ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾತನಾಡಲು ಕೀಳಿರಿಮೆ ಸಲ್ಲದು: ಪ್ರಸನ್ನಗೌಡ

ಕರವೇ ವತಿಯಿಂದ ಕನ್ನಡ ಧ್ವಜಾರೋಹಣ
Published 1 ನವೆಂಬರ್ 2023, 13:22 IST
Last Updated 1 ನವೆಂಬರ್ 2023, 13:22 IST
ಅಕ್ಷರ ಗಾತ್ರ

ಮೂಡಿಗೆರೆ: ‘ಯಾವುದೇ ಸ್ಥಳದಲ್ಲಾದರೂ ಕನ್ನಡ ಮಾತನಾಡಲು ಕೀಳಿರಿಮೆ ಇರಬಾರದು’ ಎಂದು ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಪ್ರಸನ್ನಗೌಡ ದಾರದಹಳ್ಳಿ ಹೇಳಿದರು.

ಪಟ್ಟಣದ ಬಿಳಗುಳದಲ್ಲಿರುವ ಕರವೇ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬುಧವಾರ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

‘ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡವೂ ಸ್ಥಾನ ಪಡೆದಿರುವುದೇ ಹಿರಿಮೆಯಾಗಿದೆ. ಇಂತಹ ಶ್ರೀಮಂತ ಭಾಷೆಯನ್ನು ಯಾವುದೇ ಸ್ಥಳದಲ್ಲಿ, ಯಾವುದೇ ಕಚೇರಿಯಲ್ಲಿ ಮಾತನಾಡಲು ಹಿಂಜರಿಕೆ ಮಾಡಿಕೊಳ್ಳಬಾರದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದರು ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಕನ್ನಡ ನೆಲ, ಜಲ, ಕನ್ನಡಿಗರ ರಕ್ಷಣೆಗಾಗಿ ಇದುವರೆಗೂ ಆಡಳಿತ ನಡೆಸಿದ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು ತೃಪ್ತಿಕರವಾಗಿಲ್ಲ. ನಾಡಿನ ರಕ್ಷಣೆ, ಕನ್ನಡಿಗರಿಗೆ ಅನ್ಯಾಯವಾದರೆ ಕನ್ನಡಿಗರೆಲ್ಲರೂ ಪಕ್ಷ ಬೇಧ ಮರೆತು ಹೋರಾಟ ನಡೆಸಬೇಕು’ ಎಂದರು.

ಕರವೇ ತಾಲ್ಲೂಕು ಮಹಿಳಾ ಅಧ್ಯಕ್ಷೆ ವಾಣಿ ಮಾತನಾಡಿ, ‘ಮೈಸೂರು ರಾಜ್ಯವಾಗಿದ್ದ ಈ ನಾಡಿಗೆ ಕರ್ನಾಟಕವೆಂದು ನಾಮಕರಣಗೊಂಡು ಐವತ್ತು ವರ್ಷಗಳು ಕಳೆದರೂ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಕನ್ನಡದ ಬಳಕೆ ತರುವಲ್ಲಿ ವಿಫಲರಾಗಿದ್ದೇವೆ. ಇಂದಿಗೂ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬರದ ಅಧಿಕಾರಿಗಳನ್ನು ಕಾಣುತ್ತಿದ್ದೇವೆ. ಭಾಷೆ ಬಾರದ ಅಧಿಕಾರಿಗಳಿಂದ ಕನ್ನಡಿಗರು ತೊಂದರೆ ಅನುಭವಿಸುವಂತಾಗಿದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಕನ್ನಡ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲೂ ರಾಜ್ಯದ ಜನರಿಗೆ ಉದ್ಯೋಗವಕಾಶ ದೊರೆಯಬೇಕು’ ಎಂದರು.

ದೈಹಿಕ ಶಿಕ್ಷಕ ಸುರೇಶ್ ಮಾತನಾಡಿ, ‘ನಮ್ಮನ್ನು ಹೊತ್ತಿರುವ ಭೂಮಿಯು ಹೆತ್ತ ತಾಯಿಯಷ್ಟೇ ಪವಿತ್ರವಾಗಿದ್ದು, ನಾಡಿನ ರಕ್ಷಣೆ, ನೆಲ, ಜಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ದೇಶದಲ್ಲಿ ಕರ್ನಾಟಕಕ್ಕೆ ವಿಶೇಷವಾದ ಸ್ಥಾನಮಾನವಿದ್ದು, ಮಾದರಿ ನಾಡನ್ನಾಗಿಸಲು ನಾವೆಲ್ಲರೂ ಶ್ರಮಿಸಬೇಕಿದೆ’ ಎಂದರು.

ಕರವೇ ಬಣಕಲ್ ಹೋಬಳಿ ಅಧ್ಯಕ್ಷ ಯಾಕೂಬ್, ತಾಲ್ಲೂಕು ಕಾರ್ಯದರ್ಶಿ ಶಿವಾನಂದ್, ಉಪಾಧ್ಯಕ್ಷ ನಾರಾಯಣಗೌಡ, ಪದಾಧಿಕಾರಿಗಳಾದ ಮುಗ್ರಹಳ್ಳಿ ರಮೇಶ್, ಆನಂದಾಚಾರ್ ಹಾಗೂ ಕಾರ್ಯಕರ್ತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT