ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲೆ: ಗುಡ್ಡದಲ್ಲಿ ಮಣ್ಣು ಜರುಗಿ ಕಂಪನ– ಜಿಲ್ಲಾಧಿಕಾರಿ

Last Updated 25 ಆಗಸ್ಟ್ 2018, 15:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಗುಡ್ಡಗಳಲ್ಲಿನ ಮಣ್ಣು ಜರುಗಿ ಕೊಪ್ಪ ಭಾಗದ ಕೆಲವು ಕಡೆ ಶಬ್ಧ ಕೇಳಿಸಿದೆ. ಭೂಕಂಪ ಸಂಭವಿಸುವ ಸೂಚನೆ ಇಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊಪ್ಪ ತಾಲ್ಲೂಕಿನ ಕೊಗ್ರೆ, ಭೈರಾಪುರ ದೇವರಗುಡ್ಡ, ಗುಡ್ಡೆ ತೋಟ ಭಾಗಗಳಲ್ಲಿ ತಜ್ಞರು ಪರಿಶೀಲನೆ ಮಾಡಿದ್ದಾರೆ. ಗುಡ್ಡಪ್ರದೇಶಗಳ ನಿರ್ವಾತಕ್ಕೆ ಮಣ್ಣು ಜರುಗಿದಾಗ ನಡುಗಿದ ಅನುಭವ ಆಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಭೂಕಂಪನದ ಸೂಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ತಿಳಿಸಿದರು.

‘ರಿಕ್ಟರ್‌ ಮಾಪಕಗಳನ್ನು ಇಟ್ಟು ಪರಿಶೀಲನೆ ಮಾಡಲಾಗಿದೆ. ಭೂಕಂಪ ಸಂಭವಿಸುವ ಸಾಧ್ಯತೆ ಗೋ‌ಚರಿಸಿಲ್ಲ ಎಂದು ಗೌರಿಬಿದನೂರಿನ ಭೂಕಂಪನ ಕೇಂದ್ರದವರೂ ಮಾಹಿತಿ ನೀಡಿದ್ದಾರೆ. ಶಾಸಕರು, ಅಧಿಕಾರಿಗಳೊಂದಿಗೆ ಈ ಪ್ರದೇಶಗಳನ್ನು ಪರಿಶೀಲನೆ ಮಾಡಿದ್ದೇನೆ’ ಎಂದು ಹೇಳಿದರು.

‘ಒಂದೆರಡು ಕಡೆ ಗುಹೆ, ಗವಿಗಳಾಗಿವೆ. ಶಬ್ಧ ಕೇಳಿರುವ ಬಗ್ಗೆ ಜನರು ಹೇಳಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ತಜ್ಞರೂ ಸ್ಥಳವನ್ನು ಪರಿಶೀಲಿಸಿದ್ದಾರೆ. ಕೆಲ ಮನೆಗಳ ಗೋಡೆಗಳಲ್ಲಿ ಬಿರುಕುಗಳಾಗಿವೆ. ತೋಟಗಳಲ್ಲಿ ಕೆಲವು ಕಡೆ ಒಂದೆರಡು ಅಡಿ ಕೆಳಕ್ಕೆ ಮಣ್ಣು ಕುಸಿದಿದೆ’ ಎಂದರು.

ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಯುತ್ತಿದೆ. ಪರಿಹಾರ ನಿಟ್ಟಿನಲ್ಲಿ ಈಗ ₹ 95 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಕಾಫಿ, ಕಾಳು ಮೆಣಸು ಹಾನಿ ಸಮೀಕ್ಷೆ ನಿಟ್ಟಿನಲ್ಲಿ ತಂಡಗಳನ್ನು ರಚಿಸಲಾಗಿದೆ. ಸಮೀಕ್ಷೆಗೆ ಕಾಫಿ ಮಂಡಳಿಯವರು, ಕಂದಾಯ, ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳ ತಂಡ ರಚಿಸಲಾಗಿದೆ. ಕಾಫಿ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಮಂಡಳಿಯವರು ಈಗಾಗಲೇ ಮಧ್ಯಂತರ ವರದಿಯೊಂದನ್ನು ಸಲ್ಲಿಸಿದ್ದಾರೆ. ಪ್ರದೇಶವಾರು ಹಾನಿಯ ಅಂದಾಜು ಮಾಹಿತಿ ವರದಿಯಲ್ಲಿ ಇದೆ. ಹಾನಿಯ ಕರಾರುವಕ್ಕು ಮಾಹಿತಿ ಇಲ್ಲ. ವಿವರವಾದ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಕೆಲವು ಕಡೆ ಹೆಚ್ಚು ಹಾನಿಯಾಗಿದೆ. ಮತ್ತೆ ಕೆಲವು ಕಡೆ ಹಾನಿ ಪ್ರಮಾಣ ಕಡಿಮೆ ಇದೆ. ಅಡಿಕೆಗೆ ಕೊಳೆ ರೋಗ ತಗುಲಿದೆ. ಇದೆಲ್ಲದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

‘ಜಿಲ್ಲೆಯಲ್ಲಿ ಹೊಸಾದ ಯಾವುದೇ ಹೋಮ್‌ಸ್ಟೇ, ರೆಸಾರ್ಟ್‌ಗಳಿಗೆ ಅನುಮತಿ ನೀಡುತ್ತಿಲ್ಲ. ಈ ಹಿಂದೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ್ದವರು ಲೈಸೆನ್ಸ್‌ ಪಡೆದುಕೊಂಡಿದ್ದಾರೆ. ಹೊಸದಾಗಿ ಕೊಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT