ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಾಯಕಲ್ಪ; ನೀರ ನೆಮ್ಮದಿಗೆ ದಾರಿ

ಅಂತರ್ಜಲ ವೃದ್ಧಿ, ಜನ–ಜಾನುವಾರಿನ ನಿತ್ಯ ಬಳಕೆ, ಕೃಷಿ ಚಟುವಟಿಕೆಗೆ ಅನುಕೂಲ
Last Updated 10 ಜನವರಿ 2021, 4:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಕೆರೆಗಳ ಕಾಯಕಲ್ಪ ನೀರ ನೆಮ್ಮದಿಗೆ ದಾರಿಯಾಗಿದೆ. ಈ ವರ್ಷ ಉತ್ತಮ ಮಳೆಯಾಗಿ ಹಲವು ಕೆರೆ ಒಡಲು ತುಂಬಿಕೊಂಡಿದ್ದು ಅಂತರ್ಜಲ ಭಂಡಾರ ವೃದ್ಧಿ, ಕೃಷಿ ಚಟುವಟಿಕೆ, ಜನ–ಜಾನುವಾರಿನ ನಿತ್ಯ ಬಳಕೆಗೆ ಅನುಕೂಲವಾಗಿದೆ.

ಉದ್ಯೊಗ ಖಾತ್ರಿ ಯೋಜನೆ (ನರೇಗಾ), ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಿಂದ ಕೆರೆಗಳ ವಾರ್ಷಿಕ ನಿರ್ವಹಣೆ – ದುರಸ್ತಿ ಕಾಮಗಾರಿ ಹಾಗೂ ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’, ‘ವಿಷನ್‌ ಚಿಕ್ಕಮಗಳೂರು’ ಸಹಿತ ವಿವಿಧ ಸಂಘಟನೆಗಳ ಪುನಶ್ಚೇತನ ಹೆಜ್ಜೆಗಳು ಹಲವು ಕೆರೆಗಳಿಗೆ ಮರುಜೀವ ಕಲ್ಪಿಸಿವೆ. ಜಲ ಸಂರಕ್ಷಣೆ ಕಾಯಕಗಳು ಅಭಿವೃದ್ಧಿ ಪ್ರೇರೇಪಣೆ ಪಾಠಗಳಾಗಿವೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 1,766 ಹಾಗೂ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 124 ಕೆರೆಗಳು (40 ಹೆಕ್ಟೇರ್‌ಕ್ಕೂ ಹೆಚ್ಚು ವಿಸ್ತೀರ್ಣದವು) ಒಟ್ಟು 1,890 ಕೆರೆಗಳು ಇವೆ. ಅಯ್ಯನ ಕೆರೆ, ಮದಗದ ಕೆರೆ, ಹಿರೇಕೊಳಲೆ ಕೆರೆ, ಬೆಳವಾಡಿ ಕೆರೆ, ಬುಕ್ಕಾಂಬುಧಿ ಕೆರೆ ಮೊದಲಾದವು ಹೆಚ್ಚು ವಿಸ್ತೀರ್ಣ ಹೊಂದಿವೆ.

ಜಿಲ್ಲಾ ಪಂಚಾಯಿತಿಯಿಂದ ‌ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿಗೆ ₹ 1.24 ಕೋಟಿ ನಿಗದಿಯಾಗಿದೆ. 2019–20ನೇ ಸಾಲಿನಲ್ಲಿ 19 ಕೆರೆಗಳಿಗೆ ₹ 40 ಲಕ್ಷ ಅನುದಾನ ಒದಗಿಸಲಾಗಿದೆ. ಹೂಳು ಎತ್ತುವುದು, ಕೋಡಿ–ಏರಿ–ತೂಬು ರಿಪೇರಿ, ಗಿಡಗಂಟಿ ತೆರವು ಮೊದಲಾದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2020–21ನೇ ಸಾಲಿನಲ್ಲಿ 37ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹ 1.24 ಕೋಟಿ ನಿಗದಿ ಪಡಿಸಲಾಗಿದೆ. ಖಾತ್ರಿ ಯೋಜನೆಯಲ್ಲೂ ಹಲವಾರು ಕಾಮಗಾರಿಗಳು ನಡೆದಿವೆ.

ಸಣ್ಣ ನೀರಾವರಿ ಇಲಾಖೆಯವರು ಒತ್ತುವರಿ ತೆರವು, ಗಿಡಗಂಟಿ ತೆರವು ಮೊದಲಾದ ಕಾರ್ಯಗಳು ಪ್ರಗತಿಯಲ್ಲಿವೆ. ಮದಗದ ಕೆರೆಯ ‘ಜಾಕ್‌ ವೆಲ್‌’ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ.

‘ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹೂಳು ತೆಗೆದು, ಏರಿ ರಿಪೇರಿ ಮಾಡಿದ್ದೇವೆ. ನೀರು ಹರಿಯಲು ವ್ಯವಸ್ಥೆ ಮಾಡಿದ್ದೆವು. ಜನರ ಬಳಕೆಗೆ, ದನಕರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ’ ಎಂದು ಮರ್ಲೆಯ ಗ್ರಾಮಸ್ಥ ಎಂ.ಎನ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ–ಪಟ್ಟಣಗಳ ಕೆರೆಗಳಿಗೆ ಒಳಚರಂಡಿ (ಯುಜಿಡಿ) ಕೊಳಚೆ ಕಂಟಕ ಕಾಡುತ್ತಿದೆ. ಈ ಕೆರೆಗಳ ನಿರ್ವಹಣೆ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ವಿಷನ್‌ ಚಿಕ್ಕಮಗಳೂರು’ ಕೈಂಕರ್ಯ

‘ವಿಷನ್‌ ಚಿಕ್ಕಮಗಳೂರು’ ತಂಡವು ಕೆರೆಗಳ ಅಭಿವೃದ್ಧಿ ಕೈಂಕರ್ಯದಲ್ಲಿ ತೊಡಗಿದೆ. ಉಪ್ಪಳ್ಳಿ, ವಸ್ತಾರೆ, ಕರಿಸಿದ್ಧನಹಳ್ಳಿ , ಬ್ಯಾಡರಹಳ್ಳಿ ಕೆರೆಗಳ ಹೂಳು ತೆಗೆಸಿ ಕಾಯಕಲ್ಪ ಕಲ್ಪಿಸಿದೆ.

ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಸಹಿತ 17 ಮಂದಿ ತಂಡದಲ್ಲಿ ಇದ್ದಾರೆ. ಒತ್ತುವರಿ ತೆರವು, ಕೆರೆ ದುಃಸ್ಥಿತಿಯಿಂದ ಸುಸ್ಥಿತಿಗೆ, ಜಲಸಂಗ್ರಹಣೆಗೆ ವ್ಯವಸ್ಥೆ ಮೊದಲಾದ ಕಾರ್ಯಗಳಲ್ಲಿ ತೊಡಗಿದೆ. ಈಗ ದಾಸರಹಳ್ಳಿ, ಬೀಕನಹಳ್ಳಿ, ಕರ್ತಿಕೆರೆಗಳ ಅಭಿವೃದ್ಧಿಗೆ ಕೈ ಹಾಕಿದೆ.

ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿ ಮೂಡಿಸುವುದು, ಬರಪೀಡಿತ ಪ್ರದೇಶಗಳಲ್ಲಿ ಗಿಡನೆಟ್ಟು ಬೆಳಸುವ ಕೆಲಸಗಳಿಗೂ ಕೈಹಾಕಿದೆ. ತಂಡವು ಮಾದರಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT