುನರುಜ್ಜೀವನಗೊಳಿಸಿರುವ ಕಲ್ಯಾಣಿಗಳಲ್ಲಿ ಭಾನುವಾರ ದೀಪೋತ್ಸವ ಜರುಗಿತು.

ಯುವಾ ಬ್ರಿಗೇಡ್‌, ಶಕ್ತಿ ಕೇಂದ್ರ ಟ್ರಸ್ಟ್‌ ಮತ್ತು ಗ್ರಾಮಸ್ಥರು ಸಹಯೋಗದಲ್ಲಿ ಆಯೋಜಿಸಿದ್ದ ಈ ದೀಪೋತ್ಸವದಲ್ಲಿ ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಲ್ಯಾಣಿಗಳ ಬಳಿ ಹಬ್ಬದ ಸಂಭ್ರಮ ಮೇಳೈಸಿತ್ತು. ಪೂಜಾ ಕೈಂಕರ್ಯ ನೆರವೇರಿದವು.

ಆಳೆತ್ತರದ ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿದ್ದ ಈ ಕಲ್ಯಾಣಿಗಳನ್ನು ಯುವಾ ಬ್ರಿಗೇಡ್‌ನ ತರುಣರು, ಗ್ರಾಮಸ್ಥರು ಶ್ರಮದಾನ ಮಾಡಿ ಸ್ವಚ್ಛಗೊಳಿಸಿದ್ದಾರೆ. ಕಲ್ಯಾಣಿಗಳಲ್ಲಿ ನೀರು ಇದ್ದು, ಜನರಲ್ಲಿ ಖುಷಿ ಮೂಡಿಸಿದೆ.

ಎರಡು ಕಲ್ಯಾಣಿಗಳು ದೀಪಗಳನ್ನು ಬೆಳಕಿನಲ್ಲಿ ಕಂಗೊಳಿಸಿದವು. ಕಲ್ಯಾಣಿಗಳ ಸ್ವಚ್ಛತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ಕಿಪೇಟೆಯ ರೈತ ಈಶ್ವರಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಲ್ಯಾಣಿಗೆ ಶತಮಾನಕ್ಕೂ ಹೆಚ್ಚು ಇತಿಹಾಸ ಇದೆ. ಈ ಕಲ್ಯಾಣಿಯ ನೀರನ್ನು ಗ್ರಾಮಸ್ಥರು ಬಳಸುತ್ತಿದ್ದರು. ಸುಮಾರು 20 ವರ್ಷಗಳಿಂದ ಮುಚ್ಚಿಹೋಗಿತ್ತು. ಸ್ವಚ್ಛಗೊಳಿಸಿದ್ದು ಒಳ್ಳೆಯದಾಗಿದೆ. ಈ ಬಾರಿ ಮಳೆಯೂ ಚೆನ್ನಾಗಿ ಆಗಿತ್ತು. ಕಲ್ಯಾಣಿಯಲ್ಲಿ ನೀರು ಇದೆ. ನೋಡಲು ಸಂತೋಷವಾಗುತ್ತಿದೆ’ ಎಂದು ಖಷಿ ಹಂಚಿಕೊಂಡರು.

ಯುವ ಬ್ರಿಗೇಡ್‌ನ ವಿಸ್ತಾರಕ್‌ ಮಂಜುನಾಥ್‌, ಶಾಶ್ವತ್‌ ಭಟ್‌, ದೀಪಕ್‌ ಇತರರು ಇದ್ದರು.

***

‘ಕೆರೆ, ಕಲ್ಯಾಣಿ ಪುನರುಜ್ಜೀವನ ಕೈಂಕರ್ಯದಲ್ಲಿ ತೊಡಗಿಕೊಳ್ಳಿ’

ಕೆರೆ, ಕಲ್ಯಾಣಿ ಮೊದಲಾದ ಜಲಮೂಲಗಳನ್ನು ಉಳಿಸುವ, ಪುನರುಜ್ಜೀವನಗೊಳಿಸುವಂಥ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಯುವಾ ಬಿಗ್ರೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕರ್ಕಿಪೇಟೆಯ ಕಲ್ಯಾಣಿ ಸಮೀಪ ಏರ್ಪಡಿಸಿದ್ದ ಯುವಾ ದೀಪೊತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಸ್ರಾರು ಮಂದಿಗೆ ನೀರು ಪೂರೈಸುವ ಕೆರೆಗಳನ್ನು ಮುಚ್ಚುವುದು ದುರ್ದೈವದ ಸಂಗತಿ. ಕೆರೆಗಳನ್ನು ನುಂಗಿ ನೀರು ಕುಡಿದ ರಾಜಕಾರಣಿಗಳು ಇದ್ದಾರೆ. ಶ್ರೇಷ್ಠವಾದವನ್ನು ಮುಚ್ಚುವುದರಿಂದ ಪರಂಪರೆ ಉಳಿಯಲ್ಲ’ ಎಂದರು

ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇರಬೇಕು. ಬಹಳಷ್ಟು ಮಂದಿಗೆ ಇಚ್ಛಾಶಕ್ತಿ ಇಲ್ಲ. ಕೆಲಸ ಮಾಡಲು ಉತ್ಸಾಹ ತೋರಲ್ಲ. ವಿದ್ಯಾಭ್ಯಾಸ ಮಾಡಿದವರು ಸರ್ಕಾರಿ ಕೆಲಸ ಬಯಸುವವರೇ ಹೆಚ್ಚು ಎಂದರು.

ಯುವಾ ಬ್ರಿಗೇಡ್‌ ಕಲ್ಯಾಣಿ ಸ್ವಚ್ಛತಾ ಕಾರ್ಯವನ್ನು ಪ್ರಧಾನಿ ಮೋದಿ ಗುರುತಿಸಿದ್ದಾರೆ, ಅಲ್ಲದೇ ಈ ಕಾರ್ಯವನ್ನು ಉತ್ತರ ಪ್ರದೇಶದವರು ಕಾಪಿ ಮಾಡಿದ್ದಾರೆ ಎಂದೂ ಹೇಳಿದ್ದಾರೆ ಎಂದರು.

ಯುವಾ ಬ್ರಿಗೇಡ್‌ನ ರಾಜ್ಯ ಸಂಚಾಲಕ ಚಂದ್ರಶೇಖರ್‌ ನಂಜನಗೂಡು ಮಾತನಾಡಿ, ‘ಸಂಘಟನೆಯು ನಮ್ಮ ಕನಸಿನ ಕರ್ನಾಟಕ ಕಾರ್ಯಕ್ರಮದಡಿ ಉದ್ಯಾನ, ಕಲ್ಯಾಣಿ ಮೊದಲಾದವುಗಳ ಅಭಿವೃದ್ಧಿ ಮಾಡುತ್ತಿದೆ’ ಎಂದರು.

ಗ್ರಾಮಸ್ಥರಾದ ಓಂಕಾರಪ್ಪ, ಶಿವಶಂಕರಪ್ಪ, ನಿವೃತ್ತ ಯೋಧ ಕೆ.ಸಿ.ಬಸವರಾಜ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು