ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು| ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಉಪವಾಸಕ್ಕೆ ನಿರ್ಧಾರ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದ ಕಗ್ಗಂಟು
Last Updated 6 ಜನವರಿ 2020, 17:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದ ಕಗ್ಗಂಟಾಗಿದ್ದು, ಸಮ್ಮೇಳನ ಸುಗಮವಾಗಿ ನೆರವೇರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಇದೇ 9ರಿಂದ ಉಪವಾಸ ಆಚರಣೆಗೆ ನಿರ್ಧರಿಸಿದ್ದಾರೆ.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಂದೂರು ಈ ತೀರ್ಮಾನ ಕೈಗೊಂಡಿದ್ದಾರೆ. ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಸೂಚನೆ ನೀಡಿದ್ದಾರೆ. ಪರಿಷತ್ತು ಸೂಚನೆಯನ್ನು ಪಾಲನೆ ಮಾಡಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪರ–ವಿರೋಧಗಳು ವ್ಯಕ್ತವಾಗಿವೆ. ಇದೇ 10 ಮತ್ತು 11ಕ್ಕೆ ಶೃಂಗೇರಿಯಲ್ಲಿ ಸಮ್ಮೇಳನ ಆಯೋಜಿ
ಸಲಾಗಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿದೆ.

‘ಸಮ್ಮೇಳನ ಸುಗಮವಾಗಿ ನೆರವೇರಲಿ ಎಂದು ಇದೇ 9ರಿಂದ ಉಪವಾಸ ಮಾಡಲು ನಿರ್ಧರಿಸಿದ್ದೇನೆ. ಎಲ್ಲರೂ ಸಮ್ಮೇಳನಕ್ಕೆ ಬನ್ನಿ ಎಂದು ಮನವಿ ಮಾಡುತ್ತೇನೆ. ಗಲಾಟೆಗೆ ಅವಕಾಶವಾಗದಂತೆ ಶಾಂತಿಯುತವಾಗಿ ಸಮ್ಮೇಳನ ನಡೆಸಿ ಎಂದು ಕೋರುತ್ತೇನೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಕಾರಿಣಿಯಲ್ಲಿ ವಿಠಲ ಹೆಗ್ಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಾರ್ಯಕಾರಿಣಿ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲ್ಲ. ಸಮ್ಮೇಳನಕ್ಕೆ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಶಾಂತಿಪಾಲನಾ ಸಭೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.

‘ಪರಿಷತ್ತು ಅನುದಾನ ನೀಡಲು ನಿರಾಕರಿಸಿದೆ. ಹಣಕಾಸು ಉಪಸಮಿತಿಯವರು ಮತ್ತು ನಾನು ಕೈಯಿಂದ ವ್ಯಯ ಮಾಡುತ್ತಿದ್ದೇವೆ. ಮತ್ತು ಸ್ವಲ್ಪ ಸಂಗ್ರಹಿಸಿದ್ದೇವೆ. ಸಮ್ಮೇಳನ ಸುಗಮವಾಗಿ ನಡೆಯಬೇಕು ಅಷ್ಟೆ’ ಎಂದು ಹೇಳಿದರು.

‘ಆಯ್ಕೆ ಮಾಡಿ, ಬದಲಾವಣೆ ಮಾಡಬಾರದು’

‘ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿ ಈಗ ಬದಲಾವಣೆ ಮಾಡುವುದು ಸರಿಯಲ್ಲ. ಹಾಗೆ ಮಾಡಿದರೆ ಅಗೌರವ ತೋರಿದಂತಾಗುತ್ತದೆ’ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಟಿ.ಡಿ. ರಾಜೇಗೌಡ ಪ್ರತಿಕ್ರಿಯಿಸಿದರು.

‘ವಿಠಲ ಹೆಗ್ಡೆ ಅವರು ಶೋಷಿತರ ಪರ ಹೋರಾಟ ಮಾಡಿದ್ದಾರೆ. ‘ಮಂಗನ ಬ್ಯಾಟೆ’ ಕೃತಿ ರಚಿಸಿದ್ದಾರೆ. ಸಮ್ಮೇಳನ ನಡೆಸಲು ಸಹಕಾರ ನೀಡುತ್ತೇನೆ. ಪರಿಷತ್ತಿನ ಕೇಂದ್ರ ಸಮಿತಿ, ಕಾರ್ಯಕಾರಿಣಿ ಸಮಿತಿ ಸಮ್ಮೇಳನ ಮುಂದೂಡಲು ತೀರ್ಮಾನಿಸಿದರೂ ನನ್ನದೇನು ಅಭ್ಯಂತರ ಇಲ್ಲ. ಸಮ್ಮೇಳನದ ನೇತೃತ್ವ ವಹಿಸಬೇಕಾದ್ದು ಜಿಲ್ಲಾ ಉಸ್ತುವಾರಿ ಸಚಿವರ ಕರ್ತವ್ಯ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT