ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಾಫಿ, ಅಡಿಕೆ ಒಣಗಿಸಲು ಬೆಳೆಗಾರರ ಕಸರತ್ತು

ಮಳೆಯ ಅಬ್ಬರಕ್ಕೆ ತತ್ತರಿಸಿದ ಮಲೆನಾಡು– ಕಾಫಿ ಬೆಳೆಗಾರರ ಬದುಕು ಅಕ್ಷರಶಃ ನರಕಯಾತನೆ
Last Updated 20 ನವೆಂಬರ್ 2021, 4:37 IST
ಅಕ್ಷರ ಗಾತ್ರ

ಮೂಡಿಗೆರೆ: ಒಂದೆಡೆ ಹಣ್ಣಾಗಿ ಉದುರುತ್ತಿರುವ ಕಾಫಿ, ಮತ್ತೊಂದೆಡೆ ಮುಗ್ಗಲು ಬರುತ್ತಿರುವ ಪಲ್ಪರ್ ಮಾಡಿಸಿದ ಕಾಫಿ, ಮನೆತುಂಬಾ ಕಾಫಿ ಹರಡಿಕೊಂಡು ಹಗಲಿಡಿ ಫ್ಯಾನ್ ಗಾಳಿ ಹಾಯಿಸಿದರೂ ಪ್ರಯೋಜನವಾಗದ ಸ್ಥಿತಿ ಇದು ಮಲೆನಾಡಿನ ಕಾಫಿ ಬೆಳೆಗಾರರ ಪರಿಸ್ಥಿತಿ.

ಹದಿನೈದು ದಿನಗಳಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿರು ವುದರಿಂದ ಕಾಫಿ ಬೆಳೆಗಾರರ ಬದುಕು ಅಕ್ಷರಶಃ ನರಕಯಾತನೆಯಾಗಿದೆ. ಅಳಿದುಳಿದಿದ್ದ ಅರೇಬಿಕಾ ಕಾಫಿಯು ಗಿಡದಲ್ಲಿ ಸಂಪೂರ್ಣವಾಗಿ ಹಣ್ಣಾಗಿದ್ದರೂ ಬಿಸಿಲಿಲ್ಲದೇ ಕಟಾವು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಮಳೆ ಆಗುತ್ತಿರುವುದರಿಂದ ರೋಬಾಸ್ಟಾ ಕಾಫಿ ಕೂಡ ಹಣ್ಣಾಗ ತೊಡಗಿದ್ದು, ಬೆಳೆಗಾರರಿಗೆ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಕಟಾವು ಮಾಡಿರುವ ಬೆಳೆಗಾರರು ಕಾಫಿಯನ್ನು ಒಣಗಿಸಲು ಹರಸಾಹಸ ಪಡುತ್ತಿದ್ದು, ಮನೆಯೊಳಗೆ ಹರಡಿಕೊಂಡು ನೆರಳಿನಲ್ಲಿ ಒಣಗಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

‘ಈ ಬಾರಿ ಕಾಫಿ ಬೆಳೆಗಾರರ ಪರಿಸ್ಥಿತಿಯನ್ನು ಹೇಳಲು ಅಸಾಧ್ಯ ವಾಗಿದೆ. ಹಣ್ಣಾಗಿರುವ ಕಾಫಿಯ ಮೇಲೆ ಮಳೆ ಸುರಿಯುತ್ತಿದ್ದಂತೆ ಕಳಚಿ ಬೀಳತೊಡಗಿದ್ದು, ಕಾಫಿ ಗಿಡಗಳ ಬುಡದಲ್ಲಿ ರಾಶಿ ರಾಶಿ ಕಾಫಿ ಬಿದ್ದಿವೆ. ರೋಬಾಸ್ಟಾ ಕಾಫಿ ಕೂಡ ಹಣ್ಣಾಗತೊಡಗಿದ್ದು, ಕೊಯಿಲು ಮಾಡಿದರೆ ಒಣಗಿಸಲು ಜಾಗವಿಲ್ಲದಂತಾಗಿದೆ. ಹಸಿ ಕಾಫಿಯನ್ನು ಕೊಂಡುಕೊಳ್ಳಲಾಗುತ್ತದೆಯಾದರೂ, ಸೂಕ್ತ ಬೆಲೆ ಸಿಗುವುದಿಲ್ಲ. ಕಾಫಿಯನ್ನು ಸೂಕ್ತ ಬಿಸಿಲಿನಲ್ಲಿ ಒಣಗಿಸದಿದ್ದರೆ ಗುಣಮಟ್ಟವೂ ಸಿಗುವುದಿಲ್ಲ. ಅಡಿಕೆ ಫಸಲು ಕೂಡ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಈಗಾಗಲೇ ವಾಡಿಕೆ ಮಳೆ ಸುರಿದಾಗಿದೆ. ತೋಟದ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತದೆ’ ಎಂದು ಅಬಚೂರು ಗ್ರಾಮದ ಕಾಫಿ ಬೆಳೆಗಾರ ಮಯೂರ್ ಅಳಲು ತೋಡಿಕೊಂಡರು.

‘ಕಾಫಿ ತೋಟಗಳಲ್ಲಿ ಚರಂಡಿಗಳಲ್ಲಿ ಹರಿಯುವ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದೆ. ತಗ್ಗು ಪ್ರದೇಶದ ಕೆಲವು ತೋಟಗಳಲ್ಲಂತೂ ಜಲ ಮೇಲೇಳುತ್ತಿದೆ. ಇದು ಮುಂದಿನ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಾರಿಯಂತೂ ಶೇ 30 ರಷ್ಟು ಕೂಡ ಫಸಲು ಕೈ ಸೇರುವುದು ಕಷ್ಟವಾಗಿದೆ. ಮುಂದಿನ ವಾರವೂ ಮಳೆಯಾದರೆ ಕಾಫಿ ಬೆಳೆಗಾರರನ್ನು ದೇವರೇ ಕಾಪಾಡಬೇಕು’ ಎನ್ನುತ್ತಾರೆ ಬಡವನದಿಣ್ಣೆ ಲಕ್ಷ್ಮಣಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT