ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಎಚ್.ಡಿ.ಕುಮಾರಸ್ವಾಮಿ ಆಗ್ರಹ

Last Updated 19 ಆಗಸ್ಟ್ 2019, 14:41 IST
ಅಕ್ಷರ ಗಾತ್ರ

ಕಳಸ: ಮೂಡಿಗೆರೆ ಮತ್ತು ಕಳಸ ಸೇರಿದಂತೆ ಪಶ್ಚಿಮಘಟ್ಟದ ಅತಿವೃಷ್ಟಿ ಪೀಡಿತರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಕಳಸ ಮತ್ತು ಮೂಡಿಗೆರೆ ತಾಲ್ಲೂಕುಗಳ ಅತಿವೃಷ್ಟಿ ಪೀಡಿತ ಪ್ರದೇಶದಲ್ಲಿ ಸೋಮವಾರ ಪ್ರವಾಸ ಮಾಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಇಲ್ಲಿನ ಹಲವಾರು ಹಳ್ಳಿಗಳು ಅತಿವೃಷ್ಟಿಯಿಂದ ತಮ್ಮ ಸ್ವರೂಪ ಕಳೆದುಕೊಂಡಿವೆ. ರಸ್ತೆ, ಸೇತುವೆಗೆ ಆಗಿರುವ ಹಾನಿ ₹ 250 ಕೋಟಿ. ಆದರೆ, ಕಾಫಿ ತೋಟಗಳಿಗೆ ಆಗಿರುವ ಹಾನಿಯ ಸಮೀಕ್ಷೆ ಈವರೆಗೂ ಮಾಡಿಲ್ಲ. ಕುಟುಂಬಕ್ಕೆ ₹ 5 ಲಕ್ಷ ಗರಿಷ್ಟ ಪರಿಹಾರ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಜೊತೆಗೆ ಕೇಂದ್ರ ಸರ್ಕಾರವೂ ಈ ಅವಘಡಕ್ಕೆ ಪರಿಹಾರ ನೀಡುವ ನಂಬಿಕೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಕುಮಾರಸ್ವಾಮಿ ಹೇಳಿದರು.

ಉತ್ತರ ಕರ್ನಾಟಕದಲ್ಲಿ ನದಿಗಳ ಪ್ರವಾಹ ಮತ್ತು ಅಣೆಕಟ್ಟಿನ ನೀರು ಹಾನಿ ಮಾಡಿದರೆ ಮಲೆನಾಡಿನಲ್ಲಿ ಭೂಕುಸಿತ ಅಪಾರ ನಷ್ಟ ತಂದಿದೆ. ಪಶ್ಚಿಮ ಘಟ್ಟದಲ್ಲಿ ಭೂಕುಸಿತಗಳು ಯಾಕೆ ನಡೆಯುತ್ತಿವೆ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಸಾಮಾಜಿಕ ಕಳಕಳಿ ಇದ್ದರೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಬಹುದು. ಅಲ್ಲಿ ಹಣಕ್ಕೇನೂ ಕೊರತೆ ಇಲ್ಲ ಎಂದ ಅವರು ಪರಿಹಾರ ಕೇಂದ್ರವನ್ನು ಸ್ಥಗಿತಗೊಳಿಸದೆ ಇನ್ನೂ 10 ದಿನ ನಡೆಸಬೇಕು ಎಂದೂ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

ರಾಜ್ಯದೆಲ್ಲೆಡೆ ಪ್ರವಾಹ ಇದ್ದರೂ ಯಡಿಯೂರಪ್ಪ ಶಿಕಾರಿಪುರಕ್ಕೆ ನೂರಾರು ಕೋಟಿ ಅನುದಾನ ಕೊಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಕಾರ್ಪೊರೇಟ್ ಸಂಸ್ಥೆಗಳು ಕೂಡ ಅತಿವೃಷ್ಟಿಗೆ ದೇಣಿಗೆ ಕೊಡದಂತಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೂರವಾಣಿ ಕದ್ದಾಲಿಕೆ ಆರೋಪ ಸಾಬೀತಾದರೆ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಎಚ್.ವಿಶ್ವನಾಥ್ ಅವರಿಗೆ ಈ ಆರೋಪ ಶೋಭೆ ನೀಡುವುದಿಲ್ಲ ಎಂದರು.

ವಿಧಾನ ಪರಿಷತ್‌ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಸದಸ್ಯ ಎಸ್.ಎಲ್.ಭೋಜೇಗೌಡ, ಶಾಸಕ ಸಾ.ರಾ.ಮಹೇಶ್, ಎಚ್.ಟಿ.ರಾಜೇಂದ್ರ, ಬಿ. ಬಿ. ನಿಂಗಯ್ಯ, ಮಂಜಪ್ಪಯ್ಯ, ಜ್ವಾಲನಯ್ಯ, ರವಿ ರೈ, ಬ್ರಹ್ಮದೇವ ಭಾಗವಹಿಸಿದ್ದರು.

ಆನಂತರ ಹಿರೇಬೈಲು ಸಮೀಪ ಭೂಕುಸಿತ ಸಂಭವಿಸಿದ ಬೂದಿಗುಂಡಿ ಪ್ರದೇಶಕ್ಕೂ ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ಪರಿಕರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT