ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗಿಲ್ಲ ಸವಲತ್ತು; ಗ್ರಾಮೀಣ ಪ್ರತಿಭೆಗಳ ಅಳಲು

ವಾಲಿಬಾಲ್‌: ಗಡೀಹಳ್ಳಿ ಸರ್ಕಾರಿ ಶಾಲೆ ತಂಡಕ್ಕೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ
Last Updated 7 ಅಕ್ಟೋಬರ್ 2022, 5:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ತಂಡದವರು ಜಿಲ್ಲಾಮಟ್ಟದ ವಾಲಿಬಾಲ್‌ ಸ್ಪರ್ಧೆಯಲ್ಲಿ ಜಯ ಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಆಟಗಾರರಿಗೆ ‘ಶೂ’, ‘ಟ್ರ್ಯಾಕ್‌ ಸೂಟ್‌’ ಮೊದಲಾದವು ಇಲ್ಲ.

ಅಪ್ಪಟ ಗ್ರಾಮೀಣ ಪ್ರತಿಭೆಗಳ ಈ ತಂಡ ಖಾಸಗಿ ಶಾಲೆ ತಂಡವನ್ನು ಮಣಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಗೆದ್ದಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಗಡೀಹಳ್ಳಿ, ಮುಗಳಿ ಗ್ರಾಮಗಳ ಹಿರಿಯ ಆಟಗಾರರ ಗರಡಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿದ್ದಾರೆ.

ಕಡೂರು ತಾಲ್ಲೂಕಿನ ವೈ.ಮಲ್ಲಾಪುರದಲ್ಲಿ ಇದೇ 8 ಮತ್ತು 9ರಂದು ವಿಭಾಗಮಟ್ಟದ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ತಂಡ ತಯಾರಿ ನಡೆಸಿದೆ.

ಗ್ರಾಮಗಳಲ್ಲಿನ ಮೈದಾನದಲ್ಲಿ ತಂಡದವರು ನಿತ್ಯ ಐದಾರು ಗಂಟೆ ಅಭ್ಯಾಸ ಮಾಡುತ್ತಾರೆ. ಶಾಲೆಯ ಹಿರಿಯ ವಿದ್ಯಾರ್ಥಿ, ಆಟಗಾರ ಯಶ್ವಂತ್‌, ಮೊದಲಾದವರು ಸಹಕಾರ ನೀಡುತ್ತಾರೆ.

‘ನಮ್ಮೂರು ಮುಗಳಿಯ ಮೈದಾನದಲ್ಲೇ ಹೊನಲು ಬೆಳಕಿನ ವ್ಯವಸ್ಥೆಯನ್ನು ಹಿರಿಯ ಆಟಗಾರರು ಮಾಡಿಕೊಟ್ಟಿದ್ದಾರೆ, ಶಾಲೆಯಿಂದ ಚಂಡು ಕೊಟ್ಟಿದ್ದಾರೆ, ಅಭ್ಯಾಸಕ್ಕೆ ‘ಮ್ಯಾಚ್‌ ಬಾಲ್‌’ ಇದ್ದರೆ ಒಳ್ಳೆಯದು. ‘ಶೂ’, ‘ಟ್ರ್ಯಾಕ್‌ ಸೂಟ್‌’ ಇಲ್ಲ. ಸರ್ಕಾರ ಅವುಗಳನ್ನು ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ಗಡೀಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಾಲಿಬಾಲ್‌ ತಂಡದ ವಿದ್ಯಾರ್ಥಿ ಎಂ.ಆರ್‌. ಹೊಯ್ಸಳ ಕೋರಿದರು.

ತಂಡದಲ್ಲಿ 12 ವಿದ್ಯಾರ್ಥಿಗಳು ಇದ್ದಾರೆ. ಬಡತನ ಕುಟುಂಬದವರು ಇದ್ದಾರೆ. ಶಾಲೆಯಲ್ಲೂ ಅಭ್ಯಾಸಕ್ಕೆ ಪೂರಕ ಸವಲತ್ತುಗಳು (ಬಾಲ್‌, ...) ಇಲ್ಲ. ಹಿರಿಯ ವಿದ್ಯಾರ್ಥಿಗಳು, ಇತರರನ್ನು ಅವಲಂಬಿಸಬೇಕಾಗಿದೆ.

‘ತಂಡದ ವಿದ್ಯಾರ್ಥಿಗಳಿಗೆ ನಾವೂ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಗ್ರಾಮದವರು ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಆಟ ಆಡುತ್ತಾರೆ. ದಾನಿಗಳು ನೆರವಾದರೆ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ’ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT