ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಮಳೆಯಾಗದಿದ್ದರೆ ನೀರಿನ ಸಮಸ್ಯೆ ನಿಶ್ಚಿತ

ನೀರು ಶುದ್ಧಿಕರಣ ಘಟಕದಲ್ಲಿ ಕ್ಲೋರಿನೇಟರ್ ಯಂತ್ರ ಅಳವಡಿಕೆಗೆ ಒತ್ತಾಯ
Published 27 ಮಾರ್ಚ್ 2024, 6:00 IST
Last Updated 27 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ಶೃಂಗೇರಿ: ಪಟ್ಟಣದ ಕೆಲವು ಕುಟುಂಬಗಳು ಕುಡಿಯುವ ನೀರಿಗೆ ಸ್ವಂತ ಬಾವಿಯನ್ನು ಹೊಂದಿವೆ. ಉಳಿದಂತೆ ಹೆಚ್ಚಿನ ಜನರು ನೀರಿಗಾಗಿ ತುಂಗಾ ನದಿಯನ್ನೇ ಆಶ್ರಯಿಸಿದ್ದಾರೆ. ತಾಂತ್ರಿಕ ಕಾರಣ ಹೊರತುಪಡಿಸಿ ಇನ್ನುಳಿದಂತೆ ವರ್ಷಪೂರ್ತಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ, ನೀರು ಶುದ್ಧೀಕರಣ ಘಟಕ ಇದ್ದರೂ ಅದರಲ್ಲಿನ ಕ್ಲೋರಿನೇಟರ್ ಯಂತ್ರ ಹಾಳಾಗಿರುವುದರಿಂದ ಶುದ್ಧೀಕರಣ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ.

ಪಟ್ಟಣದ ಜನಸಂಖ್ಯೆ 3,925ರ ಆಸುಪಾಸಿನಲ್ಲಿದ್ದು, 970 ಮನೆಗಳು, 75 ವಾಣಿಜ್ಯ ಮಳಿಗೆಗಳಿಗೆ ನೀರು ಪೂರೈಕೆಯಾಗುತ್ತದೆ. ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಂಪುರ, ಗಿಣಿಗಿಣಿ, ಬೋಳುಗುಡ್ಡೆ, ಮಾನಗಾರು ಪ್ರದೇಶಗಳಿಗೂ ಪ್ರತಿನಿತ್ಯ ಪಟ್ಟಣದಿಂದಲೇ 7 ಲಕ್ಷ ಲೀಟರ್‌ನಷ್ಟು ನೀರು ಪೂರೈಕೆಯಾಗುತ್ತದೆ. ಪಟ್ಟಣದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದ್ದರೂ, ಬಾಡಿಗೆ ಮನೆಗಳಲ್ಲಿ ವಾಸವಿದ್ದವರಿಗೆ, ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.  ಕುರುಬಕೇರಿಯಲ್ಲಿ ಶುದ್ಧಗಂಗಾ ನೀರಿನ ಘಟಕ ಸ್ಥಾಪಿಸಿದ್ದರೂ ಅದು ಜನರ ಉಪಯೋಗಕ್ಕೆ ಬರುತ್ತಿಲ್ಲ.

ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಶಾರದಾ ಮಠದ ಹತ್ತಿರ ತುಂಗಾ ನದಿಯಿಂದ ನೀರನ್ನು ಎತ್ತಲು ₹8 ಲಕ್ಷ ವೆಚ್ಚದಲ್ಲಿ ಬಾವಿ ನಿರ್ಮಿಸಲಾಗಿದೆ. ಇಲ್ಲಿಂದ ನೀರನ್ನು ಪಂಪ್‌ ಮಾಡಿ ಈಶ್ವರಗಿರಿಯಲ್ಲಿ ಮತ್ತು ಹನುಮಂತ ನಗರದಲ್ಲಿ ಟ್ಯಾಂಕ್‍ಗಳಲ್ಲಿ ಶೇಖರಣೆ ಮಾಡಿ, ಜನರಿಗೆ ಪೂರೈಸಲಾಗುತ್ತಿದೆ. ಶೇಖರಣಾ ಘಟಕದಲ್ಲಿ ಬ್ಲೀಚಿಂಗ್‌ ಮತ್ತು ಆಲಂ ಬಳಸಿ ನೀರನ್ನು ಶುದ್ಧಿಕರಿಸುವ ಯಂತ್ರ ಮತ್ತು ಕುಡಿಯುವ ನೀರಿನ ಶುದ್ಧಿಕರಣ ಘಟಕದಲ್ಲಿ ಕ್ಲೋರಿನೇಟರ್ ಯಂತ್ರ ಹಾಳಾಗಿದೆ. ಹಾಗಾಗಿ ನೀರು ನದಿಯಿಂದ ನೇರವಾಗಿ ಪಟ್ಟಣದ 11 ವಾರ್ಡ್‍ಗಳ ಮನೆಗಳಿಗೆ ಮತ್ತು ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಕ್ಕೆ ಪೂರೈಕೆಯಾಗುತ್ತದೆ.

ಪಟ್ಟಣದ 11 ವಾರ್ಡ್‌ನ ಹನುಮಂತ ನಗರದಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಜನರಿಗೆ ತೊಂದರೆಯಾಗಿದೆ. ಮಳೆಯಾದಾಗ ವಿದ್ಯಾರಣ್ಯಪುರದ ಯಕ್ಕನಹಳ್ಳದಲ್ಲಿ ನೀರು ಕೆಸರು ಮಿಶ್ರಿತವಾಗಿ ಹರಿಯುತ್ತದೆ. ಅದೇ ಕೆಂಪು ನೀರು ಪಟ್ಟಣಕ್ಕೆ ಸರಬರಾಜು ಆಗುತ್ತದೆ.

ಯೋಜನೆ ಅನುಷ್ಠಾನಕ್ಕೆ ಒತ್ತಾಯ

ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ₹ 36 ಕೋಟಿಯ ಕ್ರೀಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ₹80 ಲಕ್ಷ ಅನುದಾನ ಸರ್ಕಾರ ಹಂಚಿಕೆ ಮಾಡಿದೆ. ಈ ಅನುದಾನದಲ್ಲಿ ವಿದ್ಯಾರಣ್ಯಪುರದ ಯಕ್ಕನಹಳ್ಳದ ಮೇಲ್ಭಾಗದಲ್ಲಿ ಪಂಪ್ ನಿರ್ಮಾಣವಾಗಬೇಕು  ಮತ್ತು ನೀರು ಶುದ್ಧೀಕರಣ ಯಂತ್ರ ಅಳವಡಿಸಬೇಕು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈ ಯೋಜನೆ ಅನುಷ್ಠಾನಗೊಂಡರೆ ಪಟ್ಟಣಕ್ಕೆ ಶುದ್ಧ ನೀರಿನ ಕೊರತೆ ಆಗುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ  ಹರೀಶ್ ಶೆಟ್ಟಿ ಹೇಳಿದರು.

****

ಜಲ್‍ಜೀವನ್ ಮಿಷನ್ ಯೋಜನೆಯಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಕಾರ್ಯರೂಪಕ್ಕೆ ಬಂದರೆ ಅನುಕೂಲವಾಗುತ್ತದೆ

-ಶ್ರೀಪಾದ್ ಆರ್. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

****

ಈಗಾಗಲೇ ತುಂಗಾ ನದಿಯಲ್ಲಿ ನೀರಿನ ಮಟ್ಟ ತುಂಬ ಕಡಿಮೆಯಾಗಿದೆ. ಶೀಘ್ರದಲ್ಲೇ ಮಳೆಯಾಗದಿದ್ದರೆ ಶೃಂಗೇರಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ.

-ಕುರುಬಕೇರಿ ಪ್ರಶಾಂತ್ , ಪಟ್ಟಣದ ನಿವಾಸಿ

****

ಹನುಮಂತ ನಗರದ ನಿವಾಸಿಗಳಿಗೆ ನೀರಿನ <br/>ಸಮಸ್ಯೆ ಇದೆ. ಪಟ್ಟಣ ಪಂಚಾಯಿತಿಯವರು ಮೊದಲು ಹೊಸ ಪೈಪ್‌ಲೈನ್‌ ಮಾಡಿ ಸರಿಯಾಗಿ ನೀರು ಪೂರೈಸಬೇಕು

-ಲೀಲಾ ಶಂಕರ್, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT