ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ಕ್ಷೇತ್ರ: ನಯನಾ ಮೋಟಮ್ಮಗೆ ಹತ್ತಾರು ಸವಾಲು

ಕಳಸದಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರ ಕಾರ್ಯಾರಂಭದ ಹೊಣೆಗಾರಿಕೆ
Published 15 ಮೇ 2023, 19:30 IST
Last Updated 15 ಮೇ 2023, 19:30 IST
ಅಕ್ಷರ ಗಾತ್ರ

ಕಳಸ: ಹೊಸ ಹುಮ್ಮಸ್ಸಿನಲ್ಲಿ ಇರುವ ನೂತನ ಶಾಸಕಿ ನಯನಾ ಮೋಟಮ್ಮ ಅವರಿಗೆ ಕಳಸ ತಾಲ್ಲೂಕಿನಲ್ಲಿ ಬಹುಮುಖಿ ಸಮಸ್ಯೆಗಳು ಮತ್ತು ಜನರ ಹತ್ತು ಹಲವು ಬೇಡಿಕೆಗಳು ಸವಾಲಾಗಿವೆ.

ಮೂಡಿಗೆರೆ ಕ್ಷೇತ್ರವು ಪಕ್ಕದ ಕ್ಷೇತ್ರಗಳಿಗೆ ಹೋಲಿಸಿದರೆ ದಶಕಗಳಿಂದಲೂ ತೀರಾ ಹಿಂದುಳಿದ ಪ್ರದೇಶವೇ ಆಗಿದೆ. ಅದರಲ್ಲೂ ಕಳಸ ತಾಲ್ಲೂಕಿನ ಅನೇಕ ಕುಗ್ರಾಮಗಳು ಈಗಲೂ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ರಸ್ತೆ, ಮನೆ, ಹಕ್ಕುಪತ್ರ, ನೀರಿನ ಸಮಸ್ಯೆಗಳು ಅನೇಕ ಗ್ರಾಮಗಲ್ಲಿ ಆಡಳಿತ ವಿರೋಧಿ ಭಾವನೆ ಮೂಡಿದ್ದರಿಂದಲೇ ನಯನಾ ಗೆಲುವು ಸಾಧಿಸಲು ಸಾಧ್ಯವಾಗಿದೆ. ಭರವಸೆ ನೀಡಿದಂತೆ ಅವರ ಬೇಡಿಕೆ ಈಡೇರಿಸುವ ಬಾಧ್ಯತೆ ಅವರ ಮೇಲಿದೆ.

ತಾಲ್ಲೂಕಿನ ಎಲ್ಲ ರಾಜ್ಯ ಹೆದ್ದಾರಿಗಳು ಗುಂಡಿಗಳಿಂದ ತುಂಬಿವೆ. ಕಳಸ-ಬಾಳೆಹೊಳೆ, ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಗಳು ತೀರಾ ಹದಗೆಟ್ಟಿವೆ. ಕಳಸ-ಕೊಟ್ಟಿಗೆಹಾರ ರಸ್ತೆಯ ಅಂಕುಡೊಂಕು ಸರಿಪಡಿಸಿದರೆ ಪ್ರವಾಸಿಗರ ಪಯಣ ಸುಗಮ ಆಗುತ್ತದೆ. ಕಳಸ ತಾಲ್ಲೂಕು ಕೇಂದ್ರವಾಗಿ 2 ವರ್ಷ ಕಳೆದರೂ ತಹಶೀಲ್ದಾರ್ ನೇಮಕ ಆಗಿದ್ದೇ ದೊಡ್ಡ ಸಾಧನೆ. ಕಳಸದಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರ ಕಾರ್ಯಾರಂಭ ಮಾಡುವ ಹೊಣೆಗಾರಿಕೆ ನಯನಾ ಅವರ ಮೇಲಿದೆ. ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳು ಕಾರ್ಯಾರಂಭ ಆಗದ ಹೊರತು ತಾಲ್ಲೂಕು ಕೇಂದ್ರ ಎಂಬ ಹಣೆಪಟ್ಟಿ ಯಾವ ಉಪಯೋಗಕ್ಕೂ ಅಲ್ಲ ಎಂದು ಭಾವನೆ ಜನರಲ್ಲಿ ಬಲವಾಗಿದೆ.

ಕಳಸದಲ್ಲಿ ನಾಮಕಾವಸ್ಥೆಗೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಿದೆ. ಪೂರ್ಣಕಾಲಿಕ ವೈದ್ಯರ ನೇಮಕ ಮಾಡಿ ಬಡ ರೋಗಿಗಳಿಗೆ ಆಸರೆ ಆಗಬೇಕು ಎಂಬ ಆಗ್ರಹ ಇದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಾಲೆಗಳು, ಕಾಲೇಜುಗಳಲ್ಲಿ ಶಿಕ್ಷಕರ, ಉಪನ್ಯಾಸಕರ ಹಾಗೂ ಮೂಲಸೌಲಭ್ಯದ ಕೊರತೆ ಇದೆ. ತಾಲ್ಲೂಕಿನಲ್ಲಿ ಅನೇಕ ಪಶುವೈದ್ಯ ಮತ್ತು ಸಿಬ್ಬಂದಿ ಕೊರತೆ ಇದೆ.

ತಾಲ್ಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ವಸತಿರಹಿತರ ದೊಡ್ಡ ಪಟ್ಟಿಯೇ ಇದೆ. 30 ವರ್ಷಗಳಿಂದ ಈ ವಸತಿರಹಿತರಿಗೆ ನಿವೇಶನ ವಿತರಣೆ ಮಾಡಿಲ್ಲ. ಅವರ ಸ್ವಂತ ಸೂರು ಹೊಂದುವ ಕನಸಿಗೆ ನೀರು ಎರೆಯುವ ತುರ್ತು ಅಗತ್ಯ ಇದೆ.
ಅತಿವೃಷ್ಟಿಯಿಂದ 4 ವರ್ಷಗಳ ಹಿಂದೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೂ ನಿವೇಶನದ ಹಕ್ಕುಪತ್ರ ಸಿಕ್ಕಿಲ್ಲ. ಈ ಸಂತ್ರಸ್ತರ ಕಣ್ಣೀರು ಒರೆಸುವ ಮಾನವೀಯ ಕೆಲಸವೂ ತುರ್ತಾಗಿ ಆಗಬೇಕಿದೆ ಎಂಬುದು ಸ್ಥಳೀಯರ ಒತ್ತಾಯ.

15 ವರ್ಷಗಳಿಂದ ಪಾಳು ಬಿದ್ದಿರುವ ಕುದುರೆಮುಖ ಪಟ್ಟಣದಲ್ಲಿ ಯಾವುದಾದರೂ ಶೈಕ್ಷಣಿಕ ಕೇಂದ್ರ, ಅರಣ್ಯ ಸಂಶೋಧನಾಲಯ ಅಥವಾ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನಡೆದರೆ ಆಸುಪಾಸಿನ ಜಾಂಬಳೆ, ನೆಲ್ಲಿಬೀಡು, ಸಿಂಗ್ಸಾರ್, ಬಿಳಗಲ್ ಮತ್ತಿತರ ಪ್ರದೇಶದ ನೂರಾರು ಕುಟುಂಬಗಳಿಗೆ ಉದ್ಯೋಗ, ಆದಾಯ ಸಿಗಲಿದೆ.

ಇನ್ನು ಫಾರಂ ನಂಬರ್ 50, 53 ಮತ್ತು 57ರ ಜೊತೆಗೆ 94 ಸಿ ಅಡಿ ಮನೆ ನಿವೇಶನ, ಕೃಷಿ ಭೂಮಿಗೆ ನೂರಾರು ಬಡವರು ಅರ್ಜಿ ಸಲ್ಲಿಸಿ ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಫಿ, ಅಡಿಕೆ, ಭತ್ತ, ಕಾಳುಮೆಣಸಿನ ಕೃಷಿ ಆರ್ಥಿಕತೆ ನಂಬಿದ ಕ್ಷೇತ್ರದಲ್ಲಿ ಹೊಸ ರೋಗಗಳ ನಿವಾರಣೆ, ನಿಯಂತ್ರಣ, ಆಧುನಿಕ ಕೃಷಿ ಪದ್ಧತಿ ಬಗ್ಗೆ ಸಮಗ್ರ ಮಾಹಿತಿ ಕೊರತೆ ಬೆಳೆಗಾರರಲ್ಲಿ ಇದೆ.

ಕಳಸ, ಸಂಸೆ, ಕುದುರೆಮುಖ, ಹೊರನಾಡು ಆಸುಪಾಸು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಇದೆ. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆ ಕೊಡುಗೆ ಶೂನ್ಯವೇ ಆಗಿದೆ. 900 ಕುಟುಂಬಗಳ ತಲೆ ಮೇಲಿನ ತೂಗುಗತ್ತಿ ಆಗಿರುವ ಇನಾಂ ಭೂಮಿ ಸಮಸ್ಯೆ, ಸಾವಿರಾರು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಹಕ್ಕು ಪತ್ರ ಸಮಸ್ಯೆ ನೀಗುವುದು ಕೂಡ ದೊಡ್ಡ ಸವಾಲೇ ಆಗಿದೆ. ತುಕ್ಕು ಹಿಡಿದ ತೂಗುಸೇತುವೆಗಳ ಬದಲಿಗೆ ಶಾಶ್ವತ ಸೇತುವೆ ನಿರ್ಮಾಣದ ಬೇಡಿಕೆಯೂ ಇದೆ.

ಉನ್ನತ ವ್ಯಾಸಂಗ ಮಾಡಿ ಕಾರ್ಪೊರೇಟ್ ಸಂಸ್ಥೆಯಲ್ಲಿ ದುಡಿದ ಅನುಭವ ಹೊಂದಿರುವ ನಯನಾ ಮೋಟಮ್ಮ ಅವರು ಕ್ಷೇತ್ರದಲ್ಲಿ ಹೇಗೆ ಕಾರ್ಯನಿರ್ವಹಣೆ ಮಾಡುತ್ತಾರೆ ಎಂಬ ಕುತೂಹಲ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT