ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ‘ಕೃಷಿ ಯಂತ್ರಧಾರೆ’ ಕೇಂದ್ರ ಉದ್ಘಾಟನೆಗೆ ‘ಮೀನಮೇಷ’

ಚಿಕ್ಕಕುರುಬರಹಳ್ಳಿ: ಧೂಳು ಹಿಡಿಯುತ್ತಿವೆ ಯಂತ್ರೋಪಕರಣ
Last Updated 18 ಮಾರ್ಚ್ 2021, 3:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಹೊರವಲಯದ (ಬೈಪಾಸ್‌ ರಸ್ತೆ) ಚಿಕ್ಕಕುರುಬರಹಳ್ಳಿಯ ‘ಕೃಷಿ ಯಂತ್ರಧಾರೆ’ ಕೇಂದ್ರದ ಉದ್ಘಾಟನೆಗೆ ‘ಮೀನಮೇಷ’ ಎಣಿಸುತ್ತಿದ್ದು, ಯಂತ್ರೋಪಕರಣಗಳು ಧೂಳು ತಿನ್ನುತ್ತಿವೆ.

ಐದು ಟ್ರಾಕ್ಟರ್‌ಗಳು, ಎರಡು ಟಿಲ್ಲರ್‌ಗಳು, ಎರಡು ಧಾನ್ಯ ಶುದ್ಧೀಕರಣ ಯಂತ್ರಗಳು, ಉಳುಮೆ ಉಪಕರಣಗಳು, ನೀರೆತ್ತುವ ಮೋಟಾರ್‌ ಸಹಿತ ವಿವಿಧ ಯಂತ್ರೋಪಕರಣಗಳು ಈ ಕೇಂದ್ರದಲ್ಲಿವೆ. ಯಂತ್ರೋಪಕರಣಗಳನ್ನು ತಂದು ಎರಡು ತಿಂಗಳು ಕಳೆದರೂ ಅವು ಬಳಕೆಗೆ ಲಭ್ಯವಾಗಿಲ್ಲ.

ಚಿಕ್ಕಕುರುಬರಹಳ್ಳಿಯ ‘ಕೃಷಿ ಯಂತ್ರಧಾರೆ’ ಕೇಂದ್ರವನ್ನು ಚಿತ್ರದುರ್ಗದ ವರ್ಷಾ ಅಸೋಸಿಯೇಟ್‌ ಸಂಸ್ಥೆಯು ಗುತ್ತಿಗೆಗೆ ಪಡೆದಿದೆ. ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಕಟ್ಟಡದಲ್ಲಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡಲು ಈ ಕೃಷಿ ಯಂತ್ರಧಾರೆ ಯೋಜನೆ ಜಾರಿಗೊಳಿಸಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಕೇಂದ್ರಗಳು ಇವೆ.

‘ಉದ್ಘಾಟನೆ ಮಾಡದಿದ್ದರೆ ಕೆಲ ದಿನಗಳಲ್ಲಿ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತವೆ. ಘಟಕದಲ್ಲಿ ಯಂತ್ರಗಳಿದ್ದರೂ ರೈತರು ಬಳಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಕೃಷಿಕ ಸಿ.ಎಚ್‌. ಬಸವರಾಜಪ್ಪ ದೂರಿದರು.

ಒಂದು ಕೇಂದ್ರದಲ್ಲಿ ಒಟ್ಟು ₹ 40 ಲಕ್ಷದ ವಿವಿಧ ಯಂತ್ರೋಪಕರಣಗಳ ದಾಸ್ತಾನು ಮಾಡಬೇಕು ಎಂದು ನಿಗದಿಪಡಿಸಲಾಗಿದೆ. 2020–21ನೇ ಸಾಲಿನಲ್ಲಿ ಚಿತ್ರದುರ್ಗದ ವರ್ಷಾ ಅಸೋಸಿಯೇಟ್‌ ಸಂಸ್ಥೆಯು ಜಿಲ್ಲೆಯ 16 ಕೇಂದ್ರಗಳನ್ನು ಗುತ್ತಿಗೆಗೆ ಪಡೆದುಕೊಂಡಿದೆ.

ಕೇಂದ್ರದಲ್ಲಿ ಮೊದಲ ಹಂತದಲ್ಲಿ ₹ 28 ಲಕ್ಷದ (ಕೃಷಿ ಇಲಾಖೆ ಪಾಲು ₹ 22 ಲಕ್ಷ ಹಾಗೂ ಗುತ್ತಿಗೆ ಸಂಸ್ಥೆ ಪಾಲು ₹ 6 ಲಕ್ಷ) ಯಂತ್ರೋಪಕರಣಗಳನ್ನು ದಾಸ್ತಾನು ಇಡಬೇಕು, ಎರಡನೇ ಹಂತದಲ್ಲಿ ಉಳಿಕೆ 12 ಲಕ್ಷ ( ಕೃಷಿ ಇಲಾಖೆ ಮತ್ತು ಗುತ್ತಿಗೆ ಪಡೆದ ಸಂಸ್ಥೆ ಪಾಲು ತಲಾ 6 ಲಕ್ಷ) ಯಂತ್ರೋಪಕರಣ ದಾಸ್ತಾನು ಇಡಬೇಕು. ಖಾಸಗಿಯವರಿಗಿಂತ ಶೇ 10 ಕಡಿಮೆ ದರದಲ್ಲಿ ಯಂತ್ರ, ಉಪಕರಣಗಳನ್ನು ರೈತರಿಗೆ ಬಾಡಿಗೆ ನೀಡಬೇಕು ಎಂಬ ಕರಾರು ಇದೆ.

‘ಕೃಷಿ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಅಗತ್ಯವಿರುವ ಉಪಕರಣಗಳ ಪಟ್ಟಿ ಸಿದ್ಧಪಡಿಸುತ್ತಾರೆ. ಜಿಲ್ಲಾ ಪ‍ಂಚಾಯಿತಿ ಸಿಇಒ ಅಧ್ಯಕ್ಷತೆಯ ಜಿಲ್ಲಾ ಚಾಲನಾ ಸಮಿತಿಯಲ್ಲಿ ಪಟ್ಟಿ ಅನುಮೋದನೆ ಪ್ರಕ್ರಿಯೆ ನಡೆಯುತ್ತದೆ. ಕೃಷಿ ಯಂತ್ರಧಾರೆ ಕೇಂದ್ರಕ್ಕೆ ನಿರ್ವಹಣೆ ಹೊಣೆ ಗುತ್ತಿಗೆ ಪಡೆದ ಸಂಸ್ಥೆಯದ್ದಾಗಿರುತ್ತದೆ’ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದರು.

‘ಯುಗಾದಿ ಹೊತ್ತಿಗೆ ಉದ್ಘಾಟನೆ’
‘ಜಿಲ್ಲೆಯ ವಿವಿಧೆಡೆ 16 ‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ. ಯುಗಾದಿ ಹೊತ್ತಿಗೆ ಎಲ್ಲ ಕೇಂದ್ರಗಳನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ತಿರುಮಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷದ ಉಳುಮೆ ಚಟುವಟಿಕೆಗಳು ಶುರುವಾಗುವ ಸಮಯಕ್ಕೆ ಕೇಂದ್ರಗಳು ಆರಂಭವಾಗುತ್ತವೆ. ರೈತರು ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT