ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್‌ಕುಮಾರ್‌ ಕಟೀಲ್ ಮನೆತನದ ತರವಾಡಿನಲ್ಲಿ 8ರಿಂದ ಧರ್ಮ ನೇಮೋತ್ಸವ

ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ
Last Updated 3 ಏಪ್ರಿಲ್ 2021, 3:50 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್ ಅವರ ಮನೆತನವಾದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಇದೇ 8 ಮತ್ತು 9ರಂದು ಧರ್ಮ ನೇಮೋತ್ಸವವು ಕೋವಿಡ್‌ ಮಾರ್ಗಸೂಚಿಯೊಂದಿಗೆ ನಡೆಯಲಿದೆ’ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಡಬ ತಾಲ್ಲೂಕಿನ ಪಾಲ್ತಾಡಿಯ ತರವಾಡು ಮನೆತನದಲ್ಲಿ 60 ವರ್ಷಗಳ ಬಳಿಕ ಧರ್ಮ ನೇಮೋತ್ಸವ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 4 ದಿನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. 6ರಂದು ಮಾತ್ರ ಕಟೀಲು ಮೇಳದಿಂದ ಯಕ್ಷಗಾನ ಪ್ರದರ್ಶನ ಇರುತ್ತದೆ’ ಎಂದು ಹೇಳಿದರು.

‘ಧರ್ಮ ನೇಮಕ್ಕಾಗಿ ಚಪ್ಪರ ಮುಹೂರ್ತ ಈಗಾಗಲೇ ಮಾಡಿರುವ ಕಾರಣ ಇನ್ನೂ ಮುಂದೂಡಿಕೆ ಅಸಾಧ್ಯ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕವಾಗಿ ಧರ್ಮ ನೇಮೋತ್ಸವವನ್ನು ಮಾಡಲಾಗುವುದು’ ಎಂದು ತಿಳಿಸಿದರು.

ನಳಿನ್‌ಕುಮಾರ್‌ ಕಟೀಲ್ ಮಾತನಾಡಿ, ‘ಧರ್ಮ ನೇಮೋತ್ಸವ ಪ್ರತಿ 12 ವರ್ಷಕ್ಕೊಮ್ಮೆ ನಡೆಯಬೇಕಿತ್ತು. ನಾನಾ ಕಾರಣಗಳಿಂದ 60 ವರ್ಷ ನಡೆದಿರಲಿಲ್ಲ. ದೈವಜ್ಞರ ಸೂಚನೆಯಂತೆ ಈ ಬಾರಿ ಹಮ್ಮಿಕೊಳ್ಳಲಾಗಿದೆ. ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಮುಖ್ಯಮಂತ್ರಿ ಸೇರಿದಂತೆ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರಿಗೆ ಆಹ್ವಾನ ಪತ್ರ ನೀಡಲಾಗಿದೆ’ ಎಂದು ಹೇಳಿದರು.

‘ಧರ್ಮ ನೇಮೋತ್ಸವಕ್ಕಾಗಿ 150 ಎಕರೆ ಜಾಗದಲ್ಲಿ ಸಿದ್ಧತೆ ಮಾಡಲಾಗಿದೆ. ಸುಮಾರು 8,000 ವಾಹನಗಳಿಗೆ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಿಯೂ ಜನದಟ್ಟಣೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಮಾಸ್ಕ್‌ ತರದಿದ್ದರೆ ನಾವೇ ವಿತರಿಸುತ್ತೇವೆ. ಅಲ್ಲಲ್ಲಿ ಸ್ಯಾನಿಟೈಸರ್‌ ಇಡಲಾಗುತ್ತದೆ. ನಾಲ್ಕು ಕಡೆಗಳಲ್ಲಿ ದೇಹದ ಉಷ್ಣತೆ ತಪಾಸಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್‌ ಹೊಸ ಮಾರ್ಗಸೂಚಿ ಬಂದ ಬಳಿಕ ಆಮಂತ್ರಣ ಪತ್ರಿಕೆ ನೀಡುವ ಕೆಲಸ ನಿಲ್ಲಿಸಲಾಗಿದೆ’ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರು ಪಂಜ, ಗಿರಿಧರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT