ಮುಂಗಾರಿನ ಮುನಿಸು, ರೈತರಿಗಿಲ್ಲ ಸೊಗಸು

7
ಮತ್ತೆ ‘ಕಣ್ಣು ಮುಚ್ಚಾಲೆ’ ಆಟ ಶುರುವಿಟ್ಟುಕೊಂಡ ವರುಣ, ಭೂಮಿ ಹದಗೊಳಿಸಿ ಬಿತ್ತನೆ ಮಾಡಲಾಗದೆ ಅನ್ನದಾತರು ಕಂಗಾಲು

ಮುಂಗಾರಿನ ಮುನಿಸು, ರೈತರಿಗಿಲ್ಲ ಸೊಗಸು

Published:
Updated:
Deccan Herald

ಚಿಕ್ಕಬಳ್ಳಾಪುರ: ಬರಗಾಲ ಬೆನ್ನಿಗೆ ಬಿದ್ದ ‘ಕಾಯಂ’ ಅತಿಥಿಯಂತಾಗಿರುವ ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರಿನ ಮುನಿಸಿನಿಂದಾಗಿ ರೈತರ ಲೆಕ್ಕಾಚಾರಗಳೆಲ್ಲ ಮತ್ತೆ ತಲೆಕೆಳಗಾಗಿವೆ. ವರುಣನ ‘ಜೂಜಾಟ’ದಿಂದಾಗಿ ಮುಂಗಾರು ಆರಂಭಗೊಂಡ ಎರಡು ತಿಂಗಳು ಕಳೆಯುತ್ತ ಬಂದರೂ ಬಿತ್ತನೆ ಶೇ 50ರಷ್ಟು ಆಗಿಲ್ಲ.

ಮುಂಗಾರಿನ ಹೊಸ್ತಿಲಲ್ಲಿ ಆರ್ಭಟಿಸಿ ಮೇ ಮತ್ತು ಜೂನ್ ಮೊದಲ ವಾರದ ವರೆಗೆ ಚೆನ್ನಾಗಿ ಸುರಿದ ಮಳೆ ಬಳಿಕ ಇಲ್ಲಿಯವರೆಗೆ ‘ಕಣ್ಣು ಮುಚ್ಚಾಲೆ’ ಆಟ ಮುಂದುವರಿಸಿಕೊಂಡು ಬಂದಿದೆ. ಬಿತ್ತನೆಗೆ ಭೂಮಿ ಹದಗೊಳಿಸಲು ರೈತರಲ್ಲಿ ಹುರುಪು ತಂದ ಮಳೆ, ಬಿತ್ತನೆ ಸಮಯಕ್ಕೆ ಎಂದಿನಂತೆ ‘ಅಪರೂಪ’ವಾಗುತ್ತಿರುವ ಪರಿಣಾಮ, ಬರೀ ಶೇ38 ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ 50 ಅಧಿಕ ಬಿತ್ತನೆಯಾಗಿತ್ತು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಇದರಲ್ಲಿ ಹೈಬ್ರಿಡ್ ಮುಸುಕಿನ ಜೋಳ (27,821 ಹೆಕ್ಟೇರ್) ಹೆಚ್ಚಿನ ಪ್ರಮಾಣದಲ್ಲಿದೆ. ನಂತರದ ಸ್ಥಾನದಲ್ಲಿ ನೆಲಗಡಲೆ (14,452 ಹೆಕ್ಟೇರ್) ಬಿತ್ತನೆಯಾಗಿದೆ. ರಾಗಿ 6,659, ತೊಗರಿ 6,439 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿವೆ. ತಾಲ್ಲೂಕುವಾರು ಬಿತ್ತನೆ ಪ್ರದೇಶ ಅವಲೋಕಿಸಿದಾಗ ಗುಡಿಬಂಡೆ ಮೊದಲು, ಶಿಡ್ಲಘಟ್ಟ ಕೊನೆಯ ಸ್ಥಾನದಲ್ಲಿವೆ.

ಶೇ 53 ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಗಣನೀಯ ಪ್ರಮಾಣದಲ್ಲಿ ಬಿತ್ತನೆ ಪ್ರದೇಶ ಕುಸಿದಿದೆ. ಸದ್ಯ ನೆಲಗಡಲೆ, ತೊಗರಿ ಬಿತ್ತನೆಯ ಅವಧಿ ಕೊನೆಗೊಂಡಿದೆ. ಇದೀಗ ಆಗಸ್ಟ್‌ನಲ್ಲಿ ರಾಗಿ, ಮುಸುಕಿನ ಜೋಳ, ಅವರೆ ಮತ್ತು ಸೆಪ್ಟೆಂಬರ್‌ನಲ್ಲಿ ಹುರುಳಿ ಬಿತ್ತನೆ ಮಾಡಲು ಅವಕಾಶವಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ರಸಗೊಬ್ಬರಕ್ಕೆ ಕೂಡ ಕೊರತೆ ಇಲ್ಲ. ಮಳೆ ಬರುತ್ತಿದ್ದಂತೆ ರೈತರು ಬಿತ್ತನೆ ಮಾಡಬೇಕು. ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡ ರೈತರು ಅವುಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ಕೆಲಸ ಮಾಡಬೇಕು. ಬೆಳೆ ಸಂದಿಗ್ಧ ಹಂತದಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ಆ ನೀರನ್ನು ಬೆಳೆಗಳಿಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ಕಳೆದ ಆರೇಳು ವರ್ಷಗಳಿಂದ ಸತತ ಮಳೆ ‘ಆಟ’ಕ್ಕೆ ಸೋತು ಹೋಗಿರುವ ಜಿಲ್ಲೆಯ ರೈತರು ಈ ಬಾರಿಯಾದರೂ ‘ಬರ’ ನೀಗಿತೆಂಬ ಆಸೆಯೊಂದಿಗೆ ಚಾತಕ ಪಕ್ಷಿಗಳಂತೆ ಮುಂಗಾರು ಎದುರು ನೋಡುತ್ತಿದ್ದರು. ಇದೀಗ ಅದು ಕೂಡ ತನ್ನ ಮುನಿಸು ತೋರಿಸಿದ್ದು, ರೈತರಿಗೆ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಸದ್ಯ ಆಕಾಶದತ್ತ ದೃಷ್ಟಿ ನೆಟ್ಟಿರುವ ರೈತರು ನಾಳೆಗಾದರೂ ಮಳೆ ಸುರಿದರೆ ಸಾಕು ಎಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಕುಸಿತ ಕಂಡ ನೆಲಗಡಲೆ ಬಿತ್ತನೆ

ಜಿಲ್ಲೆಯಲ್ಲಿ ಮಳೆಯ ಕಣ್ಮುಚ್ಚಾಲೆ ಆಟಕ್ಕೆ ಬೇಸತ್ತು ರೈತರು ನೆಲಗಡಲೆಯಿಂದ ವಿಮುಖರಾಗಿ, ಮುಸುಕಿನ ಜೋಳದತ್ತ ಒಲುವು ತೋರುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಈ ವರ್ಷ ಶೇ 44 ರಷ್ಟು ಪ್ರದೇಶದಲ್ಲಿ ಮಾತ್ರ ನೆಲಗಡಲೆ ಬಿತ್ತನೆಯಾಗಿದೆ. 
ನೆಲಗಡಲೆ ಕಾಯಿ ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟರೆ ನಷ್ಟ ಅನುಭವಿಸಬೇಕಾಗುತ್ತದೆ. ಅದೇ ಮುಸುಕಿನ ಜೋಳ ಬೆಳೆದರೆ ಬೆಳೆಯ ಜತೆಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ನೆಲಗಡಲೆ ಬಿತ್ತನೆಗೆ ಮುಂದಾಗುತ್ತಿಲ್ಲ.
ವಿಶೇಷವಾಗಿ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ರೈತರು ನೆಲಗಡಲೆ ಬೆಳೆ ಕಡಿಮೆ ಮಾಡುತ್ತಿದ್ದಾರೆ. ಪರಿಣಾಮ 32,750 ಹೆಕ್ಟೇರ್ ನೆಲಗಡಲೆ ಬಿತ್ತನೆ ಪ್ರದೇಶದ ಪೈಕಿ ಈ ಬಾರಿ 14,452 ಹೆಕ್ಟೇರ್ ಬಿತ್ತನೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಿಡ್ಲಘಟ್ಟದಲ್ಲಿ ಶೇ 13 ರಷ್ಟು ಬಿತ್ತನೆ

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಈ ವರ್ಷ ಶಿಡ್ಲಘಟ್ಟದಲ್ಲಿ ಬಿತ್ತನೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ತಾಲ್ಲೂಕಿನಲ್ಲಿ 17,273 ಹೆಕ್ಟೇರ್‌ ಬಿತ್ತನೆ ಪ್ರದೇಶವಿದೆ. ಆ ಪೈಕಿ ಈವರೆಗೆ ಕೇವಲ 2,211 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ರೈತರು ಬಿತ್ತನೆ ಮಾಡಿದ್ದಾರೆ. ಈ ಬಾರಿ ತಾಲ್ಲೂಕಿನ ರೈತಾಪಿ ವರ್ಗದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಆತಂಕದ ಛಾಯೆ ಮನೆ ಮಾಡಿದೆ.

ಆರಂಭದಲ್ಲಿ ಬಿತ್ತನೆಯಾದ ಬೆಳೆಗಳ ಬೆಳವಣಿಗೆಗೆ ಸದ್ಯ ಮಳೆ ತುಂಬಾ ಅಗತ್ಯವಿದೆ. ಆದರೆ ಇನ್ನೂ ಒಂದು ವಾರ ಮಳೆಯಾಗುವುದಿಲ್ಲ ಎಂಬ ಮುನ್ಸೂಚನೆ ಇದೆ.
- ಮಲ್ಲಿಕಾರ್ಜುನ, ಕೃಷಿ ಇಲಾಖೆ ಜಂಟಿ ನಿರ್ದೇಶಕ

1.54 - ಲಕ್ಷ ಹೆಕ್ಟೇರ್‌ ಜಿಲ್ಲೆಯಲ್ಲಿ ಬಿತ್ತನೆ ಗುರಿ
 58,528 -  ಹೆಕ್ಟೇರ್‌ ಬಿತ್ತನೆಯಾಗಿರುವ ಪ್ರದೇಶ
70.4 ಮಿ.ಮೀ  - ಜಿಲ್ಲೆಯಲ್ಲಿ ಜುಲೈ 26ರ ವರೆಗೆ ಸುರಿಯಬೇಕಿದ್ದ ವಾಡಿಕೆ ಮಳೆ
33ಮಿ.ಮೀ - ಸುರಿದಿರುವ ಮಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !