ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಎಂ.ಕೋಡಿಹಳ್ಳಿ ಕೆರೆ ಏರಿ ಬಿರುಕು

ಕಡೂರು: ಅಪಾಯದಲ್ಲಿ ನೂರಾರು ಎಕರೆ ತೋಟ, ಹತ್ತಾರು ಮನೆಗಳು
Last Updated 5 ಡಿಸೆಂಬರ್ 2021, 3:36 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನಲ್ಲಿ ಈಚೆಗೆ ಧಾರಾಕಾರ ಮಳೆಯಾಗಿದ್ದರಿಂದ ಎಂ.ಕೋಡಿಹಳ್ಳಿ ಕೆರೆ ಏರಿ ಬಿರುಕು ಬಿಟ್ಟಿದೆ. ಹೀಗಾಗಿ, ಕೆರೆ ಒಡೆಯುವ ಭೀತಿ ಎದುರಾಗಿದೆ.

ಎಂ.ಕೋಡಿಹಳ್ಳಿ ಕೆರೆ ಸುಮಾರು 148.48 ಹೆಕ್ಟೇರ್ ಪ್ರದೇಶ ವ್ಯಾಪಿಸಿದೆ. 1,500 ಅಡಿ ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 2019ರಲ್ಲಿ ಕೆರೆ ಪೂರ್ಣ ಭರ್ತಿಯಾಗಿತ್ತು. ಕಳೆದ ವರ್ಷ ಕೆರೆಗೆ ನೀರು ಬರಲಿಲ್ಲ. ಈ ವರ್ಷದ ಮಳೆಗೆ ಕೆರೆ ಅಕ್ಟೋಬರ್‌ನಲ್ಲಿ ತುಂಬಿತು. ಕೆರೆಗೆ ನೀರುಣಿಸುವ ಗೊಂದಿ ನಾಲೆ ತುಂಬಿ ಹರಿಯುತ್ತಿದ್ದ ಕಾರಣ ದೊಡ್ಡ ಪ್ರಮಾಣದ ನೀರು ಕೋಡಿ ಮೇಲೆ ಹರಿಯುತ್ತಿತ್ತು.

ಹದಿನೈದು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೆರೆಯ ಏರಿ ಸುಮಾರು ಅರ್ಧ ಅಡಿ ಅಗಲ ಇಪ್ಪತ್ತು ಮೀಟರ್‌ಗಳಷ್ಟು ಕುಸಿದು ಅಪಾಯದಂಚಿನಲ್ಲಿದೆ. ಮಳೆ ಬರುತ್ತಿರುವುದರಿಂದ ದಿನದಿಂದ ದಿನಕ್ಕೆ ಬಿರುಕು ಅಗಲವಾಗುತ್ತಿದೆ. ಮತ್ತಷ್ಟು ಮಳೆ ಬಂದರೆ ಕೆರೆ ಏರಿ ಒಡೆಯುವ ಸಾಧ್ಯತೆ ಹೆಚ್ಚಿದೆ. ಬಿರುಕಿಗೆ ಮಳೆ ನೀರು ಬೀಳದಂತೆ ಗ್ರಾಮಸ್ಥರು ಟಾರ್ಪಾಲ್ ಹಾಕಿದ್ದಾರೆ.

ಹಾಗೇನಾದರೂ ಅನಾಹುತ ಸಂಭವಿಸಿದಲ್ಲಿ ಕೆರೆಯ ಹಿಂದಿರುವ ಸುಮಾರು 100 ಎಕರೆಗಳಿಗೂ ಹೆಚ್ಚು ತೆಂಗು ಮತ್ತು ಅಡಿಕೆ ತೋಟಗಳಿಗೆ ಹಾನಿಯಾಗಲಿದೆ. ಈ ತೋಟಗಳಲ್ಲಿ ಹತ್ತಕ್ಕೂ ಹೆಚ್ಚು ವಾಸದ ಮನೆಗಳಿವೆ. ಅಲ್ಲಿಗೂ ಅಪಾಯ ತಪ್ಪಿದ್ದಲ್ಲ.

ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಈ ಕೆರೆ ಏರಿಯನ್ನು ದುರಸ್ತಿಗೊಳಿಸದಿರುವುದು ಈ ಅಪಾಯ ಪರಿಸ್ಥಿತಿಗೆ ಕಾರಣವಾಗಿದೆ. ಎಂಟು ವರ್ಷಗಳ ಹಿಂದೆ ಕೆರೆ ತುಂಬಿದ ಸಮಯದಲ್ಲಿ ಏರಿ ಬಿರುಕು ಬಿಟ್ಟು ನೀರು ಹೊರ ಹೋಗತೊಡಗಿತ್ತು. ಆಗ ತಾತ್ಕಾಲಿಕವಾಗಿ ಏರಿ ದುರಸ್ತಿ ಮಾಡಲಾಗಿತ್ತು. ನಂತರ ಐದಾರು ವರ್ಷ ಕೆರೆ ಬರಿದಾಗಿದ್ದಾಗ ಪರಿಶೀಲನೆ ನಡೆಸಿ, ಸರಿಪಡಿಸದೆ ನಿರ್ಲಕ್ಷ್ಯ ಮಾಡಿದ್ದರಿಂದ ಈಗ ಮತ್ತದೇ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇತ್ತ ಗೊಂದಿ ನಾಲೆಯಲ್ಲಿ ನೀರು ಬರುತ್ತಿರುವುದರಿಂದಲೂ ಕೆರೆಯಲ್ಲಿ ನೀರಿನ‌ ಮಟ್ಟ ಏರುತ್ತಲೇ ಇರುವುದೂ ತೊಂದರೆಯಾಗುತ್ತಿದೆ. ಮೊದಲು ಈ ನಾಲೆಯ ಮಡಬಾಯಿಗಳಿಂದ ನೀರು ಹೊರಹೋಗುತ್ತಿತ್ತು. ಕಾಲುವೆ ದುರಸ್ತಿ ಕಾಮಗಾರಿ ಸಮಯದಲ್ಲಿ ಎಲ್ಲ ಮಡಬಾಯಿಗಳು ಮುಚ್ಚಿರುವುದರಿಂದ ಪೂರ್ಣ ಪ್ರಮಾಣದ ನೀರು ಕೆರೆಗೆ ಹೋಗುತ್ತದೆ. ಕಾಲುವೆ ರಿಪೇರಿ ಕಾಮಗಾರಿ ಗುತ್ತಿಗೆ ಪಡೆದವರು ಕೇವಲ ಕಾಲುವೆ ಅಗಲ ಮಾಡಿದ್ದನ್ನು ಬಿಟ್ಟರೆ ಉಳಿದ ರಿವಿಟ್ ಮೆಂಟ್, ಮಡಬಾಯಿಗಳನ್ನು ಇಡುವ ಯಾವ ಕಾರ್ಯವನ್ನೂ ಮಾಡಿಲ್ಲ. ಎರಡು ವರ್ಷಗಳಿಂದ ಇದೇ ಪರಿಸ್ಥಿತಿಯಿದೆ. ತೊಂದರೆಯಾದಾಗ ಬರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತೆ ಇತ್ತ ಕಡೆ ಬರುವುದಿಲ್ಲ’ ಎಂಬುದು ಸ್ಥಳೀಯರ ದೂರು.

ರೈತರ ಜೀವನಾಡಿಯಾಗಿರುವ ಎಂ.ಕೋಡಿಹಳ್ಳಿ ಕೆರೆ ಅಪಾಯದಲ್ಲಿದ್ದು, ಕೂಡಲೇ ಇದರತ್ತ ಗಮನ ಹರಿಸಬೇಕೆಂದು ಎಂ.ಕೋಡಿಹಳ್ಳಿ- ಮಚ್ಚೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಏರಿಯ ಒತ್ತಡ ಕಡಿಮೆಗೆ ತುರ್ತು ಕ್ರಮ’

ಕಡೂರು: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದಯಾಶಂಕರ್ ಶನಿವಾರ ಎಂ.ಕೋಡಿಹಳ್ಳಿಯ ಕೆರೆ ಏರಿ ಪ್ರದೇಶಕ್ಕೆ ಭೇಟಿ ನೀಡಿ ಬಿರುಕನ್ನು ಪರಿಶೀಲಿಸಿದರು.

‘ಮತ್ತಷ್ಟು ಮಳೆ ಬಂದರೆ ಏರಿ ಬಿರುಕಿನಲ್ಲಿ ನೀರು ಹೋದರೆ ಒಡೆದು ಹೋಗುವ ಸಾಧ್ಯತೆ ಅಧಿಕವಾಗಿದೆ. ತುರ್ತಾಗಿ ಕೆರೆಗೆ ನೀರು ಬರುವುದನ್ನು ನಿಲ್ಲಿಸುವ ಕ್ರಮವಾಗಿ ಗೊಂದಿ ನಾಲೆಯ ನೀರು ವೇದಾ ಹಳ್ಳಕ್ಕೆ ಹೋಗುವಂತೆ ಮಾಡಲು ಸೂಚಿಸಲಾಗಿದೆ. ಏರಿಯ ಒತ್ತಡ ಕಡಿಮೆ ಮಾಡಲು ಕನಿಷ್ಠ ಮೂರು ಅಡಿ ನೀರು ಕಡಿಮೆ ಮಾಡಲು ಕೋಡಿಯನ್ನು ಅಗಲ ಮಾಡಿ ನೀರು ಹೊರಬಿಡಲು ವ್ಯವಸ್ಥೆ ಮಾಡಲಾಗಿದೆ. ನಂತರ ತುರ್ತಾಗಿ ಬಿರುಕಿನಲ್ಲಿ ಸಿಮೆಂಟ್ ಮಿಶ್ರಿತ ಎಂ-ಸ್ಯಾಂಡ್ ತುಂಬಿಸುವ ಕಾರ್ಯ ಮಾಡಲಾಗುವುದು. ಒಟ್ಟಾರೆ ಕೆರೆ ಒಡೆಯದಂತೆ ಸಾಧ್ಯವಿರುವ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಇಲಾಖೆಯ ಎಂಜಿನಿಯರ್ ಮಂಜುನಾಥ್, ರಘುನಂದನ್, ಕಂದಾಯ ಅಧಿಕಾರಿ ಮಾರುತಿ ಇದ್ದರು.

ವಾಗ್ವಾದ: ಕೆರೆ ಕೋಡಿ ಒಡೆಯುವ ಮತ್ತು ಕಾಲುವೆ ನೀರು ನಿಲ್ಲಿಸುವ ವಿಚಾರದಲ್ಲಿ ಗ್ರಾಮಸ್ಥರು ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ‘ಕೆರೆ ಅಪಾಯದಲ್ಲಿದೆ. ಹೀಗಾಗಿ, ಕೋಡಿ ತೆಗೆಯುವುದು ಅನಿವಾರ್ಯ’ ಎಂದು ದಯಾಶಂಕರ್ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳಕ್ಕೆ ಪಿಎಸ್‌ಐ ರಮ್ಯಾ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT