ಭಾನುವಾರ, ಏಪ್ರಿಲ್ 18, 2021
31 °C
ಎನ್‌.ಆರ್‌.ಪುರ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಂಜಿನಿಯರ್‌ಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಸೂಚನೆ

ಮುಲಾಜಿಲ್ಲದೆ ರಸ್ತೆ ಒತ್ತುವರಿ ತೆರವುಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಯಾರೇ ಆಗಲಿ ರಸ್ತೆ ಒತ್ತುವರಿ ಮಾಡಿ ಬೇಲಿ ಹಾಕಿದರೆ ಮುಲಾಜಿಲ್ಲದೆ ಪೊಲೀಸರ ನೆರವು ಪಡೆದು ಬೇಲಿಯನ್ನು ತೆರವುಗೊಳಿಸಿ’ ಎಂದು ಶಾಸಕ ಡಿ.ಡಿ.ರಾಜೇಗೌಡ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಸಾಮರ್ಥ್ಯಸೌಧದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಬಾಳೆಹೊನ್ನೂರಿ ನದಲ್ಲೂ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ರಸ್ತೆ ಒತ್ತುವರಿ ಮಾಡಿದ ಕಟ್ಟಡವನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗಿದೆ. ಇದರಲ್ಲಿ ಯಾವುದೇ ಪಕ್ಷ ನೋಡುವುದಿಲ್ಲ. ಜನರಿಗೆ ಒಡಾಡಲು ರಸ್ತೆ ಅಗತ್ಯವಾಗಿದೆ’ ಎಂದರು.

‘ಕೆಡಿಪಿ ಸಭೆಯ ನಿರ್ಣಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸೂಚಿಸಿದರು.

‘ಸಭೆಯ ನಿರ್ಣಯ ಪಾಲಿಸದ ಬಗ್ಗೆ ಶೃಂಗೇರಿ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ’ ಎಂದು ಎಚ್ಚರಿಕೆ ನೀಡಿದರು.

‘ಜೈಲ್ ಬಿಲ್ಡಿಂಗ್ ಸಮೀಪದ ರಸ್ತೆಗೆ ಜೈಲಿನ ಅಧಿಕಾರಿಗಳು ನಮ್ಮ ಜಾಗ ಎಂದು ಬೇಲಿ ಹಾಕಿದ್ದಾರೆ. ಇದು ಸರ್ಕಾರ ಜಾಗ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಕಳೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ಸರ್ವೆ ಮಾಡಲು ಸೂಚಿಸಿದ್ದೆ. ಇನ್ನೂ ಸರ್ವೆಯಾಗಿಲ್ಲ. ಸರ್ಕಾರಿ ಜಾಗವಾಗಿದ್ದರೆ ತಕ್ಷಣ ಬೇಲಿ ಕಿತ್ತು ಸ್ಥಳೀಯರಿಗೆ ಒಡಾಡಲು ದಾರಿ ಮಾಡಿಕೊಡಬೇಕು’ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

‘ಗಡಿಗೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಚ್ಚಬ್ಬಿಯಲ್ಲಿ ಆಶ್ರಯ ನಿವೇಶನಕ್ಕಾಗಿ 5 ಎಕರೆ ಜಾಗ ಮಂಜೂರು ಮಾಡಲಾಗಿತ್ತು. ಇದರಲ್ಲಿ 2 ಎಕರೆ ಜಾಗ ಸ್ಥಳೀಯರು ಒತ್ತುವರಿ ಮಾಡಿ ಗಿಡ ನೆಟ್ಟಿದ್ದಾರೆ ಎಂಬ ದೂರು ಬಂದಿದೆ. ತಕ್ಷಣ ಬೇಲಿ ಕಿತ್ತು ಹಾಕಿ ಒತ್ತುವರಿ ತೆರವು ಮಾಡಬೇಕು. ಅಲ್ಲಿನ ಗ್ರಾಮ ಪಂಚಾಯಿತಿ ಪಿಡಿಒ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕಳೆದ ವರ್ಷದ ಅತಿವೃಷ್ಟಿಯಿಂದ ನರಸಿಂಹರಾಜಪುರ ತಾಲ್ಲೂಕಿನಲ್ಲಿ ₹ 16 ಕೋಟಿ ನಷ್ಟ ಉಂಟಾಗಿತ್ತು. ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ₹ 30 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದು, ನರಸಿಂಹರಾಜಪುರಕ್ಕೆ ₹ 15 ಲಕ್ಷ, ಬಾಳೆಹೊನ್ನೂರಿಗೆ ₹ 15 ಲಕ್ಷ ವೆಚ್ಚ ಮಾಡಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆ ಕಾಮಗಾರಿ ಕಳಪೆ ಮಾಡಿದರೆ ಸಂಬಂಧಪಟ್ಟ ಎಂಜಿನಿಯರ್ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ‘ಅರಳಿಕೊಪ್ಪ, ಗುಬ್ಬಿಗಾ, ಬಾಳೆ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ನಿವೇಶನಕ್ಕೆ ಜಾಗ ಕೊಡಿ ಎಂದರೆ ಜಾಗ ಇಲ್ಲ ಎನ್ನುತ್ತಾರೆ. ಆದರೆ, ಕಸ ವಿಲೇವಾರಿಗಾಗಿ 2 ಎಕರೆ ಜಾಗ ಮಂಜೂರು ಮಾಡಿದ್ದಾರೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷ ಮಂಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ, ಇಒ ನಯನಾ, ತಹಶೀಲ್ದಾರ್ ರೇಣುಕಾ, ನೋಡಲ್‍ ಅಧಿಕಾರಿ ಚಂದ್ರಶೇಖರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು