ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರ ಬಿಸಿಯೂಟದ ಅನುದಾನ ಹೆಚ್ಚಿಸಲಿ’

ಗ್ರಾಮ ಸಭೆ ಹಾಗೂ ಪೋಷಕರ ಸಭೆ
Last Updated 8 ಫೆಬ್ರುವರಿ 2023, 7:17 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸರ್ಕಾರ ಮಕ್ಕಳ ಬಿಸಿಯೂಟಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಆಗ್ರಹಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಪ್ರಾಥಮಿಕ ಶಾಲೆಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆ ಹಾಗೂ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಬಿಸಿಯೂಟಕ್ಕೆ ನೀಡುತ್ತಿರುವ ಅನುದಾನ ಬಹಳಷ್ಟು ಕಡಿಮೆಯಿದೆ. ಶಾಲಾ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ನೀಡಬೇಕು. ವಿವಿಧ ರೀತಿಯ ಅಡುಗೆ ತಯಾರಿಸಲು ಅನುಕೂಲವಾಗುವಂತೆ ಅಡುಗೆಯವರಿಗೆ ತರಬೇತಿ ನೀಡಬೇಕು. ಬಿಸಿಯೂಟ ಅಡುಗೆಯವರ ಸಂಬಳ ಹೆಚ್ಚಿಸಬೇಕು. ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಅದನ್ನು ಬಿಸಿಯೂಟಕ್ಕೆ ಬಳಸಿದರೆ ಮಕ್ಕಳ ಆರೋಗ್ಯವೂ ವೃದ್ಧಿಸುತ್ತದೆ, ರೈತರು ಬೆಳೆದ ಭತ್ತಕ್ಕೂ ಬೆಲೆ ಬರುತ್ತದೆ ಎಂದರು.

ತಾಲ್ಲೂಕು ಸಾಮಾಜಿಕ ಪರಿಶೋಧಕ ಸಂಯೋಜಕಿ ರಶ್ಮಿತಾ ಮಾತನಾಡಿ, ‘ಬಿಸಿಯೂಟದ ಬಗ್ಗೆ ಅಧ್ಯಯನ ಮಾಡಿ ಊಟದ ವ್ಯವಸ್ಥೆಯಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ಬಗ್ಗೆ ಮಕ್ಕಳ ಹಾಗೂ ಪೋಷಕರ ಸಲಹೆ ಪಡೆಯಲಾಗುವುದು. ಈ ಸಲಹೆಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ಪೋಷಕ ಪುರುಷೋತ್ತಮ ಮಾತನಾಡಿ, ‘ವಾರದ ಏಳು ದಿನಗಳಲ್ಲಿ ಒಂದು ದಿನ ಊಟ, ಇನ್ನೊಂದು ದಿನ ತಿಂಡಿ ನೀಡಿದರೆ ಅನುಕೂಲವಾಗುತ್ತದೆ. ಬಾಳೆಹಣ್ಣು, ಮೊಟ್ಟೆ ಬದಲಿಗೆ ಕಾಳುಗಳನ್ನು ಮೊಳಕೆ ಬರಿಸಿ ನೀಡಿದರೆ ಒಳ್ಳೆಯದು. ಗೋದಾಮುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಕೆ.ಎ.ಅಬೂಬಕರ್ ಮಾತನಾಡಿ, ‘ಬಿಸಿಯೂಟಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ನೀಡಬೇಕು. ತರಕಾರಿಗೆ ಹೆಚ್ಚು ಅನುದಾನ ನೀಡಬೇಕು, ಅಡುಗೆಯವರ ಸಂಬಳ ಹೆಚ್ಚಿಸಬೇಕು’ ಎಂದರು.

ಸದಸ್ಯ ಅರುಣ್ ಕುಮಾರ್ ಜೈನ್ ಮಾತನಾಡಿ, ‘ಮಕ್ಕಳಿಗೆ ಊಟ ಮಾಡಲು ಜಾಗದ ವ್ಯವಸ್ಥೆ ಸರಿಯಿಲ್ಲ. ಸಮೀಪದಲ್ಲಿಯೇ ಶೌಚಾಲಯವಿದೆ. ಹೊಸ ಶೌಚಾಲಯ ನಿರ್ಮಿಸಲು ಸರ್ಕಾರ ಅನುದಾನ ನೀಡಬೇಕು’ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನೀಷ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಉದಯಕುಮಾರ್, ಸಲೀಂ, ಶಕುಂತಳಾ, ದೇವೇಂದ್ರ, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ, ಶಿಕ್ಷಕರಾದ ರಾಮನಾಯ್ಕ, ಚಂದ್ರಶೇಖರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT