ಗುರುವಾರ , ಆಗಸ್ಟ್ 18, 2022
24 °C
ಜಿಲ್ಲೆಯ ವಿವಿಧೆಡೆ ಮುಂದುವರಿದ ಮಳೆ– ಕೆಲವೆಡೆ ಗುಡ್ಡ ಕುಸಿತ

ಕಾಫಿನಾಡು: ಮಳೆಗೆ ಮತ್ತಷ್ಟು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನಾದ್ಯಂತ ಐದು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದ್ದು, ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟುಮಾಡಿದೆ.

ಶುಕ್ರವಾರ ಮಧ್ಯಾಹ್ನದ ಬಳಿಕ ಇಳಿಮುಖವಾಗಿದ್ದ ಮಳೆ, ತಡರಾತ್ರಿಯ ನಂತರ ಮತ್ತೆ ಆರ್ಭಟಿಸಿ ಧಾರಾಕಾರವಾಗಿ ಸುರಿಯಿತು.

ಶನಿವಾರ ಮಧ್ಯಾಹ್ನದವರೆಗೂ ಜಡಿ ಮಳೆ ಸುರಿದಿದ್ದು, ಮಧ್ಯಾಹ್ನದ ಬಳಿಕ ಅಲ್ಪ ಪ್ರಮಾಣದಲ್ಲಿ ಬಿಡುವು ನೀಡಿದ್ದು, ಬಿಟ್ಟು ಬಿಟ್ಟು ಸುರಿಯುತ್ತಿತ್ತು.

ಮಳೆಯಿಂದ ಹಲವಾರು ಮನೆಗಳು ಕುಸಿತವಾಗಿದ್ದು, ಇದುವರೆಗೂ 73ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಳೆ ಇಳಿಮುಖವಾಗಿದ್ದರೂ ಹಾನಿಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಶನಿವಾರ ನಸುಕಿನಲ್ಲಿ ಸುರಿದ ಬಿರುಸಾದ ಮಳೆಗೆ ಕುನ್ನಳ್ಳಿ, ಬಾನಳ್ಳಿ, ತ್ರಿಪುರ, ಬಾಪುನಗರ ಸೇರಿದಂತೆ ವಿವಿಧೆಡೆ ಮನೆಗಳು ನೆಲಕಚ್ಚಿವೆ.

ಮಳೆಯಿಂದ ಬಾಪುನಗರದ ರಂಗಮ್ಮ ಎಂಬುವವರ ಮನೆ ಸಂಪೂರ್ಣ ಹಾನಿಯಾಗಿದ್ದು, ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಹಾಗೂ ಶಿವಗಿರಿ ಸೇವಾ ತಂಡದ ಕಾರ್ಯಕರ್ತರು ಒಬ್ಬಂಟಿಯಾಗಿರುವ ರಂಗಮ್ಮನಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ನಿಡುವಾಳೆ– ಮರ್ಕಲ್ ರಸ್ತೆಗೆ ಮಳೆಯಿಂದ ಹಾನಿಯಾಗಿದ್ದು, ನೀರು ಹರಿದು ಹೋಗಲು ನಿರ್ಮಿಸಿದ್ದ ಮೋರಿಯು ಕೊಚ್ಚಿ ಹೋಗುವ ಹಂತಕ್ಕೆ ತಲುಪಿದ್ದು, ಮಳೆ ಹೆಚ್ಚಾದರೆ ನಿಡುವಾಳೆ– ಮರ್ಕಲ್ ರಸ್ತೆ ಸಂಪರ್ಕ ಕಡಿತವಾಗುವ ಆತಂಕ ಉಂಟಾಗಿದೆ.

ಹೇಮಾವತಿ ನದಿಗೆ ನಿರ್ಮಿಸಿರುವ ಮುಗ್ರಹಳ್ಳಿ ಹಳೆ ಸೇತುವೆಯ ಒಂದು ಭಾಗ ಸಂಪೂರ್ಣ ಹಾನಿಯಾಗಿದ್ದು, ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಸೇತುವೆ ಹಾಗೂ ರಸ್ತೆ ನಡುವೆ ಕಂದಕ ನಿರ್ಮಾಣವಾಗಿ ಸಂಪರ್ಕ ಕಡಿತವಾಗುವ ಭೀತಿ ಉಂಟಾಗಿದೆ.

ಮಳೆಯಿಂದ ಸಸಿಮಡಿಗಳಿಗೂ ಹಾನಿಯಾಗಿದ್ದು, ವಿವಿಧ ಭಾಗಗಳಲ್ಲಿ ಭತ್ತ ಹಾಕಿದ್ದ ಸಸಿಮಡಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ.

ಮೀನು ಶಿಕಾರಿ: ಮಳೆ ಇಳಿಮುಖವಾದ ಬೆನ್ನಲ್ಲೇ ಶನಿವಾರ ಮಧ್ಯಾಹ್ನದ ಬಳಿಕ ಬೆಟ್ಟದಮನೆ, ಕಿತ್ತಲೆಗಂಡಿ, ಮುಗ್ರಹಳ್ಳಿ ಮುಂತಾದ ಭಾಗಗಳಲ್ಲಿ ಗದ್ದೆ ಬಯಲಿನಲ್ಲಿ ಮೀನು ಶಿಕಾರಿ ಜೋರಾಗಿತ್ತು. ಧಾರಾಕಾರವಾಗಿ ಮಳೆ ಸುರಿದಾಗ ಮೀನುಗಳು ಗದ್ದೆಗೆ ಬರುವುದರಿಂದ, ನೀರು ಸಂಗ್ರಹವಾಗಿರುವ ಭತ್ತದ ಗದ್ದೆಗಳಲ್ಲಿ ಮೀನು ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಂದುವರಿದ ಮಳೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ಬಿಡುವು ನೀಡಿತ್ತು. ಸಂಜೆ 4 ಗಂಟೆ ವೇಳೆಗೆ ಭಾರಿ ಪ್ರಮಾಣದಲ್ಲಿ ಸ್ವಲ್ಪ ಹೊತ್ತು ಭಾರಿ ಮಳೆ ಸುರಿಯಿತು.

ಶುಕ್ರವಾರದಿಂದ ಶನಿವಾರ ಬೆಳಿಗ್ಗೆಯವರೆಗೆ ಎನ್.ಆರ್.ಪುರ 0.54 ಸೆಂ.ಮೀ. ಬಾಳೆಹೊನ್ನೂರು 1.16 ಸೆಂ.ಮೀ, ಮೇಗರಮಕ್ಕಿ ವ್ಯಾಪ್ತಿಯಲ್ಲಿ 1.8 ಸೆಂ.ಮೀ. ಮಳೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು