ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮುಳ್ಳಯ್ಯನಗಿರಿಯಲ್ಲಿ ಪಾರ್ಕಿಂಗ್ ತಾಣ: ಜಾಗ ಅಂತಿಮ ಮಾಡುವುದೇ ಬಾಕಿ!

ಕೈಮರ–ಗಿರಿ ರಸ್ತೆಯಲ್ಲಿ ಮಠದ ಜಾಗ ಪಡೆಯಲು ಮಾತುಕತೆ
Published : 3 ಜೂನ್ 2025, 7:27 IST
Last Updated : 3 ಜೂನ್ 2025, 7:27 IST
ಫಾಲೋ ಮಾಡಿ
0
ಮುಳ್ಳಯ್ಯನಗಿರಿಯಲ್ಲಿ ಪಾರ್ಕಿಂಗ್ ತಾಣ: ಜಾಗ ಅಂತಿಮ ಮಾಡುವುದೇ ಬಾಕಿ!

ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು –ಸಂಗ್ರಹ ಚಿತ್ರ

ಚಿಕ್ಕಮಗಳೂರು: ಮಳೆಗಾಲ ಬಂದರೆ ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯ ವೀಕ್ಷಣೆಗೆ ಪ್ರವಾಸಿಗರು ಮುಗಿ ಬೀಳುವುದು ಸಾಮಾನ್ಯ. ವಾಹನ ದಟ್ಟಣೆ ನಿಯಂತ್ರಿಸಲು ಗಿರಿಯ ಬುಡದಲ್ಲಿ ವಾಹನ ನಿಲುಗಡೆ ತಾಣ ನಿರ್ಮಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಜಾಗ ಅಂತಿಮಗೊಳಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ.

ADVERTISEMENT
ADVERTISEMENT

ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಗಿರಿ ಏರುತ್ತಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ. ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರು ಪರದಾಡುತ್ತಿದ್ದು, ನಿಯಂತ್ರಿಸುವ ಕೆಲಸ ಪೊಲೀಸರನ್ನೂ ಹೈರಾಣಾಗಿಸಿದೆ.

ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ವಾಹನ ದಟ್ಟಣೆ ನಿರ್ವಹಣೆ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ ಖಾಸಗಿ ವಾಹನಗಳು ಗಿರಿ ಏರುವುದನ್ನು ನಿಯಂತ್ರಿಸಲು ಕೆಳ ಭಾಗದಲ್ಲೇ ವಾಹನ ನಿಲುಗಡೆ ತಾಣ ನಿರ್ಮಿಸುವ ಪ್ರಸ್ತಾಪ ಹತ್ತು ವರ್ಷಗಳಿಂದ ಜಿಲ್ಲಾಡಳಿತದ ಕಡತಗಳಲ್ಲೇ ಉಳಿದುಕೊಂಡಿದೆ. 

ಗಿರಿಭಾಗಕ್ಕೆ ಎಲ್ಲಾ ವಾಹನಗಳು ಒಟ್ಟಿಗೆ ಹೋಗಲು ಅವಕಾಶ ನೀಡದೆ ನಿರ್ದಿಷ್ಟ ಸಂಖ್ಯೆ ನಿಗದಿಪಡಿಸಿ ಅವು ವಾಪಸ್ ಬಂದ ಬಳಿಕ ಬೇರೆ ವಾಹನಗಳನ್ನು ಬಿಡುವುದು ಯೋಜನೆಯ ಉದ್ದೇಶ. ಆದರೆ, ಅಲ್ಲಿಯ ತನಕ ಕಾಯಲು ವಾಹನ ನಿಲುಗಡೆಗೆ ಕೆಳಭಾಗದಲ್ಲಿ ಬೇರೆ ಜಾಗ ಇಲ್ಲ. ಒಂದಿಲ್ಲೊಂದು ತೊಡಕಿನಿಂದ ವಾಹನ ನಿಲುಗಡೆ ತಾಣ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ.

ADVERTISEMENT

ಕೈಮರ–ಗಿರಿ ರಸ್ತೆಯಲ್ಲಿ ಆದಿಚುಂಚನಗಿರಿ ಮಠದ ಜಾಗ ಪಡೆದು ಅಲ್ಲಿ ವಾಹನ ನಿಲುಗಡೆ ತಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ರಸ್ತೆ ಬದಿಯಲ್ಲಿ 16 ಜಮೀನು ಇದ್ದು, ಅಷ್ಟೂ ಜಾಗ ಪಡೆದುಕೊಂಡರೆ ವಾಹನ ನಿಲುಗಡೆ ತಾಣ ಸೇರಿ ಪ್ರವಾಸಿಗರಿಗೆ ಬೇಕಿರುವ ಮೂಲಸೌಕರ್ಯ ಒದಗಿಸಲು ಸಾಧ್ಯವಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಮಠದೊಂದಿಗೆ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈಗಿರುವ ಮಠದ ಜಾಗದಷ್ಟೇ ಮೌಲ್ಯದ ಪರ್ಯಾಯ ಜಾಗವನ್ನು ಮಠಕ್ಕೆ ನೀಡಬೇಕಿದೆ. ರಸ್ತೆ ಬದಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತವಾದ ಜಾಗ ನೀಡಿದರೆ ಈ ಜಾಗ ನೀಡಲು ಮಠ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಜಾಗ ಹುಡುಕಾಟ ನಡೆದಿದ್ದು, ರಸ್ತೆ ಬದಿಯಲ್ಲಿ ಜಾಗ ಸಿಗದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಗಾಲ್ಫ್‌ ಕ್ಲಬ್‌ ರಸ್ತೆಯಲ್ಲಿ 12ರಿಂದ 15 ಎಕರೆ ಸರ್ಕಾರಿ ಜಾಗ ಇದ್ದು, ಈ ಜಾಗವನ್ನು ಮಠಕ್ಕೆ ಪರ್ಯಾಯ ಭೂಮಿಯಾಗಿ ಕೊಡಲು ಅವಕಾಶ ಇದೆ. ಆದರೆ, ಅದಕ್ಕೆ ಮಠದಿಂದ ಅಷ್ಟೇನು ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಸಾರ್ವಜನಿಕ ಅನುಕೂಲಕ್ಕೆ ವಾಹನ ನಿಲುಗಡೆ ತಾಣ ನಿರ್ಮಿಸಬೇಕಿರುವುದರಿಂದ ಮಠದ ಒಪ್ಪಿಗೆ ಪಡೆಯಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ.

ಜಾಗ ಅಂತಿಮವಾದರೆ ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕಿಂಗ್ ತಾಣ ಅಭಿವೃದ್ಧಿಸುವ ಯೋಜನೆ ಸಿದ್ಧವಿದೆ. ಜಾಗವನ್ನು ಈ ಯೋಜನೆಗೆ ಮೀಸಲಿರಿಸಿದರೆ ಉಳಿದ ಕೆಲಸ ತ್ವರಿತವಾಗಿ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಳ್ಳಯ್ಯಗಿರಿ ರಸ್ತೆ: ಮಳೆ ತೊಡಕು ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ತನಕ ಕಾಂಕ್ರಿಟ್‌ ರಸ್ತೆ ನಿರ್ಮಿಸುವ ಕಾಮಗಾರಿಗೆ ಮಳೆ ತೊಡಕಾಗಿ ಕಾಡಿದ್ದು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಎರಡು ತಡೆಗೋಡೆ ನಿರ್ಮಾಣವಾಗಿದ್ದು ಇನ್ನೂ ಒಂದು ತಡೆಗೋಡೆ ನಿರ್ಮಾಣವಾಗಬೇಕಿದೆ. ಬಳಿಕ ಕಾಂಕ್ರಿಟ್‌ ರಸ್ತೆ ಮತ್ತು ಡಾಂಬರ್ ರಸ್ತೆ ನಿರ್ಮಾಣವಾಗಬೇಕಿದೆ. ಕಾಮಗಾರಿ ಸ್ಥಗಿತಗೊಂಡಿರುವುದರಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 8ರಿಂದ 10 ದಿನ ಮಳೆ ಸಂಪೂರ್ಣ ಬಿಡುವು ನೀಡಿದರೆ ಮಾತ್ರ ಕಾಮಗಾರಿ ಆರಂಭಿಸಬಹುದು. ಸದ್ಯಕ್ಕೆ ಮಳೆ ಅಷ್ಟು ಬಿಡುವುದು ನೀಡುವ ಸಾಧ್ಯತೆ ಕಡಿಮೆ. ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0