ಶನಿವಾರ, ಫೆಬ್ರವರಿ 4, 2023
28 °C
ಸರ್ಕಾರದ ನಿರ್ಲಕ್ಷ್ಯ ದಿಂದ ಕಾಡಾನೆ ಹಾವಳಿ ಹೆಚ್ಚಳ: ಸಾರ್ವಜನಿಕರ ಆರೋಪ

ತೊಂದರೆ ನೀಡುವ ಅಧಿಕಾರಿಗಳು ಬೇಡ: ಶಾಸಕ ಎಂ.ಪಿ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಜನರಿಗೆ ಉದ್ದೇಶ ಪೂರ್ವಕವಾಗಿ ತೊಂದರೆ ನೀಡುವ ಅಧಿಕಾರಿಗಳು ಕೂಡಲೇ ಜಾಗ ಖಾಲಿ ಮಾಡಬೇಕು ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಖಾರವಾಗಿ ಹೇಳಿದರು.

ಹ್ಯಾಂಡ್ ಪೋಸ್ಟಿನ ವಲಯ ಕೃಷಿಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಅರಣ್ಯ ಇಲಾಖೆಯಿಂದ ರೈತರು, ಚುನಾಯಿತ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಅರಣ್ಯ ಇಲಾಖೆ ಸಿಬ್ಬಂದಿ ಸಣ್ಣಪುಟ್ಟ ವಿಚಾರಗಳಿಗೂ ಜನರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಕಾಡಾನೆ ಪ್ರದೇಶದಲ್ಲಿ 20 ಸಾವಿರ ಎಕರೆ ಪ್ರದೇಶವನ್ನು ಭತ್ತ ಬೆಲೆಯದೇ ರೈತರು ಪಾಳು ಬಿಟ್ಟಿದ್ದಾರೆ. ಇಪ್ಪತ್ತು ವರ್ಷಗಳಿಂದ ರೈತರಿಗೆ ಅರಣ್ಯ ಇಲಾಖೆ ಪರಿಹಾರ ನೀಡಿಲ್ಲ. ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಕೂಡ ನೀಡಿಲ್ಲ. ಇನ್ನು ಮುಂದೆ ಸಭೆ ನಡೆಸುವುದಾದರೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಬರಬೇಕು’ ಎಂದು ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಮಾತನಾಡಿ ‘ಡಿ. 19 ರಿಂದ ನಡೆಯುವ ಅಧಿವೇಶನದಲ್ಲಿ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಜನರಿಗೆ ತೊಂದರೆ ನೀಡಬಾರದು. ಕಾಡಾನೆ ದಾಳಿ ನಡೆಸಿ ಶೋಭಾ ಅವರನ್ನು ಕೊಂದ ಬಳಿಕ ಜನ ಗೊತ್ತಿಲ್ಲದೆ ಗಲಾಟೆ ಮಾಡಿದ್ದಾರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡಬೇಕು’ ಎಂದು ಸಲಹೆ ನೀಡಿದರು.

ಡಿಎಫ್ಓ ಇ. ಕ್ರಾಂತಿ ಮಾತನಾಡಿ, ‘ತಾಲ್ಲೂಕಿನ ದೇವರುಂದ ಗ್ರಾಮದಲ್ಲಿ ನಾಲ್ಕು, ಕೊಟ್ಟಿಗೆಹಾರ ಭಾಗದಲ್ಲಿ ನಾಲ್ಕು , ತತ್ಕೊಳ ಭಾಗದಲ್ಲಿ ಆರು, ಸಾರಗೋಡು ಮೀಸಲು ಅರಣ್ಯದಲ್ಲಿ ಐದು ಸೇರಿದಂತೆ ಒಟ್ಟು 19 ಕಾಡಾನೆಗಳಿವೆ. ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿರುವ 3 ಕಾಡಾನೆಗಳನ್ನು ಹಿಡಿಯಲು ನಾಗರಹೊಳೆಯಿಂದ ಭಾನುವಾರ 6 ಸಾಕಾನೆಗಳು ಬರಲಿವೆ. ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್ ಜಯರಾಂ, ಬೆಳಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಆರ್ ಬಾಲಕೃಷ್ಣ ಮಾತನಾಡಿದರು. ಕಾಡಾನೆಯಿಂದ ಮೃತಪಟ್ಟ ಶೋಭಾ ಅವರ ಕುಟುಂಬಕ್ಕೆ ಪರಿಹಾರದ ಐದುವರೆ ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಕುಂದೂರು ಗ್ರಾಪಂ ಅಧ್ಯಕ್ಷ ವಿಜಯೇಂದ್ರ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣಗೌಡ, ಕಾಫಿ ಬೆಳೆಗಾರರಾದ ವೆಂಕಟರಾಮ್, ಮನೋಹರ್, ಸಾಗರ್, ಚಂದ್ರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು