ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲಸ್ನೇಹಿ ಮತಗಟ್ಟೆ ಸ್ಥಾಪನೆ: ಡಾ.ರಾಜೇಂದ್ರ

ಮತದಾನ ಮಹತ್ವ, ನೈತಿಕ ಮತದಾನದ ಕುರಿತು ವಿಶೇಷ ಕಾರ್ಯಗಾರ
Last Updated 8 ಮಾರ್ಚ್ 2018, 11:24 IST
ಅಕ್ಷರ ಗಾತ್ರ

ಬಳ್ಳಾರಿ: ‘ಅಂಗವಿಕಲರು ಸುಗಮವಾಗಿ ಬಂದು ಮತದಾನ ಮಾಡಲು ಅನುಕೂಲಕರವಾದ ರೀತಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಗ್ರಾಮೀಣ ಪುನರ್ವಸತಿ ಹಾಗೂ ಬಹು ಪುನರ್ವಸತಿ ಕಾರ್ಯಕರ್ತರು, ಅಂಗವಿಕಲರ ಕಲ್ಯಾಣಾಧಿಕಾರಿ ಹಾಗೂ ಅವರ ಕಚೇರಿಯ ಸಿಬ್ಬಂದಿಗೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಮತಗಟ್ಟೆಗಳಲ್ಲಿ ಸ್ವಯಂಸೇವಕರ ನಿಯೋಜನೆ, ರ್‌್ಯಾಂಪ್‌ಗಳ ನಿರ್ಮಾಣ ಸೇರಿದಂತೆ ಅಂಗವಿಕಲರಿಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸಲು ಎಲ್ಲರೂ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು’ ಎಂದು ಸ್ಪಷ್ಟಪಡಿಸಿದರು.

‘ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾರರ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಅಂಗವಿಕರಲನ್ನು ಉತ್ತೇಜಿಸುವುದು ಅದರಲ್ಲಿ ಮುಖ್ಯವಾದುದು’ ಎಂದು ಸಮಿತಿ ಅಧ್ಯಕ್ಷರೂ ಆಗಿರುವ ಅವರು ಹೇಳಿದರು.

‘ಕಾರ್ಯಕರ್ತರು ಮತಗಟ್ಟೆಗಳನ್ನು ದುರಸ್ತಿಯಾಗಿರುವುದನ್ನು ಪರಿಶೀಲಿಸಬೇಕು. ಅಲ್ಲಿ ಅಂಗವಿಕಲರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿ ದೆಯೇ ಎಂಬುದನ್ನು ವಿಶೇಷವಾಗಿ ಗಮನಿಸಿ ವರದಿ ಕೊಡಬೇಕು’ ಎಂದರು.

18,612 ಅಂಗವಿಕಲರು: ’ಜಿಲ್ಲೆಯಲ್ಲಿ 18,612 ಅಂಗವಿಕಲ ಮತದಾರರನ್ನು ಮತ್ತು ಅವರು ಮತದಾನ ಮಾಡುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಉಳಿದವರನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ಕಾರ್ಯಕರ್ತರು ಪ್ರತಿಯೊಬ್ಬ ಅರ್ಹ ಅಂಗವಿಕಲರಿಗೆ ಮತದಾನದ ಗುರುತಿನ ಚೀಟಿ ದೊರಕಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿವರಿಸಿರು.

‘ಬುದ್ಧಿಮಾಂದ್ಯರಿಗೂ ವಿಶೇಷ ಸೌಲಭ್ಯ ಕಲ್ಪಿಸಿ ಅವರಿಗೂ ಮತದಾನದ ಅವಕಾಶ ನೀಡಲಾಗುವುದು’ ಎಂದು ಇದೇ ಸಂದರ್ಭದಲ್ಲಿ ಅವರು ಅಂಗವಿಕಲರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಶೌಚಾಲಯವಿಲ್ಲದ ಅಂಗವಿಕಲರ ಕುಟುಂಬಗಳ ಮಾಹಿತಿ ನೀಡಿದರೆ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿಯ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದರು.

ಪಿಂಕ್‌ ಮತಗಟ್ಟೆ: ‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವ ಮತಗಟ್ಟೆಗಳಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ನೇಮಿಸಿ ಪಿಂಕ್ ಮತಗಟ್ಟೆಯನ್ನಾಗಿ ಬದಲಾಯಿಸಲಾಗುವುದು’ ಎಂದು ರಾಜೇಂದ್ರ ತಿಳಿಸಿದರು.

‘ಅಂಗವಿಕಲರು ಇರುವ ಮತಗಟ್ಟೆಗಳ ವಿಶೇಷ ಅಧಿಕಾರವನ್ನು ಅವರಿಗೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲರು ಮತದಾನ ಮಾಡಲು ಸ್ಫೂರ್ತಿಯಾಗುವಂತೆ ಮಾಡಲಾಗುವುದು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ್ ಬಿಲ್ವಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್‌ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

**

ಮತದಾರರ ಪಟ್ಟಿಗೆ ಅತಿ ಹೆಚ್ಚು ಅಂಗವಿಕಲ ಮತದಾರರನ್ನು ನೋಂದಾಯಿಸುವ ಹತ್ತು ಕಾರ್ಯಕರ್ತರಿಗೆ ಬಹುಮಾನ ವಿತರಿಸಲಾಗುವುದು
–ಡಾ.ಕೆ.ವಿ.ರಾಜೇಂದ್ರ, ಜಿ.ಪಂ ಸಿ.ಇ.ಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT