ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯವೈಖರಿ ಬದಲಿಸಿಕೊಳ್ಳಿ, ಇಲ್ಲವೇ ವಾ‍ಪಸ್ ಹೋಗಿ: ಶಾಸಕ ತಮ್ಮಯ್ಯ ಎಚ್ಚರಿಕೆ

ಮೊದಲ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ತಮ್ಮಯ್ಯ ಎಚ್ಚರಿಕೆ
Published 14 ಜೂನ್ 2023, 15:51 IST
Last Updated 14 ಜೂನ್ 2023, 15:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸರ್ಕಾರ ಬದಲಾಗಿದೆ, ನೀವು ಬದಲಾಗಿ, ಇಲ್ಲವೇ ವಾಪಸ್ ಹೋಗಿ...’ ಈ ರೀತಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು ಶಾಸಕ ಎಚ್.ಡಿ.ತಮ್ಮಯ್ಯ.

ಶಾಸಕರಾದ ಬಳಿಕ ಮೊದಲ ಬಾರಿಗೆ ‌ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ‌ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಹಿಂದಿನ ಅವಧಿಯಲ್ಲಿ ಏನೇಲ್ಲಾ ಅಕ್ರಮಗಳಾಗಿವೆ ಎಂಬುದು ಗೊತ್ತಿದೆ. ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿದ್ದರೆ ಅಧಿಕಾರಿಗಳೇ ಜವಾಬ್ದಾರಿ ಆಗಬೇಕಾಗುತ್ತದೆ’ ಎಂದು ಹೇಳಿದರು.

‘ಹಾಗೆಂದು ಯಾವುದೇ ಅಧಿಕಾರಿಗೂ ಉದ್ದೇಶ ಪೂರ್ವಕವಾಗಿ ತೊಂದರೆ ನೀಡುವುದಿಲ್ಲ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಜನರ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಾಧ್ಯವಾಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ಇಲ್ಲೇ ಕೆಲಸ ಮಾಡಬೇಕೆಂದು ಯಾರಿಗೂ ಒತ್ತಾಯ ಮಾಡುವುದಿಲ್ಲ’ ಎಂದರು.

‘ಹಿಂದೆ ಜವಾಬ್ದಾರಿ ಸ್ಥಾನದಲ್ಲಿದ್ದವರು ಅಭಿವೃದ್ಧಿಯ ಹರಿಕಾರ ಎಂದೆಲ್ಲಾ ಬೀಗಿದರು. ಒಂದೇ ಒಂದು ಜಲ್ಲಿ ರಸ್ತೆ ಇದ್ದರೆ ತೋರಿಸಿ ಎಂದಿದ್ದರು. ಆದರೆ, 13 ಗೊಲ್ಲರಹಟ್ಟಿ, ಗೆದ್ದಲಹಳ್ಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಅಲ್ಲಿರುವವರು ಜನರಲ್ಲವೇ, ಅವರಿಗೆ ರಸ್ತೆಗಳು ಬೇಡವೇ’ ಎಂದು ಪರೋಕ್ಷವಾಗಿ ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು.

‘ಸಿಂದಿಗೆರೆ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು 13 ವರ್ಷ ಕಾಲಾವಕಾಶ ಬೇಕೆ, ರಾಮನಹಳ್ಳಿ ಮತ್ತು ಸಖರಾಯಪಟ್ಟಣದ ಉರ್ದು ಶಾಲೆಗಳಲ್ಲಿ ಓದುತ್ತಿರುವವರು ಮಕ್ಕಳಲ್ಲವೇ, ಕೊಟ್ಟಿಗೆಗಿಂತ ಕಡೆಯಾಗಿರುವ ಈ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ ಏಕೆ’ ಎಂದು ಕೇಳಿದರು.

‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳಬೇಕಿರುವ ರಸ್ತೆಗಳ ಪಟ್ಟಿಯನ್ನು ಅಧಿಕಾರಿಗಳು 15 ದಿನಗಳಲ್ಲಿ ನೀಡಬೇಕು. ಪ್ರಸ್ತಾವನೆ ಸಿದ್ಧಪಡಿಸಿಕೊಟ್ಟರೆ ಅನುದಾನ ತರುವುದು ನಮ್ಮ ಜವಾಬ್ದಾರಿ. ಚಿಕ್ಕದೇವನೂರಿನಲ್ಲಿ ಕಾಮಗಾರಿಯನ್ನೇ ನಡೆಸದೆ ಬಿಲ್ ಮಾಡಿಕೊಡಲಾಗಿದೆ. ನಾಗರಾಳ ಗ್ರಾಮದಲ್ಲಿ ದೇವಸ್ಥಾನದ ಸುತ್ತ ಜಲ್ಲಿ ಮಿಶ್ರಣ ಸುರಿದು ಹೋಗಿದ್ದಾರೆ. ಈ ಕಾಮಗಾರಿ ನಿರ್ವಹಿಸಿದ್ದು ಯಾವ ಇಲಾಖೆ’ ಎಂದು ಪ್ರಶ್ನಿಸಿದರು. ಇದಕ್ಕೆ ಯಾವ ಅಧಿಕಾರಿಗಳಿಂದಲೂ ಉತ್ತರ ಬರಲಿಲ್ಲ.

‘ಯಾವ ಇಲಾಖೆಯಿಂದಲೂ ಕೆಲಸ ಮಾಡಿಲ್ಲ ಎಂದರೆ, ರಸ್ತೆ ಅಗೆದವರು ಯಾರು ಎಂಬುದು ಗೊತ್ತಾಗಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಸೂಚನೆ ನೀಡಿದರು.

‘ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಮುಂದುವರಿಸಲು ನಾವೆಂದೂ ಅಡ್ಡಿಪಡಿಸಿಲ್ಲ. ಎರಡು ದಿನಗಳಲ್ಲಿ ಕಾಮಗಾರಿಗಳನ್ನು ಪುನರ್ ಆರಂಭಿಸಬೇಕು. ಮೇ 13ರಂದು ಚಿಕ್ಕಮಗಳೂರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಅಧಿಕಾರಿಗಳು ಭಯಪಡುವುದು ಬೇಡ, ಕಾಮಗಾರಿಯ ಗುಣಮಟ್ಟ ಕಾಪಾಡಬೇಕು ಎಂಬುದನ್ನಷ್ಟೇ ನಾವು ಕೇಳುತ್ತೇವೆ’ ಎಂದರು.

ಸಂಚಾರ ಪೊಲೀಸರು ಪ್ರವಾಸಿಗರಿಗೆ ತೊಂದರೆ ಕೊಡಬಾರದು. ಎಲ್ಲೆಂದರೆಲ್ಲಿ ತಡೆದು ದಂಡ ವಿಧಿಸಿದರೆ ಜಿಲ್ಲೆಯ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ. ನಾಳೆಯೇ ಸಂಚಾರ ಪೊಲೀಸರು ಸಭೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

‘ಪ್ರಾಣಿದಯಾ ಸಂಘದವರ ಮನೆಗೆ 100 ನಾಯಿ ಕಳಿಸಿ’

ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಇವುಗಳ ಗಣತಿ ಕಾರ್ಯವನ್ನು ಒಂದು ತಿಂಗಳಲ್ಲಿ ೂರ್ಣಗೊಳಿಸಬೇಕು ಎಂದು ನಗರಸಭೆ ಆಯುಕ್ತರಿಗೆ ತಮ್ಮಯ್ಯ ತಾಕೀತು ಮಾಡಿದರು. ‘ಗಣತಿ ಮಾಡಿದ ಬಳಿಕ ಅವುಗಳನ್ನು ಹಿಡಿದು ಏನು ಮಾಡಬೇಕೆಂಬುದನ್ನು ಖಾಸಗಿಯಾಗಿ ತಿಳಿಸುತ್ತೇನೆ. ನಾಯಿಗಳಿಗೆ ತೊಂದರೆ ನೀಡಬಾರದು ಎನ್ನುವ ಪ್ರಾಣಿ ದಯಾ ಸಂಘದವರು ಮನೆಗಳಿಗೆ 100ರಿಂದ 200 ಬೀದಿನಾಯಿಗಳನ್ನು ಕಳಿಸಿ ಅವುಗಳನ್ನು ಸಾಕಾಣಿಕೆ ಮಾಡಲು ತಿಳಿಸಿ’ ಎಂದರು. ‘ಪರಿಸರದ ಬಗ್ಗೆ ಮತ್ತು ಪ್ರಾಣಿಗಳ ಬಗ್ಗೆ ಪ್ರೀತಿ ತೋರಿಸಿ ಸುಮ್ಮನೆ ಮಾತನಾಡುವ ಜನರನ್ನು ನಾನು ನೋಡಿದ್ದೇನೆ. ಭಾಷಣ ಮಾಡುವುದು ಸುಲಭ ಆ ಸಂಸ್ಥೆಗಳಿಗೆ ಬೇರೆ–ಬೇರೆ ಕಡೆಯಿಂದ ಅನುದಾನ ಸಿಗುತ್ತದೆ. ಬೀದಿ ನಾಯಿಗಳು ಹೆಚ್ಚಾಗಿದ್ದು ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ಈ ಸಮಸ್ಯೆಗೆ ಮೊದಲು ಪರಿಹಾರ ದೊರಕಬೇಕಿದೆ. ನಗರಸಭೆ ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ತಾಕೀತು ಮಾಡಿದರು. ‘ಪರಿಸರ ವ್ಯಾದಿಗಳು ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪಡೆಯುವರರನ್ನು ಸಾಕಷ್ಟು ಜನರನ್ನು ನೋಡಿದ್ದೇನೆ. ಆದರೆ ವಾಸ್ತವ ಬೇರೆಯೇ ಇದೆ’ ಎಂದು ಎಸ್‌.ಎಲ್.ಭೋಜೇಗೌಡ ಹೇಳಿದರು. ‘ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ನಿಯಮ ಮೀರಿ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿರುವ ಘಟಕಗಳ ಮೇಲೆ ದಾಳಿ ನಡೆಸಿ ನಗರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ. ನಮ್ಮ ಸಹಕಾರವೂ ಇದೆ’ ಎಂದರು.

ಒತ್ತುವರಿ ತೆರವಿಗೆ ವಾರದ ಗುಡುವು

ಅಲ್ಲಂಪುರದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ 5 ಎಕರೆ ಸರ್ಕಾರದ ಜಾಗ ಲಪಟಾಯಿಸಲು ಕೆಲವರು ಪ್ರಯತ್ನಿಸುತ್ತಿದ್ದು ಒಂದು ವಾರದಲ್ಲಿ ಸರ್ವೆ ನಡೆಸಿ ವಶಕ್ಕೆ ಪಡೆದು ರಕ್ಷಣೆ ಮಾಡಬೇಕು ಎಂದು ತಹಶೀಲ್ದಾರ್‌ಗೆ ತಮ್ಮಯ್ಯ ಗಡುವು ನೀಡಿದರು. ಖಾಸಗಿ ವ್ಯಕ್ತಿಯೊಬ್ಬರು ವಾಹನ ನಿಲುಗಡೆ ಜಾಗವಾಗಿ ಪರಿವರ್ತಿಸಿಕೊಂಡಿದ್ದಾರೆ. ಅದಕ್ಕೆ ಪ್ರಭಾವಿಗಳ ಬೆಂಬಲವೂ ಇದೆ. ಸರ್ಕಾರದ ಜಾಗ ಉಳಿಸಲು ಅಧಿಕಾರಿಗಳು ಮೀನಾಮೇಷ ಎಣಿಸಬಾರದು. ಅಗತ್ಯ ಇದ್ದರೆ ಜಿಲ್ಲಾಧಿಕಾರಿ ಜತೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು. ‘ಕೈಮರ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಜೂರಾಗಿದ್ದು ಹೊಸದಾಗಿ ಸರ್ವೆ ನಡೆಸಿದಾಗ 2 ಎಕರೆ 20 ಗುಂಟೆಯಷ್ಟೇ ಉಳಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ. ಬಾಕಿ ಒಂದೂವರೆ ಎಕರೆ ಏನಾಯಿತು’ ಎಂದು ಎಸ್.ಎಲ್.ಭೋಜೇಗೌಡ ಪ್ರಶ್ನಿಸಿದರು. ಪುನಃ ಸರ್ವೆ ನಡೆಸಿ ಒತ್ತುವರಿ ತೆರವು ಮಾಡಬೇಕು. ಸರ್ಕಾರದ ಆಸ್ತಿ ರಕ್ಷಣೆ ವಿಷಯದಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ರಾಗಿ ಬೆಂಬಲ ಬೆಲೆ ₹8 ಕೋಟಿ ಬಾಕಿ

ರಾಗಿ ಬೆಂಬಲ ಬೆಲೆ ₹8 ಕೋಟಿ ಬಾಕಿ ಇದ್ದು ಕೂಡಲೇ ತರಿಸಿ ರೈತರಿಗೆ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕಮಗಳೂರು ಕ್ಷೇತ್ರದ ₹2 ಕೋಟಿ ಸೇರಿ ₹8 ಕೋಟಿ ಬಾಕಿ ಇದೆ. ರಾಗಿ ಖರೀದಿ ಮಾಡಿ ರೈತರಿಗೆ ಈವರೆಗೆ ಬೆಂಬಲ ಬೆಲೆ ಲಾಭ ದೊರಕಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೊಜೇಗೌಡ ಮಾತನಾಡಿ ‘ಬೆಂಬಲ ಬೆಲೆ ಬೆಳೆ ವಿಮೆ ಕೊಡಿಸಲು ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿ ವಹಿಸುತ್ತಿರುವುದರಿಂದಲೇ ರಾಗಿ ಭತ್ತ ಜೋಳ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಆಹಾರ ಪದಾರ್ಥಗಳನ್ನು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT