ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರನಾಡು-ಬಲಿಗೆ ರಸ್ತೆಯ ಮೇಲುಮಂಚಿಗೆ ಬಳಿ ಭೂಕುಸಿತ: ಮಕ್ಕಳಿಗೆ ದೂರವಾದ ಶಾಲೆ

ರಸ್ತೆ ಮೇಲೆ ಉರುಳಿದ ಬಂಡೆಗಳು
Published : 5 ಆಗಸ್ಟ್ 2024, 5:58 IST
Last Updated : 5 ಆಗಸ್ಟ್ 2024, 5:58 IST
ಫಾಲೋ ಮಾಡಿ
Comments

ಕಳಸ: ಹೊರನಾಡು-ಬಲಿಗೆ ರಸ್ತೆಯ ಮೇಲುಮಂಚಿಗೆ ಬಳಿ ಭೂಕುಸಿತ ಸಂಭವಿಸಿರುವುದರಿಂದ ರಸ್ತೆ ಮೇಲೆ ಬಂಡೆಗಳು ಬಿದ್ದು, ಆ ಪ್ರದೇಶದ 70ಕ್ಕೂ ಹೆಚ್ಚು ಮಕ್ಕಳಿಗೆ ಶಾಲೆ ತಲುಪುವುದು ಕಷ್ಟವಾಗಿದೆ.

4ವರ್ಷದ ಹಿಂದೆ ಬಲಿಗೆ ರಸ್ತೆ ಕಾಮಗಾರಿ ವೇಳೆ ರಸ್ತೆ ಪಕ್ಕದ ಧರೆಯಲ್ಲಿದ್ದ ಬಂಡೆ ಒಡೆಯಲಾಗಿತ್ತು. ಆಗಿನಿಂದ ಪ್ರತಿ ಮಳೆಗಾಲದಲ್ಲಿ ರಸ್ತೆಗೆ ಮಣ್ಣು ಮತ್ತು ಬಂಡೆಗಳು ಬರುತ್ತಲೇ ಇವೆ. ಆದರೆ, ಈ ಬಾರಿ ಬೃಹತ್ ಗಾತ್ರದ ಒಂದೆರಡು ಬಂಡೆಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಇದರಿಂದ ಕಳೆದ 2 ವಾರದಿಂದ ಹೊರನಾಡು-ಬಲಿಗೆ ರಸ್ತೆಯಲ್ಲಿ ಬಸ್ ಸಂಚಾರ ನಿಂತು ಹೋಗಿದೆ.

ರಸ್ತೆಗೆ ಉರುಳಿರುವ ದೊಡ್ಡ ಬಂಡೆಗಳನ್ನು ಒಡೆದು ತೆರವು ಮಾಡಬೇಕು. ಬಂಡೆಗಳು ನಿಂತಿರುವ ಸ್ಥಿತಿ ನೋಡಿದರೆ ಯಾವಾಗ ಬೇಕಾದರೂ ಉರುಳಬಹುದಾದ ಅಪಾಯ ಇದೆ ಎಂದು ಮೇಲುಮಂಚಿಕೆಯ ಕೃಷಿಕ ವಿಶಾಲ್ ಆತಂಕ ಹೊರಹಾಕುತ್ತಾರೆ.

ಬಲಿಗೆ, ಚಿಕ್ಕನಕೊಡಿಗೆ ಪ್ರದೇಶದ ಶಾಲಾ ಮಕ್ಕಳಿಗೆ ಹೊರನಾಡು, ಕಳಸಕ್ಕೆ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯು ಕಳೆದ 3ವರ್ಷದಿಂದ ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ, ಇದೀಗ ರಸ್ತೆ ಸಮಸ್ಯೆ ಕಾರಣಕ್ಕೆ ಬಸ್ ಇಲ್ಲದೆ ಮಕ್ಕಳು ಶಾಲೆ ತಲುಪುವುದು ಅಸಾಧ್ಯವೇ ಆಗಿದೆ. ಹೊರನಾಡು ಬಲಿಗೆ ಮೆಣಸಿನಹಾಡ್ಯ ಮೂಲಕ ಶೃಂಗೇರಿ ತಲುಪುತ್ತಿದ್ದ ಪ್ರವಾಸಿಗರಿಗೆ ಕೂಡ ಈ ರಸ್ತೆ ಸಂಪರ್ಕ ಇಲ್ಲದೆ ಅನಾನುಕೂಲವಾಗಿದೆ.

ಮಳೆಗಾಲಕ್ಕೂ ಮುನ್ನ ಹೊರನಾಡು-ಬಲಿಗೆ ರಸ್ತೆ ಪಕ್ಕದ ಚರಂಡಿ ತೆರೆಯದ ಕಾರಣಕ್ಕೆ ರಸ್ತೆ ಮೇಲೆ ನೀರು ಹರಿದು, ರಸ್ತೆಗೆ ಹಾನಿಯಾಗಿದೆ. ₹6 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆಯು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿದೆ ಎಂದು ಬಲಿಗೆ ಗ್ರಾಮಸ್ಥರು ದೂರಿದ್ದಾರೆ.

ಈ ಬಂಡೆಗಳಿಂದ 3ವರ್ಷದಿಂದಲೂ ರಸ್ತೆಗೆ ಸಮಸ್ಯೆ ಆಗುತ್ತಲೇ ಇದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಶಾಶ್ವತ ಕ್ರಮ ವಹಿಸಬೇಕು. ಬಂಡೆಗಳನ್ನು ತೆರವು ಮಾಡಿ ತಡೆಗೋಡೆ ನಿರ್ಮಾಣ ಮಾಡಬೇಕು.

-ಶರತ್ ಚಿಕ್ಕನಕೊಡಿಗೆ ಗ್ರಾಮ

ಶಾಲಾ ಬಸ್ ನಿಂತಿರುವುದರಿಂದ ಕೆಲ ಮಕ್ಕಳು ಖಾಸಗಿ ಜೀಪ್ ಆಟೊ ಮೂಲಕ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಬಡ ವರ್ಗದವರಿಗೆ ಅಷ್ಟೊಂದು ಹಣ ಹೊಂದಿಸುವುದಕ್ಕೆ ಕಷ್ಟವಾಗುತ್ತಿದ್ದು ಶಾಲೆಗೆ ಹೋಗುತ್ತಿಲ್ಲ. ಶೀಘ್ರ ರಸ್ತೆ ಸಂಪರ್ಕ ಸರಿಪಡಿಸಬೇಕು.

ಪ್ರವೀಣ್ ಮಕ್ಕಿಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT