ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಪಂದ್ಯ: ಯಶವಂತ್ ಕಾಳಿಂಗಗೆ ಬೆಳ್ಳಿ ಗದೆ

ಬೀರೂರು ವೀರಭದ್ರಸ್ವಾಮಿ ರಥೋತ್ಸವ
Last Updated 14 ಮಾರ್ಚ್ 2023, 4:45 IST
ಅಕ್ಷರ ಗಾತ್ರ

ಬೀರೂರು: ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ನಡೆದ ಹೊನಲು ಬೆಳಕಿನ ಮುಕ್ತ ಕುಸ್ತಿ ಪಂದ್ಯದಲ್ಲಿ ಹರಿಯಾಣದ ಬಂಟಿಯನ್ನು ಮಣಿಸಿದ ಮೈಸೂರಿನ ಯಶವಂತ್ ಕಾಳಿಂಗ ಬೆಳ್ಳಿಗದೆ ಜಯಿಸಿದರು.

ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಬೀರೂರು ಶಿವಾಜಿ ವ್ಯಾಯಾಮ ಶಾಲೆ, ಪುರಸಭೆ, ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಕುಸ್ತಿ ಪಂದ್ಯ ನಡೆಯಿತು. ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜ್ಯಗಳಿಂದ ಮತ್ತು ರಾಜ್ಯದ ಶಿವಮೊಗ್ಗ, ದಾವಣಗೆರೆ, ತುಮಕೂರು, ಭದ್ರಾವತಿ, ಹುಬ್ಬಳ್ಳಿ, ಶಿಕಾರಿಪುರ, ರಾಮನಗರ, ಧಾರವಾಡಗಳಿಂದ 100ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.

ರಥೋತ್ಸವದ ಕೊನೆಯ ದಿನವಾದ ಭಾನುವಾರ ರಾತ್ರಿ ಬೆಳ್ಳಿಗದೆಗಾಗಿ ಸುಮಾರು ಒಂದೂವರೆ ತಾಸಿಗೂ ಹೆಚ್ಚಿನ ಸಮಯ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ತೀವ್ರ ಹಣಾಹಣಿಯ ಪಂದ್ಯದಲ್ಲಿ ಇಬ್ಬರು ಪೈಲ್ವಾನರೂ ಸಮಬಲದ ಹೋರಾಟ, ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. ಸತತ ಒಂದೂವರೆ ಗಂಟೆ ಕಾದಾಟದಲ್ಲಿ ಯಾರೂ ಸೋಲದ ಕಾರಣ ತೀರ್ಪುಗಾರರು ಮತ್ತು ಆಯೋಜಕರು ಸಮಾಲೋಚಿಸಿ ಪಾಯಿಂಟ್ ಕುಸ್ತಿ ಆಡುವಂತೆ ಸೂಚಿಸಿದರು. ಆದರೆ ಚಿತ್ ಆಗುವವರೆಗೂ ಹೋರಾಟ ಮಾಡುವುದಾಗಿಯೂ, ಪಾಯಿಂಟ್ ಕುಸ್ತಿ ಆಡಲು ಸಿದ್ಧವಿಲ್ಲ ಎಂದು ಬಂಟಿ ತಿಳಿಸಿ, ಅಖಾಡಾದಿಂದ ಹೊರ ನಡೆದಿದ್ದರಿಂದ ಮೈಸೂರಿನ ಯಶವಂತ್ ಕಾಳಿಂಗ ಜಯಗಳಿಸಿದ್ದಾರೆ ಎಂದು ಘೋಷಿಸಲಾಯಿತು. ಬಂಗಾರದ ಪದಕಕ್ಕೆ ನಡೆದ ಕುಸ್ತಿಯಲ್ಲಿ ಭದ್ರಾವತಿಯ ಪ್ರತೀಕ್‍ರನ್ನು ಧಾರವಾಡದ ಮಲ್ಲಿಕಾರ್ಜುನ್ ಮಣಿಸಿ ಪದಕವನ್ನು ತಮ್ಮದಾಗಿಸಿಕೊಂಡರು.

ಪಂದ್ಯದಲ್ಲಿ 2 ಬೆಳ್ಳಿಗದೆ, 2 ಬಂಗಾರದ ಪದಕ ಹಾಗೂ ಹಲವು ನಗದು ಬಹುಮಾನಗಳ ಕುಸ್ತಿ ನಡೆಯಿತು. ಆಟೊ ಚಾಲಕರು, ಕಟ್ಟಡ ಕಾರ್ಮಿಕರ ಸಂಘ, ಭೋವಿ ಸಮಾಜ, ಲಾರಿ ಚಾಲಕರ ಸಂಘ, ಕಟ್ಟೆಕೋಡಿ ಅಂತರಘಟ್ಟಮ್ಮ ಯುವಕರ ಸಂಘ, ಸವಿತಾ ಸಮಾಜ, ದೇವಿ ಯುವಕ ಸಂಘ, ದ್ವಿಚಕ್ರ ಮೆಕ್ಯಾನಿಕ್ ಸಂಘ, ಕನ್ನಡ ಸಂಘ, ಶಿವಾಜಿ ಪ್ರಶಸ್ತಿ, ಮೈಲಾರಲಿಂಗಸ್ವಾಮಿ ಪ್ರಶಸ್ತಿ ಅಲ್ಲದೆ ಅಂಜುಮಾನ್ ಮೊಹಲ್ಲಾ, ಮದೀನ ಮಸೀದಿಗಳ ಪ್ರಶಸ್ತಿ ಹೆಸರಿನಲ್ಲಿ ಪಂದ್ಯಗಳು ನಡೆದವು. ಅನೇಕ ಸಂಘಗಳಿಂದ ಟ್ರೋಫಿ ಹಾಗೂ ನಗದು ಬಹುಮಾನಗಳ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ವೈ.ಎಸ್.ವಿ.ದತ್ತ, ಕಾಂಗ್ರೆಸ್ ಮುಖಂಡ ಕೆ.ಎಸ್.ಆನಂದ್, ಪುರಸಭೆ ಅಧ್ಯಕ್ಷ ಸುದರ್ಶನ್ ಕುಸ್ತಿಪಟುಗಳಿಗೆ ಶುಭ ಹಾರೈಸಿದರು. ಶಿವಾಜಿ ವ್ಯಾಯಾಮ ಶಾಲೆಯ ಅಧ್ಯಕ್ಷ ಬಿ.ಪಿ.ನಾಗರಾಜ್ ಮತ್ತು ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT