ಭಾನುವಾರ, ಮಾರ್ಚ್ 7, 2021
32 °C

ಬದುಕು ಉಳಿವಿಗೆ ರೈತರ ಹೋರಾಟ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ‘ರೈತರು ತಮ್ಮ ಬದುಕನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದು ಬಹಳ ಶೋಚನೀಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿಯ ಒಳಗೆ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಲಾಗಿದೆ. ಆದರೆ, ಕನಾಟಕ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಯಾಕೆ ಅವಕಾಶ ನೀಡಿಲ್ಲ. ಅದೂ ರಜೆಯ ದಿನವಾದ ಕಾರಣ ರೈತರು ಬಂದು ಅವರ ನೋವು ತೋಡಿಕೊಂಡು ಹೋಗುತ್ತಿದ್ದರು’ ಎಂದರು.

‘ಹಸಿರು ಶಾಲು ಹೊದ್ದವರನ್ನು ಪಾಕಿಸ್ತಾನದವರು, ಚೀನಾದವರು, ದೇಶದ್ರೋಹಿಗಳು ಹೀಗೆ ಬಿಜೆಪಿಯವರು ಏನೆಲ್ಲಾ ಕರೀಬೇಕು ಹಾಗೆಲ್ಲ ಕರೆಯುವ ಮೂಲಕ ರೈತರ ಜೀವನದಲ್ಲಿ ಕಪ್ಪು ಚುಕ್ಕೆ ಇಟ್ಟರು. ರೈತರಿಗೆ ಯಾವುದೇ ಪಕ್ಷ ಇಲ್ಲ. ಅವರನ್ನು ಈಗ ಎಲ್ಲರೂ ಸೇರಿ ಉಳಿಸಬೇಕು. ನಾವು ಅವರನ್ನು ಬೆಂಬಲಿಸುತ್ತೇವೆ’ ಎಂದರು.

‘ಕುಮಾರಣ್ಣ ಯಾರಿಗೆ ಹೇಳಿದ್ರೋ ಗೊತ್ತಿಲ್ಲ. ಅವರು ಏನಾದ್ರೂ ಹೇಳಲಿ ಕಾಂಗ್ರೆಸ್ ಮಾತ್ರ ರೈತರ ಬೆಂಬಲಕ್ಕಿದೆ, ಧ್ವನಿಯಾಗಿದೆ. ಆ ಕಾಯ್ದೆಯ ಬದಲಾವಣೆಗೆ, ತಿದ್ದುಪಡಿಗೆ ಅವಕಾಶ ಇಲ್ಲದ ಮೇಲೆ ರೈತ ವಿರೋಧಿ ಕಾಯ್ದೆ ಏಕೆ ಬೇಕು? ಸರ್ಕಾರ ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಯಾಕೆ ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದರು.

ರಂಭಾಪುರಿ ಮಠಕ್ಕೆ ಭೇಟಿ: ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ವೀರಸೋಮೇಶ್ವರ ಸ್ವಾಮೀಜಿ ಅವರಿಗೆ ನೀಡಿದರು.

ಶಿವಕುಮಾರ್‌ ಅವರನ್ನು ಹೆಲಿ ಪ್ಯಾಡ್‌ನಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಸ್ವಾಗತಿಸಿದರು.

ಪೀಠದಲ್ಲಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕಂಬದ ಮೇಲಿನ ಉದ್ಭವ ನಂದಿ ವಿಗ್ರಹದ ಬಳಿ ಕೆಲ ಕ್ಷಣ ಕುಳಿತು ಪ್ರಾರ್ಥನೆ ಸಲ್ಲಿಸಿ, ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಸ್ವಾಮೀಜಿ ಅವರೊಂದಿಗೆ 15 ನಿಮಿಷಕ್ಕೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದರು. ಫೆ. 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಗಳ ಮದುವೆಗೆ ಆಮಂತ್ರಿಸಿದರು.

ಸೆಲ್ಫಿಗೆ ಮುಗಿಬಿದ್ದ ಜನ: ಡಿ.ಕೆ.ಶಿವಕುಮಾರ್ ಹೆಲಿಕ್ಯಾಪ್ಟರ್ ಮೂಲಕ ರಂಭಾಪುರಿ ಪೀಠದ ಹೆಲಿಪ್ಯಾಡ್‌ಗೆ ಬಂದು ಇಳಿಯುತ್ತಿದ್ದಂತೆ ಅವರನ್ನು ಸುತ್ತುವರಿದ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು.

ಅಲ್ಲಿಂದ ವೀರಭದ್ರ ದೇವಸ್ಥಾನಕ್ಕೆ ತೆರಳುವವರೆಗೂ ಸೆಲ್ಫಿಗೆ ಪೋಸ್‌ ನೀಡುತ್ತಲೇ ಹೆಜ್ಜೆಹಾಕಿದ ಅವರು, ಕೊನೆಗೆ ಸಂಯಮ ಕಳೆದುಕೊಂಡರು. ಯುವಕನೊಬ್ಬ ಸೆಲ್ಫಿ ತೆಗೆಯುವ ವೇಳೆ ಅವರ ಕಾಲು ತುಳಿದಿದ್ದು ಕೆರಳಿಸಿತು. ಒಂದು ಕ್ಷಣ ಸಿಟ್ಟುಗೊಂಡ ಅವರು ‘ಏನ್‌ ಫೋಟೊ ತೆಗೀತಿರಾ... ಹೋಗ್ರಿ’ ಎಂದು ರೇಗಿದರು.

ಶೃಂಗೇರಿ ಪೀಠಕ್ಕೆ ಡಿಕೆಶಿ ಭೇಟಿ

ಶೃಂಗೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಶಾರದಾ ಪೀಠಕ್ಕೆ ಭೇಟಿ ನೀಡಿದರು.

ಶಾರದಾ ದೇವಿಯ ಎದುರು ಶಿವಕುಮಾರ್‌ ಅವರು ತಮ್ಮ ಮಗಳ ಮದುವೆಯ ಅಮಂತ್ರಣ ಪತ್ರಿಕೆ ಇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಶಕ್ತಿಗಣಪತಿ, ತೋರಣ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಗುರುನಿವಾಸಕ್ಕೆ ತೆರಳಿ ಉಭಯ ಯತಿಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಪತ್ರಕರ್ತರೊಂದಿಗೆ ಡಿ.ಕೆ.ಶಿವಕುಮಾರ್ ಮಾತನಾಡಿ, ‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು’ ಎಂದರು.

ಶೃಂಗೇರಿ ಉಪ ನೋಂದಣಾಧಿಕಾರಿಯಿಂದ ಕಂದಾಯ ಸಚಿವರ ಆಪ್ತ ಸಹಾಯಕ ಲಂಚದ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ’ ಎಂದು ದೂರಿದರು.

ಶಾಸಕ ಟಿ.ಡಿ ರಾಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೂಡಿಗೆ ನಟರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಕುರದಾಮನೆ ವೆಂಕಟೇಶ್, ಉಮೇಶ್ ಪೊದುವಾಳ್, ಕೆ.ಸಿ ವೆಂಕಟೇಶ್, ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ಅಹಮದ್, ಗ್ರಾಮ ಪಂಚಾಯಿತಿ ಶಬರೀಶ್ ಇದ್ದರು.

ಗೌರಿಗದ್ದೆ ಆಶ್ರಮಕ್ಕೆ ಡಿಕೆಶಿ ಭೇಟಿ: ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಕೊಪ್ಪದ ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದಲ್ಲಿ ವಿನಯ ಗುರೂಜಿ ಅವರನ್ನು ಭೇಟಿ ಮಾಡಿ, ತಮ್ಮ ಪುತ್ರಿ ವಿವಾಹದ ಆಮಂತ್ರಣ ಪತ್ರ ನೀಡಿದರು.

ಈ ಸಂದರ್ಭ ಮಾತನಾಡಿದ ವಿನಯ ಗುರೂಜಿ ಅವರು, ‘ಈ ಹಿಂದೆ ಡಿಕೆಶಿ ಮಗಳ ಮದುವೆ ‘ವ್ಯಾಲೆಂಟೈನ್ ಡೇ’ಯಂದು ಆಗಲಿ ಎಂದು ತಮಾಷೆ ಮಾಡಿದ್ದೆ. ಅದು ಈಗ ನಿಜವಾಗುತ್ತಿದೆ’ ಎಂದು ತಿಳಿಸಿದರು.

‘ಕಾಫಿ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗ್ಡೆ ಅವರ ಪುತ್ರನ ಜತೆ ವಿವಾಹ ನಡೆಯುತ್ತಿರುವುದು ಸಂತಸ ತಂದಿದೆ. ಎರಡೂ ಕುಟುಂಬದ ಜೊತೆಯೂ ನಿಕಟ ಸಂಪರ್ಕವಿದೆ. ವಧು– ವರರಿಬ್ಬರೂ ಒಂದೇ ರೀತಿಯ ಯೋಚನೆ ಹೊಂದಿದ್ದು, ಭವಿಷ್ಯದಲ್ಲಿ ಇಬ್ಬರೂ ತುಂಬಾ ಚೆನ್ನಾಗಿ ಇರುತ್ತಾರೆ’ ಎಂದು ಆಶೀರ್ವದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು