ಶುಕ್ರವಾರ, ಏಪ್ರಿಲ್ 16, 2021
23 °C
ಕಸ್ತೂರಿ ರರಂಗನ್ ವರದಿಗೆ ವಿರೋಧ

ಬಿದರಹಳ್ಳಿ: ನಾಮಪತ್ರ ಹಿಂಪಡೆದು ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಸೋಮವಾರ ನಾಮಪತ್ರಗಳನ್ನು ಹಿಂಪಡೆದು, ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಚುನಾವಣೆ ಬಹಿಷ್ಕರಿಸುವ ಕುರಿತು ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಬೆಳೆಗಾರರ ಸಂಘ ಹಾಗೂ ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಮಾತನಾಡಿ, ‘ನಮಗೆ ಚುನಾವಣೆಗಿಂತಲೂ ಬದುಕೇ ಮುಖ್ಯ. ಕಸ್ತೂರಿರಂಗನ್ ವರದಿಯಿಂದ ಬದುಕೇ ನಾಶವಾಗುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆಯಿದೆ. ಬಿದರಹಳ್ಳಿ ಗ್ರಾಮ ಪಂಚಾಯಿತಿಯ 10 ಸ್ಥಾನಕ್ಕೆ 28 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರೂ ನಾಮಪತ್ರ ವಾಪಸು ಪಡೆದು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಬೇಕಿದೆ. ಇಂದೇ ನಾಮಪತ್ರ ವಾಪಸ್‌ ಪಡೆಯುವ ಅರ್ಜಿಗೆ ಸಹಿ ಮಾಡಿ ಆಯಾ ಪಕ್ಷಗಳ ಮುಖಂಡರ ಕೈಗೆ ನೀಡಬೇಕು. ಸೋಮವಾರ ನಾಮಪತ್ರ ಹಿಂಪಡೆಯಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಸಭೆಯಲ್ಲಿದ್ದ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಒಪ್ಪಿಗೆ ಸೂಚಿಸಿ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಭೆಯಲ್ಲಿಯೇ ಸಹಿ ಮಾಡಿ, ಆಯಾ ಬೆಂಬಲಿತ ಪಕ್ಷಗಳ ಮುಖಂಡರಿಗೆ ನಾಮಪತ್ರ ಹಿಂಪಡೆಯುವ ಅರ್ಜಿ ನೀಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎನ್.ಜಯಂತ್, ತಾಲ್ಲೂಕು ಬೆಳೆಗಾರ ಸಂಘದ ಕಾರ್ಯದರ್ಶಿ ಮನೋಹರ್, ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಜಯಪಾಲ್, ಉಪಾಧ್ಯಕ್ಷ ಮಂಜುನಾಥ್, ವಿವಿಧ ಪಕ್ಷಗಳ ಮುಖಂಡರಾದ ಮನೋಜ್ ಹಳೆಕೋಟೆ, ಚಂದ್ರೇಗೌಡ, ಬಿ.ಎಲ್.ಲೋಹಿತ್, ಕೆಂಜಿಗೆ ಕೇಶವ, ಬಿ.ಎನ್‍. ಸುಧೀರ್, ಸಂತೋಷ್‍ ಮುಗ್ರಹಳ್ಳಿ, ಸುಂದರೇಶ್, ಎನ್.ಕೆ. ಗೀತಾ, ಡಿ.ದುಗ್ಗಯ್ಯ, ಬಿ.ಎನ್. ಶರತ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.