ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಂ ರಸ್ತೆ ಸಂಚಾರ; ಹೈರಾಣ

Last Updated 11 ನವೆಂಬರ್ 2018, 14:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಹಾದು ಹೋಗಿರುವ ಕೆ.ಎಂ (ಕಡೂರು– ಮಂಗಳೂರು) ರಸ್ತೆ ತೀವ್ರ ಹದಗೆಟ್ಟಿದ್ದು ಸಂಚಾರ ಹರಸಾಹಸವಾಗಿ ಪರಿಣಮಿಸಿದೆ. ಗುಂಡಿಮಯವಾಗಿ ‘ದುರಂತ ಸ್ಥಿತಿ’ಯಲ್ಲಿರುವ ಈ ರಸ್ತೆಯಲ್ಲಿ ದೂಳಿನ ಮಾಘಸ್ನಾನ ಮಾಡಿಕೊಂಡೇ ಸಾಗಬೇಕಿದೆ.

ಜ್ಯೋತಿನಗರದ ಸೇಂಟ್‌ ಜೋಸೆಫ್‌ ಶಾಲೆ, ದಂಟರ ಮಕ್ಕಿ ಕೆರೆ ಏರಿ, ಬೋಳರಾಮೇಶ್ವರ ದೇಗುಲ, ಮಾರುತಿನಗರ ಮೋಕ್ಷಧಾಮ, ತೇಗೂರು ಗೇಟು ಆಸುಪಾಸಿನಲ್ಲಿ ಡಾಂಬರು ಕಿತ್ತು ರಸ್ತೆ ಹಾಳಾಗಿದೆ. ಗುಂಡಿಗೊಟರುಗಳಾಗಿ ಈ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–173) ದುಃಸ್ಥಿತಿಗೆ ತಲುಪಿದೆ. ನಿತ್ಯ ಸಹಸ್ರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಪ್ರಯಾಣಿಸುವವರು ಅಪಾಯದ ಭೀತಿಯಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ.

ಈ ರಸ್ತೆಯು ನಗರದಿಂದ ಕಡೂರು ಕಡೆಗೆ ಮತ್ತು ಮೂಡಿಗೆರೆ, ಧರ್ಮಸ್ಥಳ, ಮಂಗಳೂರು ಕಡೆಗಿನ ಸಂಪರ್ಕ ಕೊಂಡಿಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು, ಪ್ರವಾಸಿ ವಾಹನಗಳು, ಭಾರಿ ವಾಹನಗಳು, ಲಗೇಜು ವಾಹನಗಳು, ನಗರದ ಶಾಲಾವಾಹನಗಳು ಅಧಿಕ ಸಂಖ್ಯೆಯಲ್ಲಿ ಓಡಾಡುತ್ತವೆ. ವಾಹನಗಳನ್ನು ಚಲಾಯಿಸುವುದು ಸವಾರರು ಮತ್ತು ಚಾಲಕರಿಗೆ ಸವಾಲಾಗಿದೆ.


‘ ನಲ್ಲೂರು ಗೇಟು, ಬೋಳಾರಾಮೇಶ್ವರ ದೇಗುಲ ಬಳಿಯಂತೂ ತುಂಬಾ ಹಾಳಾಗಿದೆ. ವಾರದಲ್ಲಿ ಮೂರು ದಿನ ಮೂಡಿಗೆರೆ ಕೋರ್ಟ್‌ಗೆ ಹೋಗುತ್ತೇನೆ. ಗುಂಡಿಗೊಟರಿನಲ್ಲಿ ರಸ್ತೆಯಲ್ಲಿ ಕಾರಿನಲ್ಲಿ ಮೂಡಿಗೆರೆಗೆ ಹೋಗಿಬರುವುದು ಹೈರಾಣವಾಗಿಸುತ್ತದೆ’ ಎಂದು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯುಟರ್‌ ರಾಘವೇಂದ್ರ ರಾಯ್ಕರ್‌ ಸಂಕಷ್ಟ ತೋಡಿಕೊಳ್ಳುತ್ತಾರೆ.


‘ಈ ರಸ್ತೆಯಲ್ಲಿ ವಾಹನ ಜಂಗುಳಿ ಸದಾ ಜಾಸ್ತಿ ಇರುತ್ತದೆ. ಸ್ವಲ್ಪ ಯಾಮರಿದರೂ ಅಪಾಯ ಕಾದಿರುತ್ತದೆ. ರಸ್ತೆ ಮಧ್ಯದಲ್ಲೇ ಮಂಡಿಯುದ್ದದ ಗುಂಡಿಗಳಾಗಿವೆ. ನಾಲ್ಕು ತಿಂಗಳ ಹಿಂದೆ ಅತಿಯಾದ ಮಳೆ ಬಿದ್ದು, ಬಹಳ ಹಾಳಾಗಿದೆ. ಮೈಯೆಲ್ಲಾ ಕಣ್ಣಾಗಿ ವಾಹನ ಚಾಲನೆ ಮಾಡಬೇಕು. ಹದಗೆಟ್ಟ ರಸ್ತೆಯಲ್ಲಿ ಓಡಾಡಿ ವಾಹನಗಳು ಪದೇಪದೇ ರಿಪೇರಿಗೆ ಬರುತ್ತವೆ’ ಎಂದು ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರು ಗೋಳು ತೋಡಿಕೊಂಡರು.

ರಸ್ತೆ ಹದಗೆಟ್ಟಿರುವ ಕಡೆಗಳಲ್ಲಿ ‘ಎಚ್ಚರಿಕೆ’ ಸೂಚನಾ ಫಲಕಗಳನ್ನು ಅಳವಡಿಸಿಲ್ಲ.

ಮಳೆ ಬಿದ್ದಾಗ ನೀರು ತುಂಬಿಕೊಂಡು ರಸ್ತೆಯಲ್ಲಿ ಗುಂಡಿ ಇರುವುದು ಗೊತ್ತಾಗುವುದೇ ಇಲ್ಲ.

ಡಾಂಬರು ಕಿತ್ತಿರುವ ಕಡೆ ಸಾಗುವಾಗ ವಾಹನಗಳು ದೂಳೆಬ್ಬೆಸುತ್ತವೆ. ಈ ಮಾರ್ಗದಲ್ಲಿ ಸಂಚರಿಸುವವರು ದೂಳಿನ ಯಾತನೆ ಅನುಭವಿಸಲೇಬೇಕಾಗಿದೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಬೈಕ್‌ ಸವಾರರು ಬಿದ್ದು ಪೆಟ್ಟು ಮಾಡಿಕೊಂಡ ನಿದರ್ಶನಗಳು ಇವೆ. ವಾಹನಗಳು ಬಿದ್ದು, ಡಿಕ್ಕಿಯಾಗಿ ಅಪಘಾತಗಳು ಸಂಭವಿಸಿವೆ.

‘ತೇಗೂರು ಭಾಗದ ಊರುಗಳಿಂದ ತರಕಾರಿ, ಹಣ್ಣುಗಳನ್ನು ಎಪಿಎಂಸಿ ಮಾರುಕಟ್ಟೆಗೆ ಸಾಗಿಸುತ್ತೇವೆ. ಗುಂಡಿಗೊಟರಿನ ಹಾದಿಯಲ್ಲಿ ಮೂರುಗಾಲಿನ ವಾಹನ ಸಂಚರಿಸುವುದು ಕಷ್ಟ. ಸಂಬಂಧಪಟ್ಟವರು ರಿಪೇರಿಗೆ ಕ್ರಮ ವಹಿಸದಿದ್ದರೆ ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ’ ಎಂದು ರಿಕ್ಷಾ ಚಾಲಕ ರಮೇಶ್‌ ಹೇಳುತ್ತಾರೆ.

‘ಈ ಹೆದ್ದಾರಿ ವಿಸ್ತರಣೆ, ಅಭಿವೃದ್ಧಿ ಯೋಜನೆ ಅನುಮೋದನೆ ಸಿಕ್ಕಿದೆ. ಕಡೂರು ಕಡೆಯಿಂದ ಸಮೀಕ್ಷೆ ಶುರುವಾಗಿದೆ. ಈ ತಿಂಗಳ ಅಂತ್ಯದ ಹೊತ್ತಿಗೆ ಕಾಮಗಾರಿ ಆರಂಭವಾಗಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 200 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಕಾಮಗಾರಿ ಒಪ್ಪಂದ ಆಗಿದೆ. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸವನ್ನು ಶೀಘ್ರದಲ್ಲಿ ಶುರುವಾಗಲಿದೆ. ಕಾಮಗಾರಿ ಅವಧಿ ಎರಡು ವರ್ಷ, 2020ರ ಡಿಸೆಂಬರ್‌ ಹೊತ್ತಿಗೆ ಕಾಮಗಾರಿ ಮುಗಿಸಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT