ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕಟ್ಟಡ ಕಾಮಗಾರಿ, ತೋಟ ಕೆಲಸಕ್ಕೆ ಸಂಕಷ್ಟ

ವಲಸೆ ಕಾರ್ಮಿಕರು ತವರು ಜಿಲ್ಲೆಗಳಿಗೆ ಪಯಣ
Last Updated 5 ಮೇ 2020, 2:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಲಸೆ ಕಾರ್ಮಿಕರು ತವರು ಜಿಲ್ಲೆಗಳಿಗೆ ತೆರಳಿರುವುದರಿಂದ ಕಟ್ಟಡ ಕಾಮಗಾರಿ, ಜಮೀನು– ತೋಟ ಕೆಲಸ ಮೊದಲಾದವುಗಳಿಗೆ ಹೊಡೆತ ಬೀಳುವುದಕ್ಕೆ ಶುರುವಾಗಿದೆ. ಕೆಲಸಗಳಿಗೆ ಸ್ಥಳೀಯರನ್ನು ಆಶ್ರಯಿಸುವಂತಾಗಿದೆ.

ಬಳ್ಳಾರಿ, ಗದಗ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಯಾದಗಿರಿ, ಹಾವೇರಿ ಮೊದಲಾದ ಜಿಲ್ಲೆಗಳಿಂದ ಕಾರ್ಮಿಕರು ಕಾಫಿನಾಡಿಗೆ ದುಡಿಮೆಗಾಗಿ ವಲಸೆ ಬಂದಿದ್ದರು. ಎಸ್ಟೇಟ್‌, ಹೋಟೆಲ್‌, ಕಟ್ಟಡ ಕೆಲಸ, ಇತರ ಕಾಯಕಗಳಲ್ಲಿ ತೊಡಗಿಕೊಂಡಿದ್ದರು.

ಲಾಕ್‌ಡೌನ್‌ನಿಂದಾಗಿ ಇಲ್ಲೇ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತವರು ಜಿಲ್ಲೆಗಳಿಗೆ ಕಳಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಿಂದ ಈವರೆಗೆ 150ಕ್ಕೂ ಹೆಚ್ಚು ಬಸ್‌ಗಳಲ್ಲಿ 3,500ಕ್ಕೂ ಹೆಚ್ಚು ಮಂದಿ ಊರುಗಳಿಗೆ ತೆರಳಿದ್ದಾರೆ.

ಕಾಫಿನಾಡು ಹಸಿರು ವಲಯದಲ್ಲಿದೆ. ಹೋಟೆಲ್‌, ಎಸ್ಟೇಟ್‌ ಕೆಲಸ, ಕಟ್ಟಡ ಕಾಮಗಾರಿ ಮೊದಲಾದ ಕೆಲಸಗಳು ಮತ್ತೆ ಶುರುವಾಗಿವೆ. ವಲಸೆ ಕಾರ್ಮಿಕರು ಊರಿಗೆ ಪ್ರಯಾಣ ಬೆಳೆಸಿದ್ದು ಎಸ್ಟೇಟ್‌ ಮಾಲೀಕರು, ಕಟ್ಟಡ ಗುತ್ತಿಗೆದಾರರನ್ನು ಚಿಂತಾಕ್ರಾಂತವಾಗಿಸಿದೆ.

‘ಎಸ್ಟೇಟ್‌ನಲ್ಲಿ (ಅರೇಬಿಕಾ ಕಾಫಿ ತೋಟ) ಕಾಯಂ ಕಾರ್ಮಿಕರು 20, ವಲಸೆ ಕಾರ್ಮಿಕರು 70 ಮಂದಿ ಇದ್ದರು. ವಲಸೆ ಕಾರ್ಮಿಕರು 70 ಮಂದಿಯೂ ಊರುಗಳಿಗೆ ತೆರಳಿದರು. ಕೆಲ ದಿನಗಳಿಂದ ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಕಳೆ ತೆಗೆಸುವುದು, ಗೊಬ್ಬರು ಹಾಕಿಸುವುದು, ಸ್ಪ್ರೇ ಮಾಡಿಸುವುದು ಮೊದಲಾದ ಕಾಯಕಗಳು ಇರುತ್ತವೆ. ವಲಸೆ ಕಾರ್ಮಿಕರು ಊರಿಗೆ ಹೋಗಿದ್ದು ಸಮಸ್ಯೆಗೆ ತಂದೊಡ್ಡಿದೆ’ ಎಂದು ಆವುತಿ ಗ್ರಾಮದ ಕಾಫಿ ಬೆಳೆಗಾರ ಎ.ಜಿ.ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಮಳೆ ಉತ್ತಮವಾಗಿ ಆಗುತ್ತಿದೆ. ಕಾಫಿ ಬೆಳೆ ಚೆನ್ನಾಗಿ ಬರುವ ನಿರೀಕ್ಷೆ ಇದೆ. ಕೊಯ್ಲು ಏಕಕಾಲಕ್ಕೆ ಶುರುವಾಗುತ್ತದೆ. ಕೊಯ್ಲಿಗೆ ಕಾರ್ಮಿಕರನ್ನು ಹೊಂದಿಸುವುದು ಹೇಗೆ ಎಂಬ ಚಿಂತೆ ಈಗಲೇ ಶುರುವಾಗಿದೆ’ ಎಂದು ಸಂಕಷ್ಟ ತೋಡಿಕೊಂಡರು.

ಕಟ್ಟಡ ಕಾಮಗಾರಿಗಳು ಶುರುವಾಗಿವೆ. ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರು ಚಿತ್ತ ಹರಿಸಿದ್ದಾರೆ. ಕಾರ್ಮಿಕರನ್ನು ಹೊಂದಿಸಲು ಹರಸಾಹಸ ಪಡುವಂತಾಗಿದೆ.

‘ವಲಸೆ ಕಾರ್ಮಿಕರು ಊರಿಗೆ ಹೋಗಿದ್ದರಿಂದ ಕಾಮಗಾರಿಗಳನ್ನು ನಿಭಾಯಿಸುವುದು ಕಷ್ಟವಾಗಿದೆ. ಕೆಲಸಗಾರರು ಕಡಿಮೆಯಾಗಿ, ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿವೆ. ಕೆಲ ಕೆಲಸಗಳನ್ನು ದುಪ್ಪಟ್ಟು ಕೂಲಿ ಕೊಟ್ಟು ಮಾಡಿಸಬೇಕಾಗಿದೆ’ ಎಂದು ಮೇಸ್ತ್ರಿ ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT