ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

ಭಾರಿ ಮಳೆ: ಉರುಳಿ ಬೀಳುತ್ತಿರುವ ಮರಗಳು, ಕುಸಿದು ಬಿದ್ದ ಮನೆಗಳು
Last Updated 9 ಆಗಸ್ಟ್ 2022, 5:11 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸೋಮವಾರವೂ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾನುವಾರ ತಡರಾತ್ರಿಯ ಬಳಿಕ ಮಳೆಯ ಆರ್ಭಟ ಹೆಚ್ಚಾಗಿತ್ತು. ನಸುಕಿನ ಮೂರು ಗಂಟೆಯ ಸುಮಾರಿಗೆ ಸತತ ಎರಡು ಗಂಟೆ ಮಳೆ ಸುರಿದಿದ್ದರಿಂದ ಹತ್ತಾರು ಮನೆಗಳು ನೆಲಕಚ್ಚಿವೆ. ಅದರಲ್ಲೂ ಗ್ರಾಮೀಣ ಭಾಗಗಳ ಹಲವು ಕಚ್ಚಾ ಮನೆಗಳು ಸಂಪೂರ್ಣ ಜಖಂ ಗೊಂಡಿದ್ದು, ನಿರಾಶ್ರಿತರಾದವರಿಗೆಶಾಲೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಚಿನ್ನಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನಾಪುರದಲ್ಲಿ ಕೆಂಚಯ್ಯ ಎಂಬುವರ ಮನೆ ಕುಸಿದಿದ್ದು, ಕುಟುಂಬಕ್ಕೆ ಜನ್ನಾಪುರದ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರದ ರತ್ನಮ್ಮ ಎಂಬುವರ ಮನೆಯು ಸಂಪೂರ್ಣ ಹಾನಿಯಾಗಿದೆ. ದಿನ ಬಳಕೆಯ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿದ್ದು ಸ್ಥಳೀಯರ ನೆರವಿನಲ್ಲಿ ಆಶ್ರಯ ನೀಡಲಾಗಿದೆ. ಮೇಕನಗದ್ದೆ ಗ್ರಾಮದಲ್ಲಿ ಜಾನಕಮ್ಮ ಎಂಬುವರ ಮನೆಯ ಚಾವಣಿ ಕುಸಿದಿದೆ. ಕೋಳೂರು ಸುಬ್ಬಯ್ಯ, ಬೆಟ್ಟಗೆರೆ ನೇತ್ರ ಎಂಬುವರ ಮನೆಗಳು ಸಂಪೂರ್ಣ ಜಖಂಗೊಂಡಿವೆ. ಹೆಸಗೋಡಿನ ಕರಿಯ ಎಂಬುವವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದೆ. ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತವಾಗಿದ್ದು, ನೆಟ್ಟಿರುವ ಪೈರು ಕೊಲೆಯುವ ಆತಂಕ ಎದುರಾಗಿದೆ.

ಹೇಮಾವತಿ, ಚಿಕ್ಕಳ್ಳ, ದೊಡ್ಡಳ್ಳ, ಸುಣ್ಣದಹಳ್ಳ, ಜಪಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಹೇಮಾವತಿ ನದಿಯು ಉಗ್ಗೆಹಳ್ಳಿ ಗ್ರಾಮದ ಬಳಿ ಗದ್ದೆ ಬಯಲಿನ ಮಟ್ಟದಲ್ಲಿ ಹರಿಯುತ್ತಿದೆ. ಸೋಮವಾರವೂ ಬಹುತೇಕ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಕಾರ್ಮಿಕರು ಮನೆಯಲ್ಲಿಯೇ ಇರುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT