ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ: ವೀಳ್ಯದೆಲೆಗೆ ಬೇಡಿಕೆ ಹೆಚ್ಚು, ಬೆಳೆ ಕಡಿಮೆ

ನಾಗರಾಜ್
Published 7 ಜೂನ್ 2024, 5:05 IST
Last Updated 7 ಜೂನ್ 2024, 5:05 IST
ಅಕ್ಷರ ಗಾತ್ರ

ತರೀಕೆರೆ: ರಾಜ್ಯದಲ್ಲೇ ‘ತರೀಕೆರೆ ವೀಳ್ಯದೆಲೆ’ ಹೆಸರುವಾಸಿ. ಈ ಭಾಗದಲ್ಲಿ ಬೆಳೆಯುವ ಎಲೆಯಲ್ಲಿ ಖಾರದ ಅಂಶ ಕಡಿಮೆ ಇದ್ದು, ಎಲೆಯೂ ಅತ್ಯಂತ ಮೃದುವಾಗಿರುವುದರಿಂದ ಎಲೆ-ಅಡಿಕೆ ಜಗಿಯುವವರಿಗೆ ಮುದ ನೀಡುತ್ತದೆ.

ಇಲ್ಲಿ ಬೆಳೆಯುವ ವೀಳ್ಯದೆಲೆ ದೂರದ ಬೆಂಗಳೂರು, ಹಾಸನ, ಚನ್ನರಾಯಪಟ್ಟಣ, ಬೇಲೂರು, ಚಿಕ್ಕಮಗಳೂರು, ಬಾಣಾವರ, ಕಡೂರು, ಅರಸೀಕೆರೆ, ಗಣಸಿ, ಶಿವಮೊಗ್ಗ ಮೊದಲಾದ ಮಾರುಕಟ್ಟೆಗಳಿಗೆ ಹೋಗುತ್ತದೆ. 80 ವೀಳ್ಯದೆಲೆಗಳಿರುವ ಒಂದು ಕಟ್ಟಿಗೆ ₹30 ರಿಂದ ₹40 ಬೆಲೆ ಇದೆ. ಒಂದು ಪೆಂಡಿಯಲ್ಲಿ 12 ರಿಂದ 13 ಸಾವಿರ ವೀಳ್ಯದೆಲೆಗಳಿದ್ದು, ಸರಾಸರಿ ₹4 ಸಾವಿರದಿಂದ ₹5 ಸಾವಿರ ಬೆಲೆ ಬೆಳೆಗಾರರಿಗೆ ಸಿಗುತ್ತದೆ. ವ್ಯಾಪಾರಿಗಳು ಸ್ಥಳೀಯರಿಂದ ವೀಳ್ಯದೆಲೆ ಖರೀದಿಸಿ ಹೊರ ಜಿಲ್ಲೆಗಳ ಮಾರುಕಟ್ಟೆಗೆ ಕಳುಹಿಸುತ್ತಾರೆ. ಫಸಲಿನಲ್ಲಿ ಕೊರತೆಯುಂಟಾದಾಗ ಈ ಬೆಲೆಯಲ್ಲಿ ಏರಿಳಿತ ಉಂಟಾಗುತ್ತದೆ.

ತರೀಕೆರೆ ಪಟ್ಟಣದ ವ್ಯಾಪ್ತಿಯಲ್ಲಿರುವ ಸಾವಿರಾರು ಕುಟುಂಬಗಳು ದಶಕಗಳಿಂದ ಈ ವೀಳ್ಯದೆಲೆ ಬೆಳೆಯಿಂದಲೇ ಬದುಕು ಕಟ್ಟಿಕೊಂಡಿವೆ. ಹಿಂದೆ ದಿನಕ್ಕೆಸರಾಸರಿ 200 ರಿಂದ 300 ಪೆಂಡಿಗಳಷ್ಟು ಎಲೆಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಈಗ ಕಡಿಮೆಯಾಗಿದೆ. ವೀಳ್ಯದೆಲೆಗೆ ರೋಗ ತಗುಲಿದರೆ ಇಳುವರಿ ಕಡಿಮೆಯಾಗುತ್ತದೆ. ಜತೆಗೆ  ದುಬಾರಿ ಕೂಲಿ ಮತ್ತು ಕೂಲಿ ಕಾರ್ಮಿಕರ ಕೊರತೆಯಿಂದ ವೀಳ್ಯದೆಲೆ ಬೆಳೆಯುವುದು ಕಡಿಮೆಯಾಗಿದೆ. ಸದ್ಯ ತರೀಕೆರೆ ಮಾರುಕಟ್ಟೆಗೆ 30 ರಿಂದ 40 ಪೆಂಡಿಗಳು ಮಾತ್ರ ಬರುತ್ತಿವೆ. ವೀಳ್ಯದೆಲೆ ಬೆಳೆಯುತ್ತಿದ್ದವರು ಬೇರೆ ವೃತ್ತಿಗಳತ್ತ ಒಲವು ತೋರಿಸುತ್ತಿರುವುದರಿಂದ ಬೆಳೆ ಕಡಿಮೆಯಾಗಿದೆ.

ಮಾರಾಟಕ್ಕಾಗಿ ಪೆಂಡಿಗಳಲ್ಲಿ ಕಟ್ಟಿ ಇಟ್ಟಿರುವ ವೀಳ್ಯದೆಲೆ 
ಮಾರಾಟಕ್ಕಾಗಿ ಪೆಂಡಿಗಳಲ್ಲಿ ಕಟ್ಟಿ ಇಟ್ಟಿರುವ ವೀಳ್ಯದೆಲೆ 

‘ಮಾರಾಟಕ್ಕೆ ಸ್ಥಳ ನಿಗದಿ ಪಡಿಸಬೇಕು’

ವೀಳ್ಯದೆಲೆಗೆ ಆಗಾಗ್ಗ ಕೆಲವು ರೋಗಗಳು ತಗುಲುತ್ತಿದ್ದು ಈ ಬಗ್ಗೆ ತೋಟಗಾರಿಕಾ ಇಲಾಖೆಯವರು ತಜ್ಞರಿಂದ ಮಣ್ಣು ಪರೀಕ್ಷೆ ನಡೆಸಿ  ರೋಗಗಳಿಗೆ ಸೂಕ್ತ ಔಷಧೋಪಚಾರಗಳ ಸಲಹೆಗಳನ್ನು ನೀಡಬೇಕು. ವೀಳ್ಯದೆಲೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ  ಖಾಸಗಿ ಬಸ್‌ ನಿಲ್ದಾಣದಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ. ಶಾಸಕರು ಹಾಗೂ ಪುರಸಭೆ ಸೂಕ್ತ ಸ್ಥಳವನ್ನು ನಿಗದಿ ಮಾಡಿಕೊಡಬೇಕು ಎಂದು ತರೀಕೆರೆ ಜೇನುಗೂಡು ವೀಳ್ಯದೆಲೆ ಬೆಳೆಗಾರರ ಮತ್ತು ಮಾರಾಟಗಾರರ ಸಂಘದ ಕಾರ್ಯದರ್ಶಿ ದೇವರಾಜ್ ಆಗ್ರಹಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT