ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಿಗದ್ದೆಯಲ್ಲಿ ಮೆಕ್ಕೆಜೋಳ ಬೆಳೆ

ಮಲೆನಾಡಿನಲ್ಲಿ ಬೆಳೆಯುವ ಪ್ರಯತ್ನ, ತೆನೆ ತುಂಬಿದ ಗಿಡಗಳು
Last Updated 29 ಏಪ್ರಿಲ್ 2021, 6:38 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಲ್ಲಿ ಕೃಷಿ ಎಂದರೆ ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಭತ್ತ ಮಾತ್ರ. ಅದರಲ್ಲೂ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯುತ್ತಿರುವ ಈಚಿನ ದಿನಗಳಲ್ಲಿ ಯುವ ಕೃಷಿಕರೊಬ್ಬರು ಮಲೆನಾಡಿನಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರಯತ್ನ ನಡೆಸಿದ್ದಾರೆ.

ಹಳುವಳ್ಳಿ ಸಮೀಪದ ಅಜ್ಜಯ್ಯನಮನೆಯ ಅಶೋಕ್ ತಮ್ಮ ಊರಿಗೆ ಅಪರಿಚಿತವಾದ ಮೆಕ್ಕೆ ಜೋಳ ಬೆಳೆಸಿದ್ದಾರೆ. ಒಂದು ಎಕರೆ ಭತ್ತದ ಮಕ್ಕಿಗದ್ದೆಯಲ್ಲಿ ಭತ್ತದ ಕಟಾವಿನ ನಂತರ ಉಳುಮೆ ಮಾಡಿ ಜನವರಿಯಲ್ಲಿ ಮೆಕ್ಕೆಜೋಳದ ಬೀಜ ಬಿತ್ತಿದ್ದರು. ಸತತ ಆರೈಕೆ ಫಲವಾಗಿ ಅವುಗಳಲ್ಲಿ ಈಗ ಜೋಳದ ತೆನೆಗಳು ಮೂಡುತ್ತಿದ್ದು ಕಳಸ ಭಾಗದಲ್ಲಿ ಇದು ಅಪರೂಪದ ಬೆಳೆ ಆಗಿದೆ.

‘ನಮ್ಮ ನೆಂಟರೊಬ್ಬರು ಶೃಂಗೇರಿ-ತೀರ್ಥಹಳ್ಳಿ ಗಡಿಭಾಗದ ಮಾವಿನಕಟ್ಟೆಯಲ್ಲಿ ಹೈನುಗಾರಿಕೆ ಮಾಡುತ್ತಾರೆ. ಅವರು ದನಗಳ ಮೇವಿಗೆ ಪ್ರತಿ ವರ್ಷ ಮೆಕ್ಕೆಜೋಳ ಬೆಳೆಯುತ್ತಾರೆ. ಅವರಿಂದ ಸ್ಫೂರ್ತಿ ಹೊಂದಿ ನಾವು ಕೂಡ ಮೆಕ್ಕೆಜೋಳ ಬೆಳೆಯಲು ಮುಂದಾದೆವು’ ಎಂದು ಅಶೋಕ್ ಹೇಳುತ್ತಾರೆ.

‘ವಲ್ಲಿಕೊಡಿಗೆಯ ಜೇನುಕೃಷಿ ತಜ್ಞ ಚಂದ್ರಶೇಖರ್ ಅವರ ನೆಂಟರು ಶಿವಮೊಗ್ಗ ಜಿಲ್ಲೆಯಲ್ಲಿ ಮೆಕ್ಕಿಜೋಳದ ಕೃಷಿಯಲ್ಲಿ ನಿಪುಣರು. ಅವರು ಅಲ್ಲಿಂದ ಬೀಜ ತರಿಸಿಕೊಟ್ಟು, ಅಗತ್ಯ ಮಾಹಿತಿ ನೀಡಿದರು. ಜೊತೆಗೆ ಚಂದ್ರಶೇಖರ್ ಹುಮ್ಮಸ್ಸು ತುಂಬಿದರು. ನನ್ನ ತಮ್ಮ ಸುಮಂತ ನಿತ್ಯವೂ ಕೃಷಿಯಲ್ಲಿ ಜೊತೆಯಾದ. ಈಗ ಜೋಳದ ತೆನೆಗಳು ನಮಗೆ ಖುಷಿ ಕೊಡುತ್ತಿವೆ’ ಎಂದು ಅಶೋಕ್ ಸಂತಸದಿಂದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೇ ಅಂತ್ಯದ ವೇಳೆಗೆ ಜೋಳ ಕಟಾವು ಮಾಡಿ ಸಿಕ್ಕಷ್ಟು ಮೆಕ್ಕೆಜೋಳ ಮಾರಾಟ ಮಾಡಿ, ಜೋಳದ ದಂಟನ್ನು ಕತ್ತರಿಸಿ ಮಳೆಗಾಲದ ಪಶು ಆಹಾರಕ್ಕೆ ಸಂಗ್ರಹಿಸುವುದು ಇವರ ಪ್ರಮುಖ ಗುರಿ. ಸಾಕಿರುವ ಮೂರು ಹಸುಗಳಿಗೆ ಪೌಷ್ಟಿಕ ಆಹಾರ ಸಿಗಲಿ ಎಂಬ ಉದ್ದೇಶದಿಂದ ಜೋಳದ ಕೃಷಿಗೆ ಕೈಹಾಕಿದ್ದಾಗಿಯೂ ಅವರು ಹೇಳುತ್ತಾರೆ. ಜೋಳಕ್ಕೆ ಮಂಗ ಮತ್ತು ಹಂದಿ ಕಾಟ ಇಲ್ಲದಿದ್ದರೂ ಇರುವೆಗಳು ಆರಂಭದಲ್ಲಿ ಬೀಜ ತಿಂದಿವೆ. ಈಗ ನವಿಲುಗಳು ಸ್ವಲ್ಪ ಕಾಟ ಕೊಡುತ್ತಿವೆ. ಮುಂದಿನ ವರ್ಷ ಅಶೋಕ್ ಜೋಳದ ಜೊತೆ ಹರಿವೆ ಸೊಪ್ಪು, ಬೆಂಡೆ, ಸೌತೆಯನ್ನು ಬೆಳೆಯುವ ಯೋಜನೆ ಹೊಂದಿದ್ದಾರೆ.

‘ಮೂರು ದಿನಕ್ಕೊಮ್ಮೆ ನೀರು’

‘ಗದ್ದೆಯಲ್ಲಿ 2 ಮತ್ತು 1 ಅಡಿ ಅಂತರದ ಸಾಲಿನಲ್ಲಿ ಬೀಜ ನಾಟಿ ಮಾಡಲಾಗಿದೆ. ಬೀಜ, ಗೊಬ್ಬರ, ಉಳುಮೆಗೆ ಎಕರೆಗೆ ₹ 15 ಸಾವಿರ ವೆಚ್ಚವಾಗಿದೆ. ಮಳೆ ಇಲ್ಲದೆ ಇದ್ದಾಗ ಮೂರು ದಿನಕ್ಕೊಮ್ಮೆ ಸ್ಪ್ರಿಂಕ್ಲರ್ ಮೂಲಕ ನೀರು ನೀಡಲಾಗಿದೆ. ಮೇಲು ಗೊಬ್ಬರ ನೀಡಿ ಗಿಡದ ಬುಡಕ್ಕೆ ಮಣ್ಣು ಏರಿಸಿದ್ದೇವೆ’ ಎಂದು ಅಶೋಕ್ ಹೇಳುತ್ತಾರೆ.

ಈಗ ಕೊರೊನಾ ಸೋಂಕಿನ ಕಾರಣಕ್ಕೆ ಕರ್ಫ್ಯೂ ಇರದಿದ್ದರೆ, ಮೆಕ್ಕೆಜೋಳದ ಗದ್ದೆಯಲ್ಲಿ ಬೇಬಿ ಕಾರ್ನ್ ತೆಗೆದು ಸ್ಥಳೀಯವಾಗಿ ಮಾರುವ ಯೋಜನೆ ಅವರಿಗಿತ್ತು. ಮಲೆನಾಡಿನಲ್ಲಿ ಪ್ರತಿ ವರ್ಷ 6 ತಿಂಗಳು ಪಾಳು ಬೀಳುವ ಭತ್ತದ ಗದ್ದೆಗಳಲ್ಲಿ ಇಂತಹ ಪರ್ಯಾಯ ಬೆಳೆ ಬೆಳೆದರೆ ಅಷ್ಟಿಷ್ಟು ಆದಾಯದ ಜೊತೆಗೆ ಪಶುಗಳ ಮೇವಿಗೂ ಅನುಕೂಲ ಆಗುತ್ತದೆ ಎಂಬುದನ್ನು ಅಶೋಕ್ ಕುಟುಂಬ ಸಾಬೀತುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT