ಬುಧವಾರ, ಜನವರಿ 19, 2022
18 °C
ನರೇಗಾ: ಹೊರ ಗುತ್ತಿಗೆ ಸಿಬ್ಬಂದಿ ಗೋಳು ಕೇಳುವರಿಲ್ಲ

ನರೇಗಾ: ಸಿಬ್ಬಂದಿಗೆ 6 ತಿಂಗಳಿನಿಂದ ಸಂಬಳ ಇಲ್ಲ

ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಮೇ ತಿಂಗಳಿನಿಂದ ಈವರೆಗೆ ಸಂಬಳ ಪಾವತಿಸಿಲ್ಲ. ಸಿಬ್ಬಂದಿ ಪರಿತಪಿಸುವಂತಾಗಿದೆ.
ನರೇಗಾ ಯೋಜನೆಯಲ್ಲಿ ಹೊರಗುತ್ತಿಗೆಯಡಿ 90 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ‘ಮಹಾಬಲೇಶ್ವರ ಎಂಟರ್‌ ಪ್ರೈಸಸ್’ ಸಂಸ್ಥೆಯ ಮೂಲಕ ಈ ಸಿಬ್ಬಂದಿ ಸಂಬಳ ಪಾವತಿಯಾಗುತ್ತಿತ್ತು. ಆರು ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ. ಸಂಬಂಧಪಟ್ಟವರೂ ಸಮಸ್ಯೆ ಪರಿಹಾರಕ್ಕೆ ಗಮನಹರಿಸಿಲ್ಲ.

‘ಸಂಬಳ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆದರೂ ಕ್ರಮವಹಿಸಿಲ್ಲ. ಪ್ರತಿಭಟನೆ ಮಾಡಿ ಧ್ವನಿ ಎತ್ತಿದರೆ ಕೆಲಸದಿಂದ ತೆಗೆಯುತ್ತಾರೆ ಎಂಬ ಭಯ. ನಮ್ಮ ಗೋಳು ಕೇಳುವರಿಲ್ಲ’ ಎಂದು ಸಿಬ್ಬಂದಿಯೊಬ್ಬರು ಕಣ್ಣೀರಿಟ್ಟರು.
ಕೋವಿಡ್‌ ತಲ್ಲಣ, ಲಾಕ್‌ ಡೌನ್‌ ಸಮಯದಲ್ಲಿಯೂ ಕೇತ್ರಮಟ್ಟದ ಸಿಬ್ಬಂದಿ ದುಡಿದಿದ್ದಾರೆ. ಕೆಲವರು ರಜೆ ಇಲ್ಲದೇ ದುಡಿದಿದ್ದಾರೆ.
ಮಹಾಬಲೇಶ್ವರ ಎಂಟರ್‌ ಪ್ರೈಸಸ್‌ನವರು ಸಿಬ್ಬಂದಿಯ ಇಪಿಎಫ್‌ ಮತ್ತು ಇಎಸ್‌ಐ ಸರಿಯಾಗಿ ಪಾವತಿ ಮಾಡಿಲ್ಲ. ಈ ಸಿಬ್ಬಂದಿ ಸಂಬಳ ಪಾವತಿಗೆ ಸಂಬಂಧಿಸಿದ ‘end2end’ ತಂತ್ರಾಂಶದಲ್ಲಿ ಸಮಸ್ಯೆಯಾಗಿದೆ. ಹೀಗಾಗಿ, ಸಂಬಳ ಪಾವತಿಯಾಗಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.
ತಂತ್ರಾಂಶ ಬಿಟ್ಟು ಆರ್‌ಟಿಜಿಎಸ್‌ ಮೂಲಕ ಪಗಾರ ಪಾವತಿಸುವಂತೆ ಸೂಚನೆ ನೀಡಿದ್ದರೂ ‘ಮಹಾಬಲೇಶ್ವರ ಎಂಟರ್‌ ಪ್ರೈಸಸ್’ ಸಂಸ್ಥೆ ಕ್ರಮ ವಹಿಸಿಲ್ಲ. ಸಮಸ್ಯೆ ಹಾಗೆಯೇ ಉಳಿದಿದೆ.
‘ಸಾಲಸೋಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಅಂಗಡಿಗಳಲ್ಲಿ ದಿನಸಿ ಸಾಲ ತಂದಿದ್ದೇವೆ. ಕಡ ಕೊಟ್ಟವರ ಕಣ್ಣು ತಪ್ಪಿಸಿ ಓಡಾಡಬೇಕಾಗಿದೆ’ ಎಂದು ಸಿಬ್ಬಂದಿಯೊಬ್ಬರು ಗೋಳು ತೋಡಿಕೊಂಡರು.

‘ಪಕ್ಕದ ಜಿಲ್ಲೆ ಸಂಸ್ಥೆಗೆ ಸಂಬಳ ಪಾವತಿ ಹೊಣೆ ವಹಿಸಲು ಚರ್ಚೆ’

ಚೆನ್ನಾಗಿ ನಿರ್ವಹಿಸುತ್ತಿರುವ ಪಕ್ಕದ ಜಿಲ್ಲೆಯ ಸಂಸ್ಥೆಗೆ ಈ ಜಿಲ್ಲೆಯ ನರೇಗಾ ಹೊರಗುತ್ತಿಗೆ ಸಿಬ್ಬಂದಿಯ ಸಂಬಳ ಪಾವತಿ ಜವಾಬ್ದಾರಿಯನ್ನು ವಹಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಸಿಬ್ಬಂದಿಗೆ ಸಂಬಳ ಪಾವತಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಹಾಬಲೇಶ್ವರ ಸಂಸ್ಥೆಯ ಸಿಬ್ಬಂದಿಯ ಇಪಿಎಫ್‌, ಇಎಸ್‌ಐ ಕಟ್ಟಿರಲಿಲ್ಲ. ಸಂಸ್ಥೆಗೆ ಷೋಕಾಸ್‌ ನೋಟಿಸ್‌ ನೀಡಿ, ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಮಹಾಬಲೇಶ್ವರ ಸಂಸ್ಥೆಯು ಐದು ಜಿಲ್ಲಾ ಪಂಚಾಯಿತಿಗಳ ಟೆಂಡರ್‌ ಪಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಈ ಸಂಸ್ಥೆ ತಗಾದೆ ಮಾಡಿಕೊಂಡಿದೆ. ಸಂಸ್ಥೆಗೆ ಸಿಬ್ಬಂದಿ ಸಂಬಳದ ಬಿಲ್‌ ಪಾವತಿಸದೆ ಸರ್ಕಾರಕ್ಕೇ ಕಟ್ಟುವಂತೆ ಸೂಚನೆ ಬಂದಿತ್ತು. ಸಿಬ್ಬಂದಿ ಸಂಬಳ ಬಾಕಿ ಬಗ್ಗೆ ಸರ್ಕಾರ ಮಾಹಿತಿ ಪಡೆದುಕೊಂಡಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.